ಮುಂಬೈ:ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಎಂ.ಎಸ್.ಧೋನಿ ಮತ್ತೆ ಸದ್ದು ಮಾಡಿದ್ದಾರೆ. ವಯಸ್ಸು 40 ಆಗಿದ್ದರೂ ತಾನು ಇನ್ನು ಗ್ರೇಟ್ ಫಿನಿಶರ್ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಈ ಹಿಂದಿನ ಐಪಿಎಲ್‍ಗಲ್ಲಿ ಧೋನಿಗೆ ವಯಸ್ಸಾಯ್ತು ಅಂತಾ ಟೀಕಿಸಿದವರೆ ಹೆಚ್ಚು. ಐಪಿಎಲ್‍ನಿಂದಲೂ ನಿವೃತ್ತಿ ಹೊಂದುವಂತೆ ಕಾಲೆಳೆದಿದ್ದರು. ಇದೀಗ ಮತ್ತೊಮ್ಮೆ ಫಿನಿಶರ್ ಪಾತ್ರವನ್ನು ನಿಭಾಯಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ ಮಾಹಿ.
ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ 155 ರನ್ ಕಲೆ ಹಾಕಿತು. ಚೆನ್ನೈ ತಂಡದ ಆರಂಭ ಉತ್ತಮವಾಗಿರಲಿಲ್ಲ.
ಕೊನೆಯಲ್ಲಿ 18 ಎಸೆತಗಳಲ್ಲಿ 42 ರನ್ ಬೇಕಿತ್ತು. ಚೆನ್ನೈ ಸೋಲುತ್ತೆ ಎಂದೇ ಎಲ್ಲರೂ ಭಾವಿಸಿದ್ದರು. ಆಗ ಕ್ರೀಸ್‍ನಲ್ಲಿದ್ದ ಧೋನಿ ಈ ಲೆಕ್ಕಾಚಾರಗಳನ್ನೆಲ್ಲಾ ತಲೆಕೆಳಗೆ ಮಾಡಿದರು.
ಧೋನಿ-ಪ್ರಿಟೋರಿಯಸ್ ಬ್ಯಾಟಿಂಗ್
18ನೇ ಓವರ್‍ನಲ್ಲಿ ಪ್ರಿಟೋರಿಯಸ್ ಒಂದು ಸಿಕ್ಸರ್ ಸಿಡಿಸಿದರು. ಧೊನಿ ಒಂದು ಬೌಂಡರಿ ಹೊಡೆದರು. ಆ ಓವರ್‍ನಲ್ಲಿ 14 ರನ್ ಬಂತು. ಪಂದ್ಯ ಗೆಲ್ಲಲು 29 ರನ್ ಬೆಕಿತ್ತು. ಆಗ 19ನೇ ಓವರ್‍ನಲ್ಲಿ ಪ್ರಿಟೋರಿಯಸ್ 2 ಬೌಂಡರಿಯೊಂದಿಗೆ ಒಟ್ಟು 11 ರನ್ ಗಳಿಸಿದರು. ಕೊನೆಯ ಓವರ್‍ನಲ್ಲಿ 17 ರನ್ ಬೇಕಿತ್ತು.
ಕೊನೆಯ ಓವರ್‍ನಲ್ಲಿ ಚೆನ್ನೈ ತಂಡಕ್ಕೆ ಗೆಲ್ಲಲು 17ರನ್ ಬೇಕಿತ್ತು. ಕೊನೆಯ ಓವರ್ ಹಾಕಲು ನಾಯಕ ರೋಹಿತ್ ಶರ್ಮಾ ಚೆಂಡನ್ನು ಎಡಗೈ ವೇಗಿ ಜಯದೇವ್ ಉನಾದ್ಕತ್‍ಗೆ ಕೊಟ್ಟರು. ಮೊದಲ ಎಸೆತದಲ್ಲಿ ಸ್ಟ್ರೈಕ್‍ನಲ್ಲಿದ್ದ ಪ್ರಟೋರಿಯಸ್ ಅವರನ್ನು ಎಲ್‍ಬಿ ಬಲಗೆ ಬೀಳಿಸುವಲ್ಲಿ ಜಯದೇವ್ ಉನಾದ್ಕತ್ ಯಶಸ್ವಿಯಾದರು.
ನಂತರ ಬಂದ ಡ್ವೇನ್ ಬ್ರಾವೋ ಒಂದು ರನ್ ತೆಗೆದು ಧೋನಿಗೆ ಸ್ಟ್ರೈಕ್ ಬಿಟ್ಟುಕೊಟ್ಟರು.
ಸ್ಟ್ರೈಕ್‍ಗೆ ಬಂದ ಧೋನಿ 3ನೇ ಎಸೆತವನ್ನು ಸಿಕ್ಸರ್‍ಗೆ ಅಟ್ಟಿದರು. 4ನೇ ಎಸೆತವನ್ನು ಬೌಂಡರಿ ಹೊಡೆದರು.
5ನೇ ಎಸೆತದಲ್ಲಿ 2ರನ್ ಗಳಿಸಿದರು. ನಿರ್ಣಾಯಕ ಕೊನೆಯ ಎಸೆತದಲ್ಲಿ 4 ರನ್ ಬೇಕಿತ್ತು. ಲೋ ಫುಲ್‍ಟಾಸ್ ಹಾಕಿದ ಉನಾದ್ಕತ್ ಎಸೆತವನ್ನು ಧೋನಿ ಬೌಂಡರಿಗಟ್ಟಿ ತಂಡವನ್ನು ಜಯದ ದಡ ಸೇರಿಸಿದರು.
ಇದರೊಂದಿಗೆ ಧೋನಿಯ ಹಳೆ ಆಟಗಳು ಮತ್ತೆ ನೆನಪಿಗೆ ಬಂದವು. ಈಗಲೂ ಬೆಸ್ಟ್ ಫಿನಿಶರ್ ಅನ್ನೋದನ್ನು ಮಹಿ ಮತ್ತೆ ಸಾಬೀತು ಮಡಿದರು.