ಮುಂಬೈ: ಇಂದು ಐಪಿಎಲ್‍ನಲ್ಲಿ ಎರಡು ಪಂದ್ಯಗಳು ನಡೆಯಲಿವೆ. ಮೊದಲ ಕದನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಗುಜರಾತ್ ತಂಡವನ್ನು ಎದುರಿಸಿದರೆ ಮತ್ತೊಂದು ಐವೋಲ್ಟೇಜ್ ಪಂದ್ಯದಲ್ಲಿ ಆರ್‍ಸಿಬಿ ಸನ್‍ರೈಸರ್ಸ್ ತಂಡವನ್ನು ಎದುರಿಸಲಿದೆ.
ಶನಿವಾರ ಬ್ರಾಬೊರ್ನ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್‍ಸಿಬಿ ಹಾಗೂ ಸನ್‍ರೈಸರ್ಸ್ ನಡುವೆ ನಡೆಯಲಿದೆ. ಆರ್‍ಸಿಬಿ ತಂಡ 7 ಪಂದ್ಯಗಳಿಂದ 5 ಪಂದ್ಯಗಳನ್ನು ಗೆದ್ದು 2ರಲ್ಲಿ ಸೋತಿದ್ದು 10 ಅಂಕ ಪಡೆದಿದೆ. ಸನ್‍ರೈಸರ್ಸ್ ತಂಡ 6 ಪಂದ್ಯಗಳಿಂದ 4ರಲ್ಲಿ ಗೆದ್ದು 2ರಲ್ಲಿ ಸೋತು ಒಟ್ಟು 8 ಅಂಕ ಸಂಪಾದಿಸಿದೆ.
ಆರ್‍ಸಿಬಿಗೆ ಸನ್‍ರೈಸರ್ಸ್ ಕಠಿಣ ಸವಾಲಾಗಿದೆ ಯಾಕಂದ್ರೆ ಕೇನ್ ವಿಲಿಯಮ್ಸನ್ ಪಡೆ ಮೊದಲೆರಡು ಪಂದ್ಯಗಳನ್ನು ಸೋತು ನಂತರ ಸತತ ನಾಲ್ಕು ಪಂದ್ಯಗಳನ್ನು ಗೆದ್ದು 5ನೇ ಸ್ಥಾನದಲ್ಲಿದೆ. ಈ ಪಂದ್ಯವನ್ನು ಗೆದ್ದರೆ ಅರ್‍ಸಿಬಿ ಮೊದಲ ಸ್ಥಾನಕ್ಕೇರಲಿದೆ.
ಆರ್‍ಸಿಬಿ ತಂಡದಲ್ಲಿ ನಾಯಕ ಫಾಫ್ ಡುಪ್ಲೆಸಿಸ್ ಫಾರ್ಮ್‍ಗೆ ಮರಳಿದ್ದಾರೆ. ಆದರೆ ಸಹ ಆರಂಭಿಕ ಬ್ಯಾಟರ್ ಅನೂಜ್ ರಾವತ್, ವಿರಾಟ್ ಕೊಹ್ಲಿ ರನ್ ಗಳಿಸದೇ ಇರುವುದು ಚಿಂತೆಗೀಡು ಮಾಡಿದೆ.
ವಿರಾಟ್ ವಿಕೆಟ್ ಪಡೆಯುವುದೇ ನನ್ನ ಗುರಿ ಎಂದು ವೇಗಿ ಉಮ್ರಾನ್ ಮಲ್ಲಿಕ್ ಸವಾಲು ಹಾಕಿದ್ದಾರೆ. ಇವರಿಬ್ಬರ ಕದನ ಕುತೂಹಲ ಮೂಡಿಸಿದೆ.
ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‍ವೆಲ್ ಹಾಗೂ ಪ್ರಭುದೇಸಾಯಿ ತಂಡದ ಮೊತ್ತ ಹೆಚ್ಚಿಸುತ್ತಿದ್ದಾರೆ. ದಿನೇಶ್ ಕಾರ್ತಿಕ್‍ಗೆ ವೇಗಿಗಳಾದ ಉಮ್ರಾನ್ ಮಲ್ಲಿಕ್ ಹಾಗೂ ಭುವನೇಶ್ವರ್ ಕುಮಾರ್ ಸವಾಲಾಗಲಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ವೇಗಿ ಜೋಶ್ ಹೆಜ್ಲವುಡ್ ತಂಡದ ಅಸ್ತ್ರವಾಗಿದ್ದಾರೆ. ಕಳೆದ ಪಂದ್ಯದಲ್ಲಿ ನಾಲ್ಕು ಪಡೆದು ಮಿಂಚಿದ್ದರು. ಇನ್ನುಳಿದ ಬೌಲರ್‍ಗಳಾದ ಹರ್ಷಲ್ ಪಟೇಲ್, ಮೊಹ್ಮದ್ ಸಿರಾಜ್ ಹಾಗೂ ವನಿಂದು ಹಸರಂಗ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರರಾಗಿದ್ದಾರೆ.
ಬ್ಯಾಟಿಂಗ್, ಬೌಲಿಂಗ್‍ನಲ್ಲಿ ಯಶಸ್ಸು ಕಂಡ ಕೇನ್ ಪಡೆ
ಸನ್‍ರೈಸರ್ಸ್ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಅಭಿಷೇಕ್ ಶರ್ಮಾ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಿ ಕೇನ್ ಪಡೆ ದೊಡ್ಡ ಯಶಸ್ಸು ಕಂಡಿದೆ. ನಾಯಕ ಕೇನ್ ವಿಲಿಯಮ್ಸನ್ ರನ್ ಮಳೆ ಸುರಿಸುತ್ತಿದ್ದಾರೆ. ರಾಹುಲ್ ತ್ರಿಪಾಠಿ ಕಳೆದ ಪಂದ್ಯದಲ್ಲಿ 37 ಎಸೆತದಲ್ಲಿ 71 ರನ್ ಗಳಿಸಿ ಸೋಟಕ ಬ್ಯಾಟಿಂಗ್ ಮಾಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಏಡಿನ್ ಮಾರ್ಕ್‍ರಾಮ್ ಹಾಗೂ ನಿಕೊಲೊಸ್ ಪೂರಾನ್ ಗೇಮ್ ಫಿನಿಶರ್‍ಗಳಾಗಿದ್ದಾರೆ.
ಬ್ಯಾಟಿಂಗ್‍ನಷ್ಟೆ ಬೌಲಿಂಗ್ ಕೂಡ ಅತ್ಯದ್ಭುತವಾಗಿದೆ. ಉಮ್ರಾನ್ ಮಲ್ಲಿಕ್, ಭುವನೇಶ್ವರ್ ಕುಮಾರ್ ಸ್ಥಿರತೆ ಆರ್‍ಸಿಬಿ ಬ್ಯಾಟರ್‍ಗಳಿಗೆ ಸವಾಲಾಗಿದೆ. ಯಾರ್ಕರ್ ಸ್ಪೆಶಲಿಸ್ಟ್ ನಟರಾಜನ್ ಹಾಗೂ ಮಾರ್ಕೊ ಜೆನೆಸೆನ್ ಕಂಟಕವಾಗಲಿದ್ದಾರೆ.
ಆರ್‍ಸಿಬಿ ತಂಡ: ಅನೂಜ್ ರಾವತ್, _ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿಘಿ, ಗ್ಲೇನ್ ಮ್ಯಾಕ್ಸ್‍ವೆಲ್, ಸುಯಾಶ್ ಪ್ರಭುದೇಸಾಯಿ, ಶಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ವನಿಂದು ಹಸರಂಗ, ಜೋಶ್ ಹೆಜ್ಲವುಡ್, ಮೊಹ್ಮದ್ ಸಿರಾಜ್.
ಸನ್‍ರೈಸರ್ಸ್: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ನಾಯಕ), ರಾಹುಲ್ ತ್ರಿಪಾಠಿ, ಏಡಿನ್ ಮಾರ್ಕ್‍ರಾಮ್, ನಿಕೊಲೊಸ್ ಪೂರಾನ್,ಶಶಾಂಕ್ ಸಿಂಗ್, ಜಗದೀಶ ಸುಚಿತ್, ಭಿವನೇಶ್ವರ್ ಕುಮಾರ್, ಮರ್ಕೊ ಜೆನೆಸೆನ್, ಟಿ.ನಟರಾಜನ್, ಉಮ್ರಾನ್ ಮಲ್ಲಿಕ್.