ಡಿ.ಕೆ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಗಳೋ ಅಥವಾ ಹೈಕಮಾಂಡ್ ರಬ್ಬರ್ ಸ್ಟ್ಯಾಂಪೋ?: ಆರ್.ಅಶೋಕ್ ವ್ಯಂಗ್ಯ

Political News: ನಗರಾಭಿವೃದ್ಧಿ ಸಚಿವ ಸ್ಥಾನ ಸಿಗದ ಕಾರಣ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿದ್ದು, ಈ ಬಗ್ಗೆ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

ಮಂತ್ರಿ ಮಾಡಲಿಲ್ಲ ಅಂತ ಪ್ರಮಾಣ ವಚನ ಸಮಾರಂಭದಿಂದ ಅರ್ಧದಲ್ಲೇ ಎದ್ದು ಹೋದರು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್. ಕೊಟ್ಟ ಮಾತಿನಂತೆ ಹೇಳಿದ ಖಾತೆ ಕೊಡಲಿಲ್ಲ ಅಂತ ಬಹಿರಂಗವಾಗಿ ಸುದ್ದಿಗೋಷ್ಠಿಯಲ್ಲಿ ರಾಜೀನಾಮೆ ಕೊಟ್ಟರು ಸಚಿವ ರಾಮಲಿಂಗಾ ರೆಡ್ಡಿ. ನನ್ನ ಹಿರಿತನಕ್ಕೆ, ಸಾಮರ್ಥ್ಯಕ್ಕೆ ತಕ್ಕಂತ ಖಾತೆ ಬದಲಾವಣೆ ಮಾಡುವವವರೆಗೂ ಕೊಟ್ಟ ಖಾತೆಯ ಚಾರ್ಜ್ ತೆಗೆದುಕೊಳ್ಳುವುದಿಲ್ಲ ಎಂದರು ಸಚಿವ ಕೆ.ಹೆಚ್.ಮುನಿಯಪ್ಪ. ಇಷ್ಟಾದರೂ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿದೆ ಎಂದು ಕನ್ನಡಿಗರು ನಂಬಬೇಕಂತೆ! ಕಾಂಗ್ರೆಸ್ ಪಕ್ಷಕ್ಕೆ ವೋಟು ಹಾಕಿದ ತಪ್ಪಿಗೆ ಕನ್ನಡಿಗರು ಇನ್ನೂ ಏನೇನು ನೋಡಬೇಕೋ ಆ ದೇವರೇ ಬಲ್ಲ! ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.

ವಿಕೆಟ್ಟುಗಳೇನೋ ಬೀಳುತ್ತಿವೆ… ಇನ್ನಷ್ಟು ವಿಕೆಟ್ಟಿಗಳು ಬೀಳುವ ಲಕ್ಷಣಗಳೂ ಇವೆ…. ಆದರೆ ಈ ವಿಕೆಟ್ಟುಗಳನ್ನು ಉರುಳಿಸುತ್ತಿರುವ ಆ ಸಿದ್ಧಹಸ್ತ ಸ್ಪಿನ್ ಬೌಲರ್ ಯಾರು? ಫೀಲ್ಡಿಂಗ್ ಸೆಟ್ ಮಾಡಿರುವ ನಾಯಕ ಯಾರು? ಆ ಸ್ಪಿನ್ ಬೌಲರ್ ಕೈಚಳಕದಿಂದ ಅವಧಿಗೂ ಮುನ್ನವೇ ಡಿ.ಕೆ.ಶಿವಕುಮಾರ್ ಸರ್ಕಾರ ಆಲೌಟ್ ಆದರೂ ಅಚ್ಚರಿ ಇಲ್ಲ! ಎಂದು ಅಶೋಕ್ ಭವಿಷ್ಯ ನುಡಿದಿದ್ದಾರೆ.

ಒಬ್ಬ ಹಿರಿಯ ಸಚಿವರಿಗೆ ತಾವೇ ಕೊಟ್ಟಿರುವ ಮಾತಿನಂತೆ ಒಂದು ಖಾತೆ ಹಂಚಿಕೆ ಮಾಡಲೂ ಸ್ವಾತಂತ್ರ್ಯವಿಲ್ಲದ ದುರ್ಬಲ, ಅಸಹಾಯಕ ಮುಖ್ಯಮಂತ್ರಿಯಿಂದ ರಾಜ್ಯದ ಜನತೆ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ಮಾತು ಕೊಡುವುದು ನೀವು, ಆದರೆ ಆದೇಶ ದೆಹಲಿ ಹೈಕಮಾಂಡ್ ಅಣತಿಯೇ? ನಿಮ್ಮ ಹೇಳಿಕೆಯೇ ನಿಮ್ಮ ಅಸಹಾಯಕತೆಗೆ ಸಾಕ್ಷಿ.

ಒಬ್ಬ ಹಿರಿಯ ಸಚಿವರಿಗೆ ಕೊಟ್ಟ ಮಾತನ್ನೇ ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ, ರಾಜ್ಯದ ಜನರಿಗೆ ಕೊಟ್ಟ ಭರವಸೆಗಳನ್ನು ಹೇಗೆ ಉಳಿಸಿಕೊಳ್ಳುತ್ತೀರಿ? ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವರು ವೀರರೂ ಅಲ್ಲ, ಧೀರರೂ ಅಲ್ಲ. ಆದರೆ ಕಾಂಗ್ರೆಸ್ ಹೈಕಮಾಂಡ್ ಡಿ.ಕೆ.ಶಿವಕುಮಾರ್ ಅವರಿಗೆ ಕುಂಟುವ ಕುದುರೆ ಕೊಟ್ಟು ಕೈ ಕಟ್ಟಿಹಾಕಿದೆ ಎಂದು ಅಶೋಕ್ ತಮಾಷೆ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್ ಅವರಿಗೆ ಕಿಂಚಿತ್ತಾದರೂ ಸ್ವಾಭಿಮಾನವಿದ್ದರೆ, ಆತ್ಮಸಾಕ್ಷಿ ಅನ್ನುವುದಿದ್ದರೆ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು.

ಪ್ರಮಾಣವಚನ ಸ್ವೀಕಾರದ ವೇಳೆ ಡಿ. ಕೆ. ಶಿವಕುಮಾರ್ ಅವರ ಸಂವಿಧಾನದ ಪ್ರತಿ ಹಿಡಿದುಕೊಂಡಿದ್ದರು. ಆದರೆ ನೈಜ ಅಧಿಕಾರವೇ ಅವರಿಗೆ ಸಿಗಲಿಲ್ಲ. ನೂತನ ಸಚಿವ ಸಂಪುಟದಲ್ಲಿ ಡಿಕೆಶಿ ಬಣದ ಒಬ್ಬರಿಗೂ ಸ್ಥಾನ ಸಿಕ್ಕಿಲ್ಲ. ಮುಖ್ಯಮಂತ್ರಿಗೆ ಸಚಿವರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವೂ ಇಲ್ಲ. ರಾಜ್ಯ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಯೂ ಇಲ್ಲ, ಮಹಿಳೆಯರಿಗೆ ಕಾಂಗ್ರೆಸ್ ಬಗೆದ ದ್ರೋಹವಿದು ಎಂದು ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

About The Author