Movie News: ಹಲವು ವರ್ಷಗಳ ಹಿಂದೆ ಬಿಜೆಪಿ ಪ್ರಚಾರಕ್ಕೆಂದು ತೆರಳುತ್ತಿದ್ದ ಸೌಂದರ್ಯ ಅವರಿದ್ದ ವಿಮಾನ ಪತನವಾಗಿ, ಸೌಂದರ್ಯ ಸಾವನ್ನಪ್ಪಿದ್ದರು. ಈಗ ಕೆಲ ದಿನಗಳಿಂದ ಸೌಂದರ್ಯ ಸಾವಿನ ಹಿಂದೆ ನಟ ಮೋಹನ್ ಬಾಬು ಕೈವಾಡವಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಸೌಂದರ್ಯ ಅವರದ್ದು ಅಪಘಾತವಲ್ಲ, ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಖಮ್ಮಂ ಜಿಲ್ಲೆಯ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಶಂಶಾಬಾದ್‌ನ ಜಲ್ಲಪಲ್ಲಿ ಗ್ರಾಮದಲ್ಲಿ 6 ಎಕರೆ ಭೂಮಿಯನ್ನು ನಟ ಮೋಹನ್ ಬಾಬುಗೆ ನೀಡಲು ಸೌಂದರ್ಯ ಮತ್ತು ಆಕೆಯ ಸಹೋದರ ನಿರಾಕರಿಸಿದ್ದರು. ಇದು ಸೌಂದರ್ಯ ಮತ್ತು ಮೋಹನ್ ಬಾಬು ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಇದೇ ಆಕೆಯ ಕೊಲೆಗೆ ಕಾರಣ ಎಂದು ಉಲ್ಲೇಖಿಸಲಾಗಿದೆ.
ಈ ಬಗ್ಗೆ ಯಾವಾಗ ದೂರು ದಾಖಲಾಯಿತೋ, ಆಗ ಸೌಂದರ್ಯ ಪತಿ ಜಿ.ಎಸ್.ರಘು ಅವರು ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ತಿಳಿದ ಮಟ್ಟಿಗೆ ನಾನು ಮತ್ತು ಮೋಹನ್ ಬಾಬು ಯಾವುದೇ ಆಸ್ತಿ ವ್ಯವಹಾರ ಹೊಂದಿಲ್ಲ. ಸೌಂದರ್ಯ ಅವರ ಮರಣದ ಬಳಿಕವೂ ನಾನು ಮೊಹನ್ ಬಾಬು ಉತ್ತಮ ಗೆಳೆಯರಾಗಿದ್ದೇವೆ. ನನ್ನ ಅತ್ತೆ, ಭಾವ ಕೂಡ ಮೋಹನ್ ಬಾಬು ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸದ್ಯಕ್ಕೆ ನಾನು ಅವರ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ರಘು ಹೇಳಿದ್ದಾರೆ.
ಅಲ್ಲದೇ, ಇದೆಲ್ಲ ಆಧಾರ ರಹಿತ ಆರೋಪಗಳು. ಸುಳ್ಳು ಸುದ್ದಿ ಹಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂಥ ಸುದ್ದಿಗಳನ್ನು ಪ್ರಕಟಿಸಬೇಡಿ ಎಂದು ಮನವಿ ಮಾಡಿದ್ದಾರೆ.