ಶಿಡ್ಲಘಟ್ಟ: ಶಿಡ್ಲಘಟ್ಟ ಇಂದು ಅಕ್ಷರಶಃ ಕೇಸರಿಮಾಯವಾಗಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ ಅವರು ಇಂದು ಶಿಡ್ಲಘಟ್ಟದ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರ ಗೌಡರ ಪರವಾಗಿ ಪ್ರಚಾರ ನಡೆಸಿದರು. ಸಂಜೆ 4 ಗಂಟೆಗೆ ಶಿಡ್ಲಘಟ್ಟದ ನೆಹರು ಕ್ರೀಡಾಂಗಣಕ್ಕೆ ಹೆಲಿಕಾಪ್ಟಾರ್ ಮೂಲಕ ಆಗಮಿಸಿದ ನಡ್ಡಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್, ಅರುಣ್ ಸಿಂಗ್ ಬಿಜೆಪಿ ರಾಜ್ಯ ಉಸ್ತುವಾರಿ, ಚಿಕ್ಕಬಳ್ಳಾಪುರದ ಶಾಸಕರು ಮತ್ತು ಸಚಿವರಾದ ಸುಧಾಕರ್, ಸೀಕಲ್ ರಾಮಚಂದ್ರ ಗೌಡ ಮತ್ತು ಮಾಜಿ ಶಾಸಕರಾದ ಎಂ ರಾಜಣ್ಣ ಅವರು ಶಾಲು ಹೊದಿಸಿ, ಹೂ ಗುಚ್ಛ ನೀಡಿ ಸ್ವಾಗತಿಸಿದರು.
ಬೆಳಿಗ್ಗೆಯಿಂದಲೇ ಬಿಜೆಪಿ ಕಚೇರಿ ಸೇವಾಸೌಧದಲ್ಲಿ ಸಂಭ್ರಮ ಮನೆಮಾಡಿತ್ತು. ಸಾಂಸ್ಕೃತಿಕ ವಾಗಿ ನಡ್ಡಾ ಅವರನ್ನು ಸ್ವಾಗತಿಸಲು ಬ್ಯಾಂಡ್, ತಮಟೆ, ಡೊಳ್ಳು, ವೀರಗಾಸೆ, ಪಟಾಕಿ ಸಿಡಿಸಿ ಮತ್ತು 1008 ಕಳಸಗಳನ್ನು ಹೊತ್ತ ಮಹಿಳೆಯರಿಂದ ನಡ್ಡಾ ಅವರನ್ನು ಕಚೇರಿಗೆ ಸ್ವಾಗತಿಸಲಾಯಿತು. ಕೋಲಾರದ ಸಂಸದರಾದ ಮುನಿಸ್ವಾಮಿ ಅವರು ಈ ವೇಳೆ ಜೊತೆಯಾದರು.
ಕಚೇರಿಗೆ ಆಗಮಿಸದ ನಡ್ಡಾ ಅವರು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ರಾಮಚಂದ್ರ ಗೌಡರ ಕಾರ್ಯವೈಖರಿಯ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು. ನಂತರ ಸಾವಿರಾರು ಕಾರ್ಯಕರ್ತರು, ಪದಾಧಿಕಾರಿಗಳು, ಅಭಿಮಾನಿಗಳು ಮತ್ತು 1008 ಕಳಸಗಳ ಮೂಲಕ ನಡ್ಡಾ ಅವರನ್ನು ತೆರೆದ ವಾಹನದ ಮೂಲಕ ಸೇವಾಸೌಧದಿಂದ ಕೋಟೆ ಸರ್ಕಲ್ ವರೆಗೂ ಮೆರವಣಿಗೆ ಮಾಡಿದರು, ಭಾರಿ ಜನಸ್ತೋಮ ಸೇರಿದ್ದ ಮೆರವಣಿಗೆಯಲ್ಲಿ ನಾಯಕರೆಲ್ಲರೂ ಜನರಿಗೆ ನಮಸ್ಕರಿಸಿ ಬಿಜೆಪಿಗೆ ಮತ ನೀಡುವಂತೆ ಕೇಳಿಕೊಂಡರು.
ಈ ವೇಳೆ ಮಾತನಾಡಿದ ಬಿಜೆಪಿಯ ರಾಷ್ಟ್ರೀಯ ನಡ್ಡಾ ಅವರು ಸೀಕಲ್ ರಾಮಚಂದ್ರ ಗೌಡ ಮತ್ತು ಸುಧಾಕರ್ ಅವರಿಗೆ ಮತ ನೀಡಿ ಗೆಲ್ಲಿಸಿ ಎಂದರು. ಈ ಚುನಾವಣೆ, ನಂದಲ್ಲ, ರಾಮಚಂದ್ರ ಗೌಡರದ್ದು ಅಲ್ಲ ನಿಮ್ಮದು ನಿಮ್ಮ ವಿಕಾಸಕ್ಕೆ ನೀವೇ ಆರಿಸಿಕೊಳ್ಳುವಂತಹ , ಉಪಯೋಗವನ್ನು ಪಡೆದುಕೊಳ್ಳುವಂತಹ ಒಂದು ಚುನಾವಣೆ. ವಿಕಾಸದಲ್ಲಿ ತುಂಬಾ ದೂರ ನಾವು ಪ್ರಯಾಣಿಸಬೇಕಿದೆ. ನಮ್ಮ ಡಬ್ಬಲ್ ಎಂಜಿನ್ ಸರ್ಕಾರವನ್ನ ಡಬ್ಬಲ್ ಸ್ಪೀಡ್ ಅಲ್ಲಿ ಮತ್ತೆ ಚಲಾಯಿಸೋಣ. ನಮ್ಮ ಗುರಿ ಸ್ಪಷ್ಟ. ಕೇಂದ್ರದಲ್ಲಿ ನರೇಂದ್ರಮೋದಿ ಇರೋವರೆಗೂ ಕರ್ನಾಟಕದ ಅಭಿವೃದ್ಧಿ ಖಂಡಿತ ಸಾಧ್ಯ ಎಂದು ಹೇಳಿದರು.
ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರ ನಿಮ್ಮ ಅಭಿವೃದ್ಧಿಗೆ ಕೆಲಸ ಮಾಡಿದೆ. ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೆ ಕಳುಹಿಸಿದೆ. ಭಾರತೀಯ ಜನತಾ ಪಾರ್ಟಿಯ ಬೊಮ್ಮಾಯಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರೋಣ. ದೇಶ ವಿರೋಧಿ ಪಿಎಫ್ಐ ಯನ್ನು ಹೊಡೆದೋಡಿಸಿದ್ದು ನಮ್ಮ ಮೋದಿ ಸರ್ಕಾರ. ಭಯೋತ್ಪಾದಕರನ್ನು ಹೊಡೆದೋಡಿಸಲು ಕಮಲದ ಚಿನ್ಹೆಯನ್ನು ಮತ್ತೆ ಮೇ 10ಕ್ಕೆ ಒತ್ತಬೇಕು. ಬೊಮ್ಮಾಯಿ ಅವರು 4% ರೆಸೆರ್ವಶನ್ ಅನ್ನು ವಿತರಿಸಿದ್ದಾರೆ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು.
ಕೊನೆಯಲ್ಲಿ ಕೆ ಸುಧಾಕರ್ ಮತ್ತು ಸೀಕಲ್ ರಾಮಚಂದ್ರ ಗೌಡರ ಕೈಗಳನ್ನು ಮೇಲೆ ಎತ್ತುವ ಮೂಲಕ ವಿಜಯದ ಸಂಕೇತವನ್ನು ನೀಡಿದರು.