ನವರಾತ್ರಿ ಸಂಭ್ರಮ ಮುಗಿದಿದೆ. ಆಯುಧ ಪೂಜೆಯ ಸಡಗರವೂ ಅಂತ್ಯವಾಗಿದೆ. ಈಗ ಉಳಿದಿರುವುದು ಜಂಬೂಸವಾರಿ. ವಿಶ್ವವಿಖ್ಯಾತ ಮೈಸೂರು ದಸರಾದ ಅತ್ಯಂತ ಆಕರ್ಷಣೆಯ ಜಂಬೂ ಸವಾರಿಗೆ ಚಾಲನೆ ಸಿಕ್ಕಿದೆ. ಲಕ್ಷಾಂತರ ಜನರ ಮಧ್ಯೆ ಜಂಬೂ ಸವಾರಿ ಸಾಗಿದೆ. ತಾಯಿ ಚಾಮಂಡಿಯನ್ನ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಇಟ್ಟು ಮೆರವಣಿಗೆ ನಡೆದಿದೆ. ಸದ್ಯ ನಂತರ ಕುಂಭ ಲಗ್ನದಲ್ಲಿ ಸಂಜೆ 4.42ರಿಂದ 5.06ರೊಳಗಿನ ಶುಭ ಮುಹೂರ್ತದಲ್ಲಿ ಜಂಬೂಸವಾರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. 8ನೇ ಬಾರಿ ಜಂಬೂ ಸವಾರಿ ಉದ್ಘಾಟನೆ ಮಾಡಿದ ಸಿಎಂ ಸಿದ್ದರಾಮಯ್ಯ ಅತಿಹೆಚ್ಚು ಬಾರಿ ಉದ್ಘಾಟಿಸಿದ ಸಿಎಂ ಆಗಿದ್ದಾರೆ.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಗೆ ಸಾಂಸ್ಕೃತಿಕ ಕಲಾತಂಡಗಳು ಮೆರುಗು ನೀಡಿವೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನಂದಿ ಕಂಬಕ್ಕೆ ಪೂಜೆ ಸಲ್ಲಿಸಿದರು. ನಂತರ ಕಲಾತಂಡಗಳು ಬನ್ನಿ ಮಂಟಪದತ್ತ ಹೆಜ್ಜೆಹಾಕಿದವು. ಕಹಳೆ, ವೀರಗಾಸೆ, ಡೊಳ್ಳು ಕುಣಿತದ ಜೊತೆಗೆ ನಿಶಾನೆ ಆನೆ ಗೋಪಿ ನೇತೃತ್ವದ ಮಹೇಂದ್ರ, ಲಕ್ಷ್ಮಿ, ಗಜೇಂದ್ರ, ಪ್ರಶಾಂತ, ಸುಗ್ರೀವ, ಭೀಮ, ಕಂಜನ್, ಏಕಲವ್ಯ ಆನೆಗಳು ಹೆಜ್ಜೆ ಹಾಕಿದವು. ಜೊತೆಗೆ ಜಂಬೂ ಸವಾರಿ ವೇಳೆ ಜನರನ್ನು ಚದುರಿಸಲು ಲಘು ಲಾಠಿ ಪ್ರವಾರ ನಡೆಸಿದ ಘಟನೆಯೂ ನಡೆದಿದೆ.
750 ಕೆಜಿಯ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಲಕ್ಷಾಂತರ ಜನರ ಮಧ್ಯೆ ಗಾಂಭೀರ್ಯದ ಹೆಜ್ಜೆ ಹಾಕುತ್ತಾ ಸಾಗಿದ್ದಾನೆ. ಸತತ 6ನೇ ಬಾರಿಗೆ ಅಂಬಾರಿ ಹೊತ್ತು ಅಭಿಮನ್ಯು ಹೆಜ್ಜೆ ಹಾಕುತ್ತಿದ್ದಾನೆ. ಕುಮ್ಕಿ ಆನೆಗಳಾಗಿ ಕಾವೇರಿ, ರೂಪಾ ಸಾಥ್ ಕೊಟ್ಟಿದ್ದಾರೆ. ಚಿನ್ನದ ಅಂಬಾರಿಯಲ್ಲಿ ವಿಶೇಷ ಅಲಂಕಾರದಲ್ಲಿ ನಾಡದೇವತೆ ಕಂಗೊಳಿಸಿದ್ದಾಳೆ.
ಜಂಬೂ ಸವಾರಿ ಮೆರವಣಿಗೆ ವೀಕ್ಷಣೆಗಾಗಿ ಅಂಬಾವಿಲಾಸ ಅರಮನೆ ಮುಂಭಾಗದಲ್ಲಿ ಮೈಸೂರು ಜಿಲ್ಲಾಡಳಿತದ ವತಿಯಿಂದ ಸುಮಾರು 48 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು. ಅಂಬಾರಿ ಸಾಗುವ ಮಾರ್ಗದ ಉದ್ದಕ್ಕೂ ರಸ್ತೆಯ ಎರಡು ಬದಿಗಳಲ್ಲಿ ಜನರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ರಾತ್ರಿ 7 ಗಂಟೆಗೆ ಬನ್ನಿಮಂಪಟದಲ್ಲಿ ಪಂಜಿನ ಕವಾಯತು ನಡೆಯಲಿದೆ.
ವರದಿ : ಲಾವಣ್ಯ ಅನಿಗೋಳ

