Dharwad News: ಧಾರವಾಡ : ಸಾರ್ವಜನಿಕರಿಗೆ ಉತ್ತಮ ಆಡಳಿತ ವ್ಯವಸ್ಥೆ ಮತ್ತು ಅವರಲ್ಲಿ ರಾಜ್ಯ ಸರಕಾರದ ಸೌಲಭ್ಯಗಳ ಅರಿವು ಮೂಡಿಸಿ, ಯೋಜನೆಗಳನ್ನು ತಲುಪಿಸಲು ಜನತಾ ದರ್ಶನ ಕಾರ್ಯಕ್ರಮ ಅತ್ಯಂತ ಮಹತ್ವದ ಮಾಧ್ಯಮವಾಗಿದೆ. ಇದರಿಂದ ಸರಕಾರ ಹೆಚ್ಚುಹೆಚ್ಚು ಜನಪರವಾಗಿ ಕೆಲಸ ಮಾಡಲು ಅನುಕೂಲವಾಗುತ್ತಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ಕೆಸಿಡಿ ಆವರಣದ ಸೃಜನಾ ರಂಗಮಂದಿರದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ, ಸಸಿಗೆ ನೀರುಣಿಸುವ ಮೂಲಕ ಜನತಾ ದರ್ಶನವನ್ನು ಉದ್ಘಾಟಿಸಿ, ಮಾತನಾಡಿದರು.
ಮುಖ್ಯಮಂತ್ರಿಗಳ ಸೂಚನೆಯಂತೆ ಜರುಗುತ್ತಿರುವ ಜನತಾ ದರ್ಶನವು, ನಮ್ಮ ಜಿಲ್ಲೆಯೂ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿಯೂ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.

ಕಳೆದ ತಿಂಗಳ ಜಿಲ್ಲಾಮಟ್ಟದ ಜನತಾ ದರ್ಶನದಲ್ಲಿ ಸ್ವೀಕರಿಸಿದ್ದ ಸಾರ್ವಜನಿಕರ ಅಹವಾಲುಗಳಲ್ಲಿ ಶೇ. 90 ರಷ್ಟು ಅರ್ಜಿಗಳನ್ನು ಈಗಾಗಲೇ ನಿಯಮಾನುಸಾರ ಪರಿಶೀಲಿಸಿ, ವಿಲೇವಾರಿ ಮಾಡಲಾಗಿದೆ. ಸಂಬಂಧಿಸಿದ ಅರ್ಜಿದಾರರಿಗೆ ಎಸ್.ಎಂ.ಎಸ್. ಮೂಲಕ ಮಾಹಿತಿ ಹಾಗೂ ಸದರಿ ಅರ್ಜಿಗಳಿಗೆ ಹಿಂಬರಹ ನೀಡಲಾಗಿದೆ. ಉಳಿದ ಅರ್ಜಿಗಳನ್ನು ಇಲಾಖೆ ಹಿರಿಯ ಅಧಿಕಾರಿಗಳು ಪರಿಶೀಲಿಸುತ್ತಿದ್ದು, ಅವುಗಳನ್ನು ಸಹ ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಜನತಾ ದರ್ಶನ ಕಾರ್ಯಕ್ರಮದಿಂದ ಬಡವರ ಸಮಸ್ಯೆ, ನೋವುಗಳನ್ನು ಹತ್ತಿರದಿಂದ ತಿಳಿಯಲು ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಅವಕಾಶವಾಗುತ್ತದೆ. ಸಮಸ್ಯೆ ಆಲಿಸಿದ ಅಧಿಕಾರಿಗಳು ಸಂಯಮದಿಂದ ಪರಿಶೀಲಿಸಿ, ಪರಿಹಾರ ಕ್ರಮ ಕೈಗೊಳ್ಳುತ್ತಾರೆ ಎಂದು ಸಚಿವರು ಹೇಳಿದರು.

ಜನತಾ ದರ್ಶನದಲ್ಲಿ ಸ್ವೀಕರಿಸಿರುವ ಅರ್ಜಿಗಳನ್ನು ಕಾಲಮಿತಿಯಲ್ಲಿ ಪರಿಹರಿಸುತ್ತೇವೆ. ಅರ್ಜಿದಾರರು ಅವಸರ ಮಾಡದೇ, ತಾಳ್ಮೆಯಿಂದ ಇರಬೇಕು. ಅರ್ಜಿಗಳ ಕಾನೂನಾತ್ಮಕತೆಯನ್ನು ಪರಿಶೀಲನೆ ಮಾಡಲಾಗುತ್ತದೆ. ಎಲ್ಲ ಸ್ವೀಕೃತ ಅಹವಾಲುಗಳನ್ನು ನಿಯಮಾನುಸಾರ ಇತ್ಯರ್ಥ ಪಡಿಸಲಾಗುತ್ತದೆ ಎಂದು ಸಚಿವ ಸಂತೋಷ ಲಾಡ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಜನತಾ ದರ್ಶನ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಅವರು ಸ್ವಾಗತಿಸಿದರು.

ವೇದಿಕೆಯಲ್ಲಿ ವಿಧಾನ ಪರಿಷತ್ತ ಸದಸ್ಯ ಪ್ರದೀಪ ಶೆಟ್ಟರ, ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ್ ಬ್ಯಾಕೋಡ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಮಹಾನಗರಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್.ಮುಗನೂರಮಠ, ಡಿಎಪ್ಓ ಸೋನಲ್ ವೃಷ್ಣಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಡಾ.ಸಂತೋಷಕುಮಾರ ಬಿರಾದಾರ, ಭೂದಾಖಲೆಗಳ ಇಲಾಖೆ ಉಪನಿರ್ದೇಶಕ ಮೋಹನ ಶಿವಣ್ಣನವರ, ಹೆಸ್ಕಾಂ ಅಧೀಕ್ಷಕ ಅಭಿಯಂತರಿ ಎಸ್.ಎಸ್.ಜಂಗಿನ, ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸರೋಜಾ ಹಳಕಟ್ಟಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕಿರಣಕುಮಾರ, ಮಾಜಿ ಸಂಸದ ಪ್ರೊ. ಐ.ಜಿ.ಸನದಿ, ಎಲ್ಲ ತಾಲೂಕುಗಳ ತಹಸಿಲ್ದಾರರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
ಧಾರವಾಡ ತಹಸಿಲ್ದಾರ ದೊಡ್ಡಪ್ಪ ಹೂಗಾರ, ಜನತಾ ದರ್ಶನದ ಅಹವಾಲುಗಳನ್ನು ನಿರ್ವಹಿಸಿ, ವಂದಿಸಿದರು. ಶಾಲಾ ಶಿಕ್ಷಣ ಇಲಾಖೆಯ ಜಯಲಕ್ಷ್ಮಿ ಎಚ್ ಅವರು ಕಾರ್ಯಕ್ರಮ ನಿರೂಪಿಸಿದರು.
ಇಂದಿನ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ವಸತಿ, ಕಾರ್ಮಿಕ ಇಲಾಖೆ, ಕೃಷಿ, ತೋಟಗಾರಿಕೆ, ಪಶುಪಾಲನೆ ಮತ್ತು ಪಶು ವೈಧ್ಯಕೀಯ ಇಲಾಖೆಗಳಿಂದ ಆಯ್ಜೆಯಾಗಿದ್ದ ಪಲಾನುಭವಿಗಳಿಗೆ ಹಕ್ಕು ಪತ್ರಗಳನ್ನು, ವಿವಿಧ ಸೌಲಭ್ಯಗಳನ್ನು ವಿತರಿಸಿದರು. ಮತ್ತು ಶಾಲಾ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ನೀಡಲಾಯಿತು.
ಜಿಲ್ಲೆಯ ಬೇರೆ ಬೇರೆ ತಾಲೂಕುಗಳ ವಿವಿಧ ಗ್ರಾಮ ಹಾಗೂ ಪಟ್ಟಣಗಳಿಂದ ತಮ್ಮ ವೈಯಕ್ತಿಕ ಹಾಗೂ ಸಾರ್ವಜನಿಕ ಸೌಕರ್ಯಗಳಿಗೆ ಸಂಬಂಧಿಸಿದ ಅಹವಾಲು, ಮನವಿಗಳನ್ನು ತೆಗೆದುಕೊಂಡು ಸುಮಾರು ಸಾವಿರಕ್ಕೂ ಹೆಚ್ಚು ಜನ ಆಗಮಿಸಿ, ಸಚಿವರಿಗೆ ಸಲ್ಲಿಸಿದರು.
ಸಾವಧಾನದಿಂದ ಪ್ರತಿ ಅರ್ಜಿಗಳನ್ನು ಸ್ವೀಕರಿಸಿದ ಸಚಿವ ಸಂತೋಷ ಲಾಡ ಅವರು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ನಿಯಮಾನುಸಾರ ಪರಿಶೀಲಿಸಿ, ಅಹವಾಲು, ಮನವಿಗಳನ್ನು ಪರಿಹರಿಸಲು ತಿಳಿಸಿದರು.
ಶೆಟ್ಟರ್ ನೇತೃತ್ವದ ಆಪರೇಷನ್ ಹಸ್ತ ಸಕ್ಸಸ್.. ಪ್ರಮುಖ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ
ಹಾಲು ಕುಡಿದು ಸಾಯೋವರಿಗೆ ವಿಷ ಹಾಕಿ ಯಾರಾದ್ರೂ ಸಾಯಿಸ್ತಾರಾ?- ಮಾಜಿ ಸಚಿವ ಗೋವಿಂದ ಕಾರಜೋಳ




