ಕೋಲಾರ: ಮಾಲೂರು ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇನೆ ಎಂದು ಶಾಸಕ ನಂಜೇಗೌಡರು ಹೇಳ್ತಿದ್ದಾರೆ. ಹಾಗಾದ್ರೆ ಶಾಸಕರಿಗೆ ಧೈರ್ಯ ಇದ್ದರೆ ಹಣ ಕೊಡದೆ ಚುನಾವಣೆ ಮಾಡಲಿ. ನಾವೂ ಸಹ ಹಣ ಕೊಡದೆ ಚುನಾವಣೆ ಎದುರಿಸುತ್ತೇವೆ. ಒಂದು ವೇಳೆ ಮಾಲೂರಿನಲ್ಲಿ ಎರಡನೇ ಬಾರಿಗೆ ಕಾಂಗ್ರೆಸ್ ಪಕ್ಷದ ಶಾಸಕ ನಂಜೇಗೌಡರು ಅಧಿಕಾರಕ್ಕೆ ಬಂದರೆ ನಾನು ಕ್ಷೇತ್ರ ಖಾಲಿ ಮಾಡುತ್ತೇನೆ ಎಂದು ಜೆಡಿಎಸ್ ಅಭ್ಯರ್ಥಿ ರಾಮೇಗೌಡ ಸವಾಲ್ ಹಾಕಿದರು.
ಕಳೆದ 5 ವರ್ಷಗಳಿಂದ ಶಾಸಕರು ಅಭಿವೃದ್ಧಿಯಾಗಿದ್ದಾರೆ, ಕ್ಷೇತ್ರ ಅಭಿವೃದ್ಧಿ ಆಗಿಲ್ಲ:
ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ ಮನೆ ಮನೆ ಪ್ರಚಾರದ ವೇಳೆ ಮಾತನಾಡಿದ ರಾಮೇಗೌಡರು, ಕಳೆದ 5 ವರ್ಷದಲ್ಲಿ ಮಾಲೂರು ಕ್ಷೇತ್ರ ಸಾಕಷ್ಟು ಅಭಿವೃದ್ದಿಯಾಗಿದೆ ಎಂದು ಶಾಸಕರು ಪ್ರಚಾರ ಮಾಡುತ್ತಿದ್ದಾರೆ. ಆದ್ರೆ ಕಳೆದ 5 ವರ್ಷದಿಂದ ಅವರು ಅಭಿವೃದ್ಧಿ ಯಾಗಿದ್ದಾರೆಯೇ ವಿನಹ ಕ್ಷೇತ್ರ ಅಭಿವೃದ್ಧಿಯಾಗಿಲ್ಲ. ಶಾಸಕರು ಅಧಿಕಾರದ ಅವಧಿಯಲ್ಲಿ ಸಾಕಷ್ಟು ದುಡ್ಡು ಮಾಡಿಕೊಂಡಿದ್ದಾರೆ. ಸ್ವಂತ ಜಾಗಗಳಿಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ರಸ್ತೆ ಹಾಕಿಸಿಕೊಂಡಿದ್ದಾರೆ. ನಂಜೇಗೌಡರು ಮಾತ್ರ ಅಭಿವೃದ್ಧಿಯಾಗಿದ್ದಾರೆಯೇ ಹೊರತು ಕ್ಷೇತ್ರ ಅಭಿವೃದ್ಧಿಯಾಗಿಲ್ಲ.
ನಾನು ಅಧಿಕಾರಕ್ಕೆ ಬಂದ್ರೆ ಬಡವರಿಗೆ 10 ಸಾವಿರ ಸೈಟ್ ಕೊಡ್ತೇನೆ:
ಶಾಸಕರು ಕ್ಷೇತ್ರದ ಬಡವರಿಗೆ ಇದುವರೆಗೂ 100 ಸೈಟ್ ಕೊಟ್ಟಿಲ್ಲ. ನಾನು ಈ ಬಾರಿ ಶಾಸಕನಾಗಿ ಆಯ್ಕೆಯಾದರೆ ಬಡಜನತೆಗೆ 10 ಸಾವಿರ ನಿವೇಗಳನ್ನು ನೀಡುತ್ತೇನೆ. ಒಂದು ವೇಳೆ ಸೈಟ್ ಗಳನ್ನ ಕೊಡದಿದ್ರೆ ಮತ್ತೆ ಚುನಾವಣೆಗೆ ಜನರ ಮುಂದೆ ಬರೋದಿಲ್ಲ. ಇನ್ನು ಮಾಲೂರು ಕ್ಷೇತ್ರದಲ್ಲಿ ರಸ್ತೆಗಳನ್ನು ನೋಡಿದರೆ ಕ್ಷೇತ್ರ ಎಷ್ಟು ಅಭಿವೃದ್ಧಿಯಾಗಿದೆ ಎಂದು ಗೊತ್ತಾಗುತ್ತದೆ ಎಂದು ಟಾಂಗ್ ನೀಡಿದರು.
ನಾನು ಶಾಸಕನಾಗಿ ಆಯ್ಕೆಯಾದರೆ ಪ್ರತೀ 6 ತಿಂಗಳಿಗೊಮ್ಮೆ ಅಧಿಕಾರಿಗಳ ಜೊತೆ ಗ್ರಾಮಗಳಿಗೆ ಭೇಟಿ ನೀಡುತ್ತೇನೆ. ಸ್ಥಳದಲ್ಲಿಯೇ ಸಮಸ್ಯೆಗಳನ್ನ ಆಲಿಸಿ ಬಗೆಹರಿಸುತ್ತೇನೆ. 5 ವರ್ಷಕ್ಕೊಮ್ಮೆ ಬೆಡ್ ಶೀಟ್, ಸೀರೆ ಕೊಟ್ಟು ಜನರ ಕಣ್ಣೊರೆಸುವ ಕೆಲಸ ಮಾಡಿ ದುಡ್ಡು ಕೊಟ್ಡು ಓಟ್ ಹಾಕಿಸಿಕೊಂಡು ಬಿಟ್ರೆ ಅಭಿವೃದ್ದಿಯಾಗಲ್ಲ. ನಾನು ಚಾಲೆಂಜ್ ಮಾಡಿ ಹೇಳ್ತೇನೆ ದುಡ್ಡು ಕೊಡದೇ ಮತ ಕೇಳಲಿ ನೋಡೋಣ. ನಾನು ಶಾಸಕನಾಗಿಲ್ಲ, ನನಗೆ ಅಧಿಕಾರವೂ ಇಲ್ಲ. ಆದ್ರೆ ನಾನು ದುಡಿದಿರುವ ಹಣವನ್ನು ಕೈಲಾದಷ್ಟು ಮಟ್ಟಿಗೆ ಜನರ ಸೇವೆ ಮಾಡಿದ್ದೇನೆ ಎಂದರು.
2ನೇ ಬಾರಿಗೆ ಇಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಾಲೂರು ಖಾಲಿ ಮಾಡ್ತೇನೆ:
ಈ ಬಾರಿ ಮಾಲೂರಿನಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ ನಾನು ಮಾಲೂರು ಖಾಲಿ ಮಾಡುತ್ತೇನೆ. ಈ ಬಾರಿ ನಂಜೇಗೌಡರಿಗೆ ಸರಿಯಾದ ಪಾಠವನ್ನು ಕ್ಷೇತ್ರದ ಜನತೆ ಕಲಿಸುತ್ತಾರೆ. ಕಳೆದ ಬಾರಿ ಚುನಾವಣೆಯಲ್ಲಿ ಹೊಸಮುಖ ಬೇಕಿತ್ತು. ಸಿಂಪತಿ ಕ್ರಿಯೇಟ್ ಮಾಡಿಕೊಂಡು ಲೋಕಲ್ ಅಭ್ಯರ್ಥಿ ಅಂತ ಕ್ಷೇತ್ರದ ಜನರು ಆಶೀರ್ವಾದ ಮಾಡಿದ್ರು. ಈ ಬಾರಿ ಸಹ ಹಾಗೇ ಗೆಲ್ಲುತ್ತೇನೆ ಅಂತ ತಿಳಿದುಕೊಂಡಿದ್ದಾರೆ. ಮತಕ್ಕೆ ಯಾರು ಎಷ್ಟು ಕೊಡ್ತಾರೋ ಅವರಿಗಿಂತ 500 ರೂಪಾಯಿ ಹೆಚ್ಚು ಕೊಡೋಕೆ ಪ್ಲಾನ್ ಮಾಡಿಕೊಂಡಿದ್ದಾರೆ. ಅದು ನೋಡೋಣ 500 ರೂಪಾಯಿ ವರ್ಕೌಟ್ ಆಗುತ್ತೋ ಇಲ್ಲ ನಾನು ಸೇವೆ ಮಾಡಿರುವ ನನ್ನ ವ್ಯಕ್ತಿತ್ವ ವರ್ಕೌಟ್ ಆಗುತ್ತೋ ನೋಡೋಣ ಎಂದು ರಾಮೇಗೌಡ ವಾಗ್ದಾಳಿ ನಡೆಸಿದ್ದಾರೆ.