ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಜೆಡಿಎಸ್-ಕಾಂಗ್ರೆಸ್ ವಾಕ್ಸಮರ ತಾರಕಕ್ಕೇರಿದೆ. ಹೋರಾಟಗಾರರಿಗೆ ದಳಪತಿಗಳು ಬೆಂಬಲ ಘೋಷಿಸಿದ್ದು, ಅಗತ್ಯಬಿದ್ರೆ ಪಾದಯಾತ್ರೆ ಮಾಡೋದಾಗಿ ಹೆಚ್‌ಡಿಕೆ ಹೇಳಿದ್ದಾರೆ. ಟೌನ್‌ಶಿಪ್ ವಿಚಾರವಾಗೇ ದೆಹಲಿಯಲ್ಲಿ ಸುದ್ದಿಗೋಷ್ಠಿ ಮಾಡಿರುವ ಹೆಚ್.ಡಿ. ಕುಮಾರಸ್ವಾಮಿ, ಡಿಕೆಶಿ ಮತ್ತು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
2006-07ರಲ್ಲಿ ಬೆಂಗಳೂರು ನಗರದ ಸಮಸ್ಯೆ ನೋಡಿ, ಇಲ್ಲಿನ ಡೆವಲಪ್‌ಮೆಂಟ್ ನಿಲ್ಲಿಸಿ, 5 ಟೌನ್‌ಶಿಪ್ ಮಾಡುವ ನಿರ್ಧಾರ ಮಾಡಿದ್ದೆ. ಮೊದಲ ಯೋಜನೆಯನ್ನು ಬಿಡದಿಯಲ್ಲಿ ಮಾಡಲು ನಿರ್ಧರಿಸಿದ್ದೆ. 4 ಬಾರಿ ಸರ್ವೇ ಮಾಡಿದ್ದೇನೆ. ನಿಮ್ ಹೆಚ್.ಕೆ. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ, ಸತ್ಯ ಶೋಧನಾ ಸಮಿತಿ ಮಾಡಿದ್ರಲ್ವಾ. ಅದನ್ನೇ ಒಮ್ಮೆ ತೆಗೆದು ನೋಡಿ. ಬೇರೆ ಯಾರೋ ಮಾತಾಡಿದ್ದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ.
ಕುಮಾರಸ್ವಾಮಿ ಬೆಂಗಳೂರು ನಗರದ ಭೂಮಿ ಎಲ್ಲವನ್ನೂ, ಹೊಡೆಯಲು ಹೋಗಿದ್ದಾನೆಂದು ಆರೋಪ ಮಾಡಿದ್ರಿ. ಈಗ ಕುಮಾರಸ್ವಾಮಿಯ ಕನಸಿನ ಕೂಸನ್ನು ಜಾರಿಗೆ ತರಲು ಹೊರಟಿರೋದಾಗಿ ಹೇಳ್ತೀರಾ. ಯಾವನೋ ಒಬ್ಬನಿಗೆ 500 ಎಕರೆ, ಇನ್ನೊಬ್ಬನಿಗೆ ಇನ್ನೊಂದಿಷ್ಟು, ಹೀಗೆ ಭೂಮಿಯನ್ನು ಪ್ರೈವೇಟ್ ಮಾಡೋಕೆ ಹೊರಟಿದ್ದೀರಾ?. 2 ವರ್ಷದಲ್ಲಿ ಪ್ರಾಜೆಕ್ಟ್ ಪ್ರಾರಂಭ ಮಾಡೋಕೆ ಆಗುತ್ತಾ ಅಂತಾ, ಹೆಚ್‌ಡಿಕೆ ಖಡಕ್ ಪ್ರಶ್ನೆ ಹಾಕಿದ್ದಾರೆ.
ಈಗಾಗಲೇ ಎರಡ್ಮೂರು ಸಾವಿರ ಎಕರೆಯನ್ನು ಏನ್ ಮಾಡಿದ್ರಿ ಎಂಬುದು ಗೊತ್ತು. ಈ ವ್ಯವಸ್ಥೆಯಲ್ಲಿ ನೀವು ಮಾಡುತ್ತಿರುವ ಕರ್ಮಗಳನ್ನು ತೊಳೆಯಲು ಸಾಧ್ಯವಿಲ್ಲ. ಕರ್ನಾಟಕ ರಾಜ್ಯದ ಜನರು 5 ವರ್ಷ ಅಧಿಕಾರ ಕೊಡಬೇಕಿದೆ. ಸರಿಯಾದ ರೀತಿ ನಿರ್ಧಾರ ಮಾಡಿ ಪಾರದರ್ಶಕ ಸರ್ಕಾರ ತರಬೇಕಿದೆ. ಜನ ಬುದ್ಧಿವಂತರಾಗಬೇಕು.
ರಾಜ್ಯ ಸರ್ಕಾರ ಎಲ್ಲೆಲ್ಲೋ ಸಾಲ ತುರುವ ಅವಶ್ಯಕತೆ ಇಲ್ಲ. ಇಡೀ ರಾಜ್ಯವನ್ನು ಸಂಪದ್ಭರಿತವಾಗಿ ಅಭಿವೃದ್ಧಿ ಮಾಡುವ ಶಕ್ತಿ ಬೆಂಗಳೂರಿಗೆ ಇದೆ. ಜನರ ಆಸ್ತಿಯನ್ನು ಲೂಟಿ ಮಾಡುವವರನ್ನು ತಡೆಯಲು, ನಮಗೆ ಐದು ವರ್ಷ ಅಧಿಕಾರ ನೀಡಬೇಕಿದೆ. ದೇವೇಗೌಡರನ್ನು, ಕುಮಾರಸ್ವಾಮಿಯನ್ನು ಮುಗಿಸಲು, ಈ ಸರ್ಕಾರ ಏನೇನು ಮಾಡ್ತಿದೆ ಅಂತಾ ಗೊತ್ತು. ದಿನಾ ದೇವರ ಪೂಜೆ ಮಾಡ್ತಾರಲ್ವಾ. ಊರೂರು ಸುತ್ತುತ್ತಾರಲ್ವಾ. ಎಷ್ಟು ಜನರ ಮನೆ ಹಾಳು ಮಾಡಿದ್ರು ಎಂಬುದನ್ನ, ಎದೆ ಮುಟ್ಟಿ ಹೇಳಲಿ ಅಂತಾ ಹೆಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

