ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್, ಜೇವರ್ಗಿಯ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಶಹಾಪುರದ ಮಾಜಿ ಶಾಸಕರಾದ ಗುರುಲಿಂಗಪ್ಪ ಗೌಡ, ಗುರು ಪಾಟೀಲ್, ಸೇರಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅನೇಕ ಪ್ರಮುಖ ನಾಯಕರು ಶುಕ್ರವಾರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಬೃಹತ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸೇರಿದಂತೆ ಪಕ್ಷದ ಹಿರಿಯ ನಾಯಕರು ಜೆಡಿಎಸ್ ಶಾಲು ಹಾಕಿ, ಪಕ್ಷದ ಬಾವುಟ ನೀಡಿ ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು.
ಜತೆಗೆ; ಕಾರವಾರದ ಚೈತ್ರ ಕೊಡೇಕರ್, ಪಾವಗಡದ ಶ್ರೀರಾಮ್, ಮಾಯಕೊಂಡದ ಸವಿತಾ ಬಾಯಿ, ಪುತ್ತೂರಿನ ದಿವ್ಯಾ ಪುತ್ತೂರು, ದಿವ್ಯಪ್ರಭಾ ಗೌಡ, ಸಲಾಂ ವಿಟ್ಲ ಸೇರಿದಂತೆ ನೂರಾರು ಪ್ರಮುಖ ನಾಯಕರು ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾದರು.
ಪಕ್ಷ ಸೇರ್ಪಡೆ ಅದ ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜೆಪಿ ಭವನದಲ್ಲಿ ಜೆಪಿ ಭವನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ದಿನ ದೊಡ್ಡ ಪ್ರಮಾಣದಲ್ಲಿ ನಾಯಕರು ವಿವಿಧ ಪಕ್ಷಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ನಮ್ಮ ಪಕ್ಷದ ಶಕ್ತಿ ಏನು ಎಂಬುದು ಎಲ್ಲರಿಗೂ ಮನವರಿಕೆ ಆಗುತ್ತಿದೆ ಎಂದರು.
ಈ ಚುನಾವಣೆಗೆ ಇಂದು ನಡೆದ ಪಕ್ಷ ಸೇರ್ಪಡೆ ಒಂದು ದಿಕ್ಸೂಚಿಯಾಗಿದೆ. ಕಲ್ಬುರ್ಗಿ, ಕಾರವಾರ, ಮಂಗಳೂರು, ಚಿತ್ರದುರ್ಗ ಜಿಲ್ಲೆಗಳ ನಾಯಕರು ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ನಮಗೆ ಶಕ್ತಿ ಇಲ್ಲ ಎಂದು ಕೆಲವರು ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದರು. ಆ ಭಾಗದಲ್ಲಿ ಕನಿಷ್ಠ 25-30 ಸ್ಥಾನ ಅಲ್ಲಿ ಗೆಲ್ಲುತ್ತೇವೆ ಎಂದು ಹೇಳಲಾಗುತ್ತಿತ್ತು. ಈಗ ನೋಡಿದರೆ 40 ಸ್ಥಾನದ ಮೇಲೆ ಗೆದ್ದರೂ ಆಶ್ಚರ್ಯವಿಲ್ಲ. ಪಕ್ಷವನ್ನು ಸಧೃಡ ಮಾಡಲು ಕಾರ್ಯಕರ್ತರು ಶ್ರಮ ಹಾಕಿದ್ದಾರೆ. ಇದರ ಮೂಲಕ ಫಲ ದೊರಕುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದರು.
ಇವತ್ತು ಸೇರ್ಪಡೆ ಆದವರನ್ನು ನಾನು ಕಾಂಗ್ರೆಸ್, ಬಿಜೆಪಿಯವರು ಎಂದು ಹೇಳಲ್ಲ. ಏಕೆಂದರೆ, ಅವರೆಲ್ಲಾ ಒಂದಲ್ಲ ಒಂದು ಕಡೆ ಜೆಡಿಎಸ್ ಪರಿವಾರಕ್ಕೆ ಸೇರಿದವರೇ. 2023ಕ್ಕೆ ಜನತಾ ದಳವನ್ನು ಜನ ಬೆಂಬಲಿಸಲಿದ್ದಾರೆ. 123 ಕ್ಷೇತ್ರಗಳ ಗುರಿ ಇಟ್ಟು ಹೊರಾಟ ಮಾಡುತ್ತಿದ್ದೇವೆ. ಇನ್ನೂ ಅನೇಕರು ಪಕ್ಷಕ್ಕೆ ಬರುವವರಿದ್ದಾರೆ ಎಂದು ಅವರು ತಿಳಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಮಾತನಾಡಿ, ಜೆಡಿಎಸ್ ಎಲ್ಲಿದೆ ಎಂದು ಕೇಳುತ್ತಿದ್ದವರಿಗೆ ಈಗ ಉತ್ತರ ಸಿಕ್ಕಿದೆ. ನಾನು ಮೊದಲೇ ಹೇಳಿದ್ದೇ, ಬೇರೆ ಪಕ್ಷಗಳ ನಾಯಕರು ದೊಡ್ಡ ಪ್ರಮಾಣದಲ್ಲಿ ಜೆಡಿಎಸ್ ಪಕ್ಷ ಸೇರುತ್ತರೆಂದು. ಈಗ ಆ ಮಾತು ಸತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ರಘು ಆಚಾರ್, ದೊಡ್ಡಪ್ಪ ಗೌಡ ಪಾಟೀಲ್, ದೊಡ್ಡಪ್ಪ ಗೌಡ ಪಾಟೀಲ್, ಗುರುಲಿಂಗಪ್ಪ ಗೌಡ, ಗುರು ಪಾಟೀಲ್ ಸೇರಿದಂತೆ ಪಕ್ಷಕ್ಕೆ ಸೇರಿದ ಎಲ್ಲ ಪ್ರಮುಖ ನಾಯಕರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯರಾದ ಕೆ ಎನ್ ತಿಪ್ಪೇಸ್ವಾಮಿ, ಟಿ.ಎ.ಶರವಣ, ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ ಸೇರಿದಂತೆ ಪಕ್ಷದ ಅನೇಕ ಮುಖಂಡರು ಹಾಜರಿದ್ದರು.
‘ನನ್ನ ವಿರುದ್ಧ ರಾಜಕಾರಣ ಮಾಡುವವರು ಇನ್ನೂ ಎದ್ದೇ ಇಲ್ಲಾ. ನನ್ನ ರಾಜಕೀಯ ವಿರೋಧಿ ತಯಾರೇ ಆಗಿಲ್ಲಾ’
‘ಸುಪ್ರೀಂ ಕೋರ್ಟ್ ರಾಜ್ಯ ಬಿಜೆಪಿ ಸರ್ಕಾರಕ್ಕೆ ನೀಡಿರುವ ತಪರಾಕಿ ನಿರೀಕ್ಷಿತವಾಗಿತ್ತು’
ಜೆಡಿಎಸ್ 2ನೇ ಪಟ್ಟಿ ರಿಲೀಸ್, ಹಾಸನದಲ್ಲಿ ಯಾರಿಗೆ ಟಿಕೇಟ್ ಸಿಕ್ಕಿದೆ ಗೊತ್ತಾ..?