ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ಸಮ್ಮಿಶ್ರ ಸರ್ಕಾರವೇ ಬುಡಮೇಲಾಗಿದೆ. ರಾಜಕೀಯದ ಹಿರಿಯ ನಾಯಕರು ಮನವೊಲಿಸಲು ನಡೆಸಿದ ಕಸರತ್ತೆಲ್ಲಾ ವಿಫಲವಾಗಿ ಕೊನೆಗೆ ದೋಸ್ತಿ ಅವರ ವಿರುದ್ಧವೇ ಕಾನೂನು ಸಮರಕ್ಕೆ ನಿಂತಿದೆ. ಕಾಂಗ್ರೆಸ್ ಅನರ್ಹತೆಯ ಅಸ್ತ್ರ ಉಪಯೋಗಿಸಿದ್ರೆ, ಜೆಡಿಎಸ್ ನಿಂದ ದೇವೇಗೌಡರು ನಾಲ್ವರು ಅತೃಪ್ತರ ಮೇಲೆ ಸೇಡು ತೀರಿಸಿಕೊಳ್ಳಲು ಅಖಾಡ ರೆಡಿ ಮಾಡಲು ಸಜ್ಜಾಗಿದ್ದಾರೆ.
ಹೌದು, 14 ತಿಂಗಳು ಸರಾಗವಾಗಿ ಸರ್ಕಾರ ನಡೆಸಿಕೊಂಡು ಬಂದ ಮೈತ್ರಿ ನಾಯಕರಿಗೆ ಚಳ್ಳೆ ಹಣ್ಣು ತಿನ್ನಿಸಿ ಮನೆಗೆ ಕಳುಹಿಸಿರುವ ಅತೃಪ್ತರ ಮೇಲೆ ಜೆಡಿಎಸ್ ವರಿಷ್ಠ ದೇವೇಗೌಡರು ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಒಂದು ವೇಳೆ ಪಕ್ಷದಿಂದ ಅನರ್ಹಗೊಂಡು, ಬಿಜೆಪಿಯಲ್ಲೂ ಸೂಕ್ತ ಸ್ಥಾನ ಸಿಗದೆ ಅತಂತ್ರರಾಗುವ ಸಾಧ್ಯತೆ ಹೆಚ್ಚಾಗಿರುವ ಮಧ್ಯೆಯೇ ದೇವೇಗೌಡರೂ ಸಹ ಆಳಿಗೊಂದು ಏಟು ಅನ್ನೋ ರೀತಿ ತಾವೂ ಸಹ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ.
ಅತೃಪ್ತರಲ್ಲಿ ನಾಲ್ವರು ಶಾಸಕರೇ ದೇವೇಗೌಡರ ಟಾರ್ಗೆಟ್. ಬೆಂಗಳೂರಿನ ಶಾಸಕರಾದ ಜೆಡಿಎಸ್ ನ ಗೋಪಾಲಯ್ಯ, ಕಾಂಗ್ರೆಸ್ ಶಾಸಕರಾದ ಎಸ್.ಟಿ ಸೋಮಶೇಖರ್, ಮುನಿರತ್ನ ಮತ್ತು ಬೈರತಿ ಬಸವರಾಜು ಮೇಲೆ ಜೆಡಿಎಸ್ ಹದ್ದಿನ ಕಣ್ಣಿಟ್ಟಿದೆ. ಹೀಗಾಗಿ ಜೆಡಿಎಸ್ ವರಿಷ್ಠ ದೇವೇಗೌಡ ಶನಿವಾರ ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ರಾಜರಾಜೇಶ್ವರಿನಗರ, ಕೆ.ಆರ್ ಪುರಂ ಕ್ಷೇತ್ರಗಳ ಪದಾಧಿಕಾರಿಗಳು , ಮುಖಂಡರು ಮತ್ತು ಪದಾಧಿಕಾರಿಗಳ ಮಹತ್ವದ ಸಭೆ ಏರ್ಪಡಿಸಿದ್ದು. ಮುಂದಿನ ಉಪಚುನಾವಣೆಯಲ್ಲಿ ಈ ನಾಲ್ವರ ವಿರುದ್ಧ ಕಾರ್ಯತಂತ್ರ ರೂಪಿಸಿ ಹೊಸದಾಗಿ ಪಕ್ಷ ಸಂಘಟನೆ ನಡೆಸಲು ನಿರ್ಧರಿಸಿದ್ದಾರೆ. ಈ ಮೂಲಕ ಒಂದೊಮ್ಮೆ ಅವರು ಮುಂದಿನ ದಿನಗಳಲ್ಲಿ ಚುನಾವಣೆ ಎದುರಾದರೆ ಜೆಡಿಎಸ್ ಅವರ ವಿರುದ್ಧ ಪ್ರಬಲ ಎದುರಾಳಿಯಾಗಲಿದೆ ಅನ್ನೋದು ದೊಡ್ಡ ಗೌಡರ ಲೆಕ್ಕಾಚಾರವಾಗಿದೆ.