ವಿಧಾನ ಪರಿಷತ್ ಚುನಾವಣಾ ಗೆಲುವಿಗೆ ಧನ್ಯವಾದ ತಿಳಿಸಿದ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್

Political News: ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳ 28 ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ನಾಯಕರ ಮೈತ್ರಿಗೆ ಗೆಲುವು ಸಿಕ್ಕಿದೆ. ಈ ಗೆಲುವಿಗಾಗಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಧನ್ಯವಾದ ಸಲ್ಲಿಸಿದ್ದಾರೆ.

ಕರ್ನಾಟಕ ವಿಧಾನ ಪರಿಷತ್ತಿನ 2 ಪದವೀಧರ ಹಾಗೂ 2 ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ 4ಕ್ಕೆ 4 ಸ್ಥಾನಗಳನ್ನೂ ಗೆದ್ದು ಅಭೂತಪೂರ್ವ ಜಯ ದಾಖಲಿಸಿದ ಎನ್‌ಡಿಎ ಮೈತ್ರಿಕೂಟಕ್ಕೆ ಅಭಿನಂದನೆಗಳು!

ರಾಜ್ಯದ 19 ಜಿಲ್ಲೆಗಳನ್ನು ಒಳಗೊಂಡ, ಸ್ವತಃ ಮುಖ್ಯಮಂತ್ರಿಗಳು ಹಾಗೂ ಎಐಸಿಸಿ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರಗಳಲ್ಲೇ ನಡೆದ ಈ ಸಮರದಲ್ಲಿ, ಆಡಳಿತಾರೂಢ ಕಾಂಗ್ರೆಸ್ ತನ್ನ ಸಂಪೂರ್ಣ ಸರ್ಕಾರಿ ಯಂತ್ರ ಬಳಸಿದರೂ ಜಾಗೃತ ಮತದಾರರು ತಕ್ಕ ಉತ್ತರ ನೀಡಿದ್ದಾರೆ ಎಂದು ನಿಖಿಲ್ ಹೇಳಿದ್ದಾರೆ.

ಬ್ಯಾಲಟ್ ಪೇಪರ್ ಆಧಾರಿತವಾಗಿ ನಡೆದ ಈ ಚುನಾವಣೆಯ ಫಲಿತಾಂಶ, 2028ರ ರಾಜ್ಯ ವಿಧಾನಸಭಾ ಚುನಾವಣೆಯ ಸ್ಪಷ್ಟ ದಿಕ್ಸೂಚಿಯಾಗಿದೆ. ಜನಾದೇಶ ಯಾರ ಪರವಾಗಿದೆ ಎಂಬುದಕ್ಕೆ ಈ ಜಯವೇ ಸಾಕ್ಷಿ.

ಎನ್‌ಡಿಎ ಪರವಾಗಿ ಮತ ಚಲಾಯಿಸಿದ ಪ್ರಬುದ್ಧ ಮತದಾರರಿಗೆ ನನ್ನ ಅನಂತ ಧನ್ಯವಾದಗಳು. ಈ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಶ್ರಮಿಸಿ, ಮೈತ್ರಿಕೂಟದ ವಿಜಯಪತಾಕೆ ಹಾರಿಸಿದ ಬಿಜೆಪಿ ಮತ್ತು ಜನತಾದಳ ಎಲ್ಲಾ ಹಿರಿಯ ನಾಯಕರು ಹಾಗೂ ಅಪ್ರತಿಮ ಕಾರ್ಯಕರ್ತರಿಗೆ ಹೃದಯಪೂರ್ವಕ ಅಭಿನಂದನೆಗಳು! ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

About The Author