ಸತ್ಯವನ್ನು ತಿರುಚುವುದರಲ್ಲಿ BJP ಹಾಗೂ JDS ನವರು ಡಾಕ್ಟರೇಟ್ ಪದವಿಯನ್ನೇ ಗಳಿಸಿದ್ದಾರೆ: ದಿನೇಶ್ ಗುಂಡೂರಾವ್

Political News: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ಮೋದಿ ಅಪ್ಪನ ವಿರುದ್ಧ ಮಾತನಾಡಿದ್ದಾರೆ ಎಂದು ಆರೋಪಿಸಿ, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ನಾಯಕರು ಮತ್ತು ಜೆಡಿಎಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಕ್ಸ್ ಖಾತೆಯ ಮೂಲಕ ತಮ್ಮ ಅನಿಸಿಕೆ ಶೇರ್ ಮಾಡಿರುವ ಗುಂಡೂರಾವ್, ಸತ್ಯವನ್ನು ತಿರುಚುವುದರಲ್ಲಿ BJP ಹಾಗೂ JDS ನವರು ಡಾಕ್ಟರೇಟ್ ಪದವಿಯನ್ನೇ ಗಳಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸುಳ್ಳಿನ ನಿಸ್ಸೀಮರಾಗಿರುವ ಈ ಎರಡೂ ಪಕ್ಷದ ಮುಖಂಡರು ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ತಿರುಚಿ ಕ್ಷುಲ್ಲಕ ರಾಜಕಾರಣ ಮಾಡಲು ಹೊರಟಿದ್ದಾರೆ. ಈಗ ಖರ್ಗೆಯವರು ಮೋದಿಯವರ ತಂದೆಯನ್ನು ಅವಮಾನಿಸಿದರು ಎಂದು ಸುಳ್ಳಿನ ಕಂತೆ ಶುರು‌ ಮಾಡಿದ್ದಾರೆ. ಆದರೆ ಯಾವಾಗ ಮೋದಿಯವರ ತಂದೆಯನ್ನು ಖರ್ಗೆ ಅವಮಾನಿಸಿದ್ದಾರೆ.? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಸಭಿಕರೊಬ್ಬರ ಪ್ರಶ್ನೆಗೆ ಅಧಿಕಾರ ಯಾರಿಗೂ ಶಾಶ್ವತವಲ್ಲ., ಮೋದಿಯವರಷ್ಟೆ ಅಲ್ಲ ಅವರಿಗಿಂತ ದೊಡ್ಡವರು ಕೂಡ ಒಂದಲ್ಲ ಒಂದು ದಿನ ಅಧಿಕಾರದಿಂದ ಹೋಗಲೇಬೇಕು ಎಂಬರ್ಥದಲ್ಲಿ ಖರ್ಗೆಯವರು ಹೇಳಿದ್ದಾರೆ. ಇದರಲ್ಲಿ ಮೋದಿಯವರ ಪೂಜ್ಯ ತಂದೆಯವರ ನಿಂದನೆ ಎಲ್ಲಿದೆ.?

ಇಂದು ಸಂಸ್ಕಾರ ಹಾಗೂ ಸಭ್ಯತೆಯ ಪಾಠ ಮಾಡುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಈ ಹಿಂದೆ ಮೋದಿಯವರು ಶ್ರೀಮತಿ ಸೋನಿಯಾ ಗಾಂಧಿಯವರ ಬಗ್ಗೆ ಯಾವೆಲ್ಲಾ ಭಾಷೆ ಬಳಸಿ ನಿಂದಿಸಿದ್ದರು ಎಂದು ನೆನಪು ಮಾಡಿಕೊಂಡಿದ್ದಾರಾ.? ಸೋನಿಯಾ ಒಂದು ಹೆಣ್ಣು ಮಗಳು ಎಂದು ಗಮನಿಸದೆ ಅವರ ಬಗ್ಗೆ ತೀರಾ ಅವಾಚ್ಯವಾಗಿ, ಅವಹೇಳನಕಾರಿಯಾಗಿ ನಿಂದಿಸಿದ್ದಾಗ ಯಾಕೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಬಾಯಿ ಬಿಟ್ಟಿರಲಿಲ್ಲ. ಯಾಕೆ ಮೋದಿಯವರ ‌ಮಾತನ್ನು ಖಂಡಿಸಿರಲಿಲ್ಲ. ಆಗ ಮೋದಿಯವರಿಗೂ ಸಭ್ಯತೆಯ ಪಾಠ ಮಾಡಬಹುದಿತ್ತಲ್ಲವೆ.? ಎಂದು ದಿನೇಶ್ ಗುಂಡೂರಾವ್ ಬಿಜೆಪಿಯವರನ್ನು ಪ್ರಶ್ನಿಸಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ಹೇಗೆ ಮಾತಾಡಬೇಕು ಹೇಗೆ ವರ್ತಿಸಬೇಕು ಎಂದು ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರಿಗೆ ಯಾರೂ ಪಾಠ ಹೇಳಿಕೊಡುವ ಅಗತ್ಯವಿಲ್ಲ. ಖರ್ಗೆಯವರ ಸುದೀರ್ಘ ರಾಜಕೀಯ ಜೀವನದ ತಳಹದಿಯೇ ಸಾರ್ವಜನಿಕ ಸಭ್ಯತೆ ಮತ್ತು ಘನತೆಯ‌ ವರ್ತನೆ ಎಂಬುದನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತಿಳಿದುಕೊಳ್ಳಲಿ ಎಂದು ಬಿಜೆಪಿ- ಜೆಡಿಎಸ್ ನಾಯಕರ ಹೇಳಿಕೆಯ ವಿರುದ್ಧ ಮಾಜಿ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

About The Author