ಬೆಂಗಳೂರು ಕಸ ವಿಲೇವಾರಿ ಬಗ್ಗೆ ಧ್ವನಿ ಎತ್ತಿದ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್

Political News: ಬೆಂಗಳೂರಿನಲ್ಲಿ ಕಸ ವಿಲೇವಾರಿ ವಿಚಾರದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರಾಜ್ಯಪಾಲರಿಗೆ ದೂರು ನೀಡಿದ್ದರು. ಇದೀಗ ಬೆಂಗಳೂರಿನಲ್ಲಿ ಹಲವು ದಿನಗಳಿಂದ ಕಸ ವಿಲೇವರಿಯಾಗದೇ, ನಗರ ಅಶುದ್ಧವಾಗುತ್ತಿರುವ ಬಗ್ಗೆ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಧ್ವನಿ ಎತ್ತಿದ್ದಾರೆ.

ಸುಮಾರು 300 ಕಸ ವಿಲೇವಾರಿ ವಾಹನಗಳು ಪ್ರತಿದಿನ ಕರ್ತವ್ಯಕ್ಕೆ ಗೈರಾಗುತ್ತಿವೆ ಎಂಬ ಲೋಕಾಯುಕ್ತರ ವರದಿ ಬೆಂಗಳೂರಿನ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.ನಗರದ ಜನರು ತೆರಿಗೆ ಕಟ್ಟುತ್ತಾರೆ, ಆದರೆ ಪ್ರತಿದಿನ ಕಸದ ರಾಶಿಗಳ ನಡುವೆ ಬದುಕುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ವಾಹನಗಳು ಎಲ್ಲಿಗೆ ಹೋದವು? ಯಾರು ಹೊಣೆ? ಏಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ? ಎಂದು ನಿಖಿಲ್ ಪ್ರಶ್ನಿಸಿದ್ದಾರೆ.

ಬೆಂಗಳೂರು ಭಾರತದ ತಂತ್ರಜ್ಞಾನದ ರಾಜಧಾನಿ. ಆದರೆ ಇಂದು ಮೂಲಭೂತ ಸ್ವಚ್ಛತೆಯನ್ನೇ ಕಾಪಾಡಿಕೊಳ್ಳಲು ಹೋರಾಡುವ ಸ್ಥಿತಿಗೆ ತಲುಪಿದೆ. ಸರ್ಕಾರ ನೆಪ ಹೇಳುವುದನ್ನು ನಿಲ್ಲಿಸಿ ಉತ್ತರ ನೀಡಬೇಕು. ನಗರದ ಈ ದುಸ್ಥಿತಿಗೆ ಹೊಣೆಗಾರರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಬೆಂಗಳೂರಿಗೆ ಇಂದು ಉತ್ತಮ ಆಡಳಿತದ ಅವಶ್ಯಕತೆಯಿದೆ ಎಂದು ನಿಖಿಲ್ ಕುಮಾರ್ ಹೇಳಿದ್ದಾರೆ.

About The Author