ಆದಿಚುಂಚನಗಿರಿಯಲ್ಲಿ ನಿರ್ಮಾಣವಾಗಿರುವ ಭವ್ಯ ಶ್ರೀ ಭೈರವೈಕ್ಯ ಮಂದಿರವನ್ನು ಪ್ರಧಾನಿ ಅವರು ಏಪ್ರಿಲ್ 15ರಂದು ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸ್ಥಳದಲ್ಲಿ ಅಂತಿಮ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ.
ಸುಮಾರು 10 ವರ್ಷಗಳ ಕಾಲ ನಿರ್ಮಾಣ ಹಂತದಲ್ಲಿದ್ದ ಈ ಭವ್ಯ ಮಂದಿರವು ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ ತಲೆ ಎತ್ತಿದೆ. ಇದು ಆದಿಚುಂಚುನಗಿರಿಯಲ್ಲಿ, ಬಾಲ ಗಂಗಾಧರನಾಥ ಸ್ವಾಮೀಜಿಯವರ ಐಕ್ಯ ಸ್ಥಳದಲ್ಲಿ ನಿರ್ಮಾಣವಾಗಿರುವುದು ವಿಶೇಷ.
ಈ ಮಂದಿರ ನಿರ್ಮಾಣವು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಕನಸಾಗಿದ್ದು, ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಭವ್ಯವಾಗಿ ರೂಪುಗೊಂಡಿದೆ. ಮಂದಿರದ ವಾಸ್ತುಶಿಲ್ಪವು ಹೊಯ್ಸಳ, ಚಾಲುಕ್ಯ, ಚೋಳ ಹಾಗೂ ಗಂಗರ ಕಾಲದ ಶಿಲ್ಪಕಲೆಗಳ ಸುಂದರ ಸಂಯೋಜನೆಯನ್ನು ಒಳಗೊಂಡಿದೆ.
ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ಮಂದಿರವು ಶಿಲ್ಪಕಲೆ ಮತ್ತು ವಾಸ್ತು ವಿನ್ಯಾಸದ ಅದ್ಭುತ ಉದಾಹರಣೆಯಾಗಿದ್ದು, ಭಕ್ತರಲ್ಲಿ ಆಕರ್ಷಣೆಯ ಕೇಂದ್ರವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳು ಕಠಿಣಗೊಳಿಸಲಾಗಿದ್ದು, ಎಲ್ಲಾ ಅಗತ್ಯ ಸೌಲಭ್ಯಗಳನ್ನು ಸಜ್ಜುಗೊಳಿಸಲಾಗಿದೆ. ಈ ಮಹತ್ವದ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.
ವರದಿ : ಲಾವಣ್ಯ ಅನಿಗೋಳ




