Sandalwood News: ಕನ್ನಡ ಚಿತ್ರರಂಗದ ಪ್ರತಿಭಾವಂತರೆಲ್ಲ ಇದೀಗ ಪರಭಾಷೆಯತ್ತ ತಮ್ಮ ಚಿತ್ತ ಹರಿಸಿದ್ದಾರೆ. ಹೌದು, ಈಗಾಗಲೇ ಹಲವು ಕನ್ನಡದ ಕಲಾವಿದರು ಪರಭಾಷೆಯಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಕೇವಲ ಕಲಾವಿದರು ಮಾತ್ರವಲ್ಲ, ನಿರ್ದೇಶಕರು ಮತ್ತು ತಾಂತ್ರಿಕ ವರ್ಗ ಕೂಡ ಪರಭಾಷೆಯ ಸಿನಿಮಾಗಳಲ್ಲಿ ಸದ್ದು ಮಾಡಿ ತಮ್ಮದ್ದೊಂದು ಠಸ್ಸೆ ಒತ್ತಿದ್ದಾಗಿದೆ. ಅಂತಹವರ ಸಾಲಿಗೆ ಈಗ ಡ್ಯಾನ್ಸ್ ಮಾಸ್ಟರ್ ಕಮ್ ನಿರ್ದೇಶಕ ಎ.ಹರ್ಷ ಕೂಡ ಸೇರಿದ್ದಾರೆ.
ಹೌದು, ಎ. ಹರ್ಷ ಮೂಲತಃ ಡ್ಯಾನ್ಸ್ ಮಾಸ್ಟರ್. ಅದರಲ್ಲೂ ಕನ್ನಡದ ಬಹುತೇಕ ಸ್ಟಾರ್ ನಟ,ನಟಿಯರು ಸೇರಿದಂತೆ ಹಲವಾರು ಹೊಸ ಪ್ರತಿಭೆಗಳಿಗೂ ಸ್ಟೆಪ್ ಹೇಳಿಕೊಡುವ ಮೂಲಕ ಬೇಡಿಕೆಯ ಡ್ಯಾನ್ಸ್ ಮಾಸ್ಟರ್ ಆಗಿದ್ದವರು. ಕಾಲ ಕ್ರಮೇಣ ಅವರು ನಿರ್ದೇಶನದತ್ತ ವಾಲಿದರು. ಕನ್ನಡದ ಅನೇಕ ಸಿನಿಮಾಗಳನ್ನು ನಿರ್ದೇಶಿಸುವ ಮೂಲಕ ನಿರ್ದೇಶನಕ್ಕೂ ಸೈ ಎನಿಸಿಕೊಂಡರು. ಕನ್ನಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡ ಎ.ಹರ್ಷ, ಟಾಲಿವುಡ್ ಗೂ ಕಾಲಿಟ್ಟು ಅಲ್ಲೂ ಸೌಂಡು ಮಾಡಿದರು. ಈಗ ಬಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ. ಅಲ್ಲು ತಮ್ಮ ಛಾಪನ್ನು ಮೂಡಿಸೋಕೆ ಅಣಿಯಾಗಿದ್ದಾರೆ.
ಅಂದಹಾಗೆ, ಎ.ಹರ್ಷ ಅವರು ಇಷ್ಟಕ್ಕೂ ಬಾಲಿವುಡ್ ಗೆ ಹೋಗಿರೋದು ಟೈಗರ್ ಶ್ರಾಫ್ ಅಭಿನಯದ ಹೊಸ ಸಿನಿಮಾ ನಿರ್ದೇಶನಕ್ಕೆ. ಯೆಸ್, ಸದ್ಯ ರಿಲೀಸ್ ಆಗಿರೋ ಟೈಗರ್ ಶ್ರಾಫ್ ಪೋಸ್ಟರ್ ಗಮನ ಸೆಳೆದಿದೆ. ಟೈಗರ್ ಶ್ರಾಫ್ ಅವರು ಕೈಯಲ್ಲಿ ಮಚ್ಚು ಹಿಡಿದು ಕಮೋಡ್ ವೊಂದರ ಮೇಲೆ ಕುಳಿತಿರುವ ಪೋಸ್ಟರ್ ಸಖತ್ ಆಗಿದೆ. ಇನ್ನು, ಪೋಸ್ಟರ್ ನಲ್ಲಿ ಬಾಘಿ ಎಂದು ಬರೆಯಲಾಗಿದೆ. ಗೋಡೆ ಮೇಲೆ ದೊಡ್ಡದ್ದಾಗಿಯೂ ನಾಲ್ಕು ಅಂತ ಬರೆಯಲಾಗಿದೆ. ಕನ್ನಡದಲ್ಲಿ ಸೂಪರ್ ಹಿಟ್ ಸಿನಿಮಾ ನೀಡಿರುವ ಹರ್ಷ, ಈಗ ಟೈಗರ್ ಶ್ರಾಫ್ ಅಭಿನಯದ ಬಾಘಿ 4 ಸಿನಿಮಾ ನಿರ್ದೇಶನಕ್ಕೆ ತಯಾರು ಮಾಡಿಕೊಂಡಿದ್ದಾರೆ. ಆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಎಲ್ಲೆಡೆ ಭಾರೀ ಮೆಚ್ಚುಗೆ ಪಡೆದುಕೊಂಡಿದೆ.
ಬಾಲಿವುಡ್ ನ ಅತ್ಯಂತ ಯಶಸ್ವಿ ಫ್ರಾಂಚೈಸ್ ಗಳಲ್ಲಿ ‘ಬಾಘಿ’ ಕೂಡ ಒಂದು. ಈ ಸರಣಿಯ ಮೊದಲೆರಡು ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದವು. ಆದರೆ, ‘ಬಾಘಿ 3 ವಿಮರ್ಶೆಯಲ್ ನೆಲಕಚ್ಚಿತ್ತು. ಸಿನಿಮಾ ರಿಪೋರ್ಟ್ ಚೆನ್ನಾಗಿತ್ತು. ಇದೀಗ ಅದೇ ಉತ್ಸಾಹದಲ್ಲಿ ಸಾಜಿದ್ ನಾಡಿಯಾದ್ವಾಲ ಅವರು ಈ ಸರಣಿಯ ನಾಲ್ಕನೇ ಸಿನಿಮಾ ನಿರ್ಮಿಸುತ್ತಿದ್ದಾರೆ. ಇದಕ್ಕೆ ಹರ್ಷ ಆಕ್ಷನ್ ಕಟ್ ಹೇಳುತ್ತಿರೋದು ವಿಶೇಷ.
ಅಂದಹಾಗೆ, ಹರ್ಷ, 2007ರಲ್ಲಿ ಕನ್ನಡದ ‘ಗೆಳೆಯ’ ಸಿನಿಮಾ ಮೂಲಕ ನಿರ್ದೇಶನ ಪಟ್ಟ ಅಲಂಕರಿಸಿದರು. ಅದಾದ ಮೇಲೆ ‘ಬಿರುಗಾಳಿ’, ‘ಚಿಂಗಾರಿ’, ಚಿತ್ರ ಮಾಡಿದರು. 2013ರಲ್ಲಿ ಶಿವರಾಜ್ ಕುಮಾರ್ ಜೊತೆ ‘ಭಜರಂಗಿ’ ಸಿನಿಮಾ ಮಾಡಿ ದೊಡ್ಡ ಸಕ್ಸಸ್ ಕಂಡರು. ಆದೇ ಖುಷಿಯಲ್ಲಿ ‘ವಜ್ರಕಾಯ’, ‘ಅಂಜನಿಪುತ್ರ’, ‘ಭಜರಂಗಿ 2’, ‘ವೇದ’ ಸಿನಿಮಾಗಳನ್ನೂ ನಿರ್ದೇಶಿಸಿ ಸೈ ಎನಿಸಿಕೊಂಡರು.
ಇನ್ನು, ಈ ವರ್ಷ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟು, ಅಲ್ಲೂ ತಮ್ಮ ಛಾಪು ಹೊತ್ತಿದ್ದಾರೆ. ಅಲ್ಲಿ ‘ಭೀಮ’ ಹೆಸರಿನ ತೆಲು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಆ ಸಂದರ್ಭದಲ್ಲಿ ಟೈಗರ್ ಶ್ರಾಫ್ ಭೇಟಿ ಆಗಿತ್ತು. ಆಗ ಟೈಗರ್ ಶ್ರಾಫ್ ಅವರಿಗೆ ಹರ್ಷ ಅವರ ಕೆಲಸ ಇಷ್ಟ ಆಗಿತ್ತು. ಅವರ ಬಗ್ಗೆ ಆಳವಾಗಿ ತಿಳಿದುಕೊಂಡ ಟೈಗರ್ ಶ್ರಾಫ್, ಇಂಪ್ರೆಸ್ ಆಗಿದ್ದಾರೆ. ಹರ್ಷ ಅವರ ನಡವಳಿಕೆಯೂ ಟೈಗರ್ ಆವರಿಗೆ ಇಷ್ಟವಾಗಿದೆ. ಕಥೆ ಮತ್ತು ನಿರ್ಮಾಣ ಸಂಸ್ಥೆ ಟೈಗರ್ ಶ್ರಾಫ್ ಅವರದ್ದು. ನಿರ್ದೇಶನ ಮಾತ್ರ ಹರ್ಷ ಅವರ ಹೆಗಲಿಗೆ ಬಿದ್ದಿದೆ. ಹರ್ಷ ಬಾಲಿವುಡ್ ಅಂಗಳದಲ್ಲಿ ಮಿಂದೇಳಲು ಸಜ್ಜಾಗಿದ್ದಾರೆ. ಅವರ ಮೊದಲ ಹಿಂದಿ ಸಿನಿಮಾಗೆಇ ದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ ಅನ್ನುವ ಮಾತುಗಳೂ ಈಗ ಕೇಳಿಬರುತ್ತಿವೆ.
ನವೆಂಬರ್ 18ರಿಂದ ಮುಂಬೈನಲ್ಲಿ ಆ ಚಿತ್ರದ ಶೂಟಿಂಗ್ ಶುರುವಾಗುತ್ತಿದೆ ಅನ್ನೋದು ವಿಶೇಷ. ಈಗಾಗಲೇ ಕನ್ನಡದ ಅನೇಕ ನಿರ್ದೇಶಕರು ಬಾಲಿವುಡ್ ಸಿನಿಮಾಗಳ ಹಿಂದೆ ನಿಂತಿದ್ದಾರೆ. ಈ ಹಿಂದೆ ಅಲೆಮಾರಿ ಸಂತು ಕೂಡ ಬಾಲಿವುಡ್ ಅಂಗಳಕ್ಕೆ ಜಿಗಿದು, ಅಲ್ಲಿ ಹಿಂದಿ ಸಿನಿಮಾ ಮಾಡಿದ್ದಾರೆ. ಅಂತೆಯೇ ಒಂದಷ್ಟು ಕನ್ನಡದ ಅನೇಕ ಬರಹಗಾರರು ಅಲ್ಲಿ ಬೀಡು ಬಿಟ್ಟಿದ್ದಾರೆ. ಬಾಲಿವುಡ್ ನಲ್ಲಿ ಕನ್ನಡಿಗರು ಮಿಂಚಿರುವುದು ಎಲ್ಲರಿಗೂ ಗೊತ್ತೇ ಇದೆ. ಅದೇನೆ ಇರಲಿ, ಇತ್ತೀಚೆಗೆ ಕನ್ನಡದ ಪ್ರತಿಭಾವಂತರು ಅಲ್ಲೂ ಸದ್ದು ಮಾಡೋಕೆ ಶುರುಮಾಡುತ್ತಿದ್ದಾರೆ ಅನ್ನೋದು ವಿಶೇಷ.
ಸದ್ಯ ರಿಲೀಸ್ ಆಗಿರುವ ಟೈಗರ್ ಶ್ರಾಫ್ ಪೋಸ್ಟರ್ ಸಖತ್ ಮೆಚ್ಚುಗೆ ಪಡೆಯುತ್ತಿದೆ. ಟೈಗರ್ ಶ್ರಾಫ್ ಅವರು ಕೈಯಲ್ಲಿ ಮಚ್ಚು ಹಿಡಿದು ಕೂತಿರುವ ಫೋಸ್ ನೋಡಿದರೆ, ಅದೊಂದು ಪಕ್ಕಾ ಮಾಸ್ ಸಿನಿಮಾ ಎನಿಸುತ್ತೆ. ಅದಕ್ಕೆ ಗೋಡೆಗಳ ಮೇಲೆ, ಕಮೋಡ್ ಮೇಲೆ, ಮಚ್ಚಿನ ಮೇಲೆ ರಕ್ತದ ಕಲೆ ಕಾಣುತ್ತಿರುವುದೇ ಸಾಕ್ಷಿ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷ ಸೆಪ್ಟೆಂಬರ್ ನಲ್ಲಿ ಈ ಸಿನಿಮಾ ತೆರೆಗೆ ಅಪ್ಪಳಿಸಲಿದೆ.