ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕನ್ನಡದ ಹಿರಿಯ ನಟಿ ಪದ್ಮಜಾ ರಾವ್ ಅವರಿಗೆ ಕೋರ್ಟ್ ಶಾಕ್ ಕೊಟ್ಟಿದೆ. ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯ ಮೂರು ತಿಂಗಳ ಕಾಲ ಕಾರಾಗೃಹ ಶಿಕ್ಷೆ ಹಾಗೂ 40.20 ಲಕ್ಷ ದಂಡ ವಿಧಿಸಿದೆ.
ಮಂಗಳೂರಿನ ವೀರೂ ಟಾಕೀಸ್ ಸಂಸ್ಥೆಯ ಮಾಲೀಕ ಹಾಗೂ ತುಳು ಸಿನೆಮಾ ನಿರ್ದೇಶಕ ವೀರೇಂದ್ರ ಶೆಟ್ಟಿ ಅವರಿಂದ 41 ಲಕ್ಷ ಸಾಲ ಪಡೆದು ಹಿಂದಿರುಗಿಸದೆ ವಂಚಿಸಿರುವ ಆರೋಪದಡಿ ಪದ್ಮಜಾ ರಾವ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಚಾಲಿಪೋಲಿಲು ಎಂಬ ತುಳು ಸಿನೆಮಾ ಮೂಲಕ ನಿರ್ದೇಶಕ ವೀರೇಂದ್ರ ಶೆಟ್ಟಿ ಅವರಿಗೆ ನಟಿ ಪದ್ಮಜಾರಾವ್ ಪರಿಚಯವಾಗಿದ್ರು. ಆ ಮೂಲಕ ವೀರೇಂದ್ರ ಬಳಿ 41 ಲಕ್ಷ ಸಾಲವನ್ನು ಪಡೆದು ಕೊಂಡಿದ್ರು. ಸಾಲದ ಭದ್ರತೆಗಾಗಿ 2020ರ ಜೂನ್17 ರಂದು ಬೆಂಗಳೂರಿನ ಬನಶಂಕರಿ ಶಾಖೆಯ ಐಸಿಐಸಿಐ ಬ್ಯಾಂಕ್ ಖಾತೆಯ ಚೆಕ್ ಸಹ ನೀಡಿದ್ದರು ಎನ್ನಲಾಗಿದೆ.
ನಿಗದಿತ ದಿನದಂದು ಹಣ ಬಾರದೇ ಇದ್ದ ಹಿನ್ನಲೆ ವೀರೇಂದ್ರ ಶೆಟ್ಟಿ ಚೆಕ್ ನಗದೀಕರಿಸಲು ಮುಂದಾಗಿದ್ದಾರೆ. ಆದರೆ ಪದ್ಮಜಾ ರಾವ್ ಬ್ಯಾಂಕ್ ಖಾತೆಯಲ್ಲಿ ಅಷ್ಟೊಂದು ಹಣವಿಲ್ಲದೆ ಚೆಕ್ ಬೌನ್ಸ್ ಆಗಿದೆ. ನಂತರದಲ್ಲಿ ವೀರೇಂದ್ರ ಶೆಟ್ಟಿ ಅವರು ಮಂಗಳೂರಿನ ಕೋರ್ಟ್ ಮೆಟ್ಟಿಲೇರಿದ್ದರು. 15 ದಿನದ ಒಳಗಾಗಿ ಸಾಲ ಮರುಪಾವತಿಸಬೇಕೆಂದು ಕೋರ್ಟ್ 2020 ರ ಜೂನ್ 30 ರಂದು ನೋಟಿಸ್ ನೀಡಿತ್ತು. ಇದಕ್ಕೆ ನಟಿ ಪದ್ಮಜಾ ರಾವ್ ಕ್ಯಾರೆ ಅಂದಿರಲಿಲ್ಲ.
ಸಮನ್ಸ್ ಜಾರಿ ನಂತರ ವಿಚಾರಣೆಗೆ ಹಾಜರಾದ ಪದ್ಮಜಾರಾವ್ ತಾನು ವೀರೇಂದ್ರ ಶೆಟ್ಟಿಯ ಬಳಿ ಯಾವುದೇ ರೀತಿಯ ಸಾಲ ಪಡೆದಿಲ್ಲ. ತಾನು ಯಾವುದೇ ರೀತಿ ಚೆಕ್ ಕೂಡ ನೀಡಿಲ್ಲ ಎಂದಿದ್ರು. ಅದಲ್ಲದೆ ಪದ್ಮಜಾ ಪರ ವಕೀಲರು ತಮ್ಮ ಕಕ್ಷಿದಾರರ ಮನೆಯಿಂದ ಚೆಕ್ ಕಳುವು ಮಾಡಿ ಫೋರ್ಜರಿ ಮಾಡಲಾಗಿದೆ ಎಂದು ಆರೋಪಿದ್ದರು. ಆದರೆ ಇದಕ್ಕೆ ಯಾವುದೇ ರೀತಿಯ ಪುರಾವೆಗಳು ಸಿಕ್ಕಿರಲಿಲ್ಲ.
ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರಿನ ಜೆಎಂಎಫ್‌ಸಿ 2ನೇ ಹಂತದ ನ್ಯಾಯಾಲಯದಲ್ಲಿ ನಡೆದ ವಾದ-ವಿವಾದದಲ್ಲಿ ಪದ್ಮಜಾ ರಾವ್ ಹಣ ನೀಡದೇ ವಂಚಿಸಿರುವುದು ಬೆಳಕಿಗೆ ಬಂದಿದೆ. ಹೀಗಾಗಿಯೇ ನ್ಯಾಯಧೀಶ ಫವಾಜ್ ಪಿ.ಎ. ಅವರ ಪೀಠವು, ದೂರುದಾರನಿಗೆ 40.17 ಲಕ್ಷ ನೀಡುವುದಲ್ಲದೆ 3 ಸಾವಿರವನ್ನು ಸರ್ಕಾರಕ್ಕೆ ದಂಡವಾಗಿ ನೀಡಬೇಕು ಎಂದು ಪದ್ಮಜಾರಾವ್‌ಗೆ ಆದೇಶಿಸಿದ್ದಾರೆ. ಒಂದು ವೇಳೆ ಸಾಲ ಮರುಪಾವತಿ ಹಾಗೂ ದಂಡ ಕಟ್ಟಲು ವಿಫಲವಾದಲ್ಲಿ ಮೂರು ತಿಂಗಳ ಕಾಲ ಕಾರಾಗೃಹ ಶಿಕ್ಷೆ ನೀಡಲಾಗುವುದು ಎಂದು ನ್ಯಾಯಲಯ ಸೂಚಿಸಿದೆ.
ಪದ್ಮಜಾ ರಾವ್ ಅವರು ಭಾಗ್ಯಲಕ್ಷ್ಮಿ ಸಿರಿಯಲ್ನಲ್ಲಿ ಭಾಗ್ಯ ಅವರ ಅತ್ತೆಯ ಪಾತ್ರವನ್ನು ಮಾಡ್ತಿದ್ದಾರೆ. ಅಲ್ಲದೇ, ಮುಂಗಾರು ಮಳೆ ಸಿನಿಮಾದಲ್ಲಿ ಗಣೇಶ್ ಅತ್ತೆಯಾಗಿ, ಭಾರೀ ಖ್ಯಾತಿಯನ್ನು ಗಳಿಸಿದ್ದರು. ಆದ್ರೀಗ, ಚೆಕ್ ವಂಚನೆ ಪ್ರಕರಣದಲ್ಲಿ ಜೈಲು ಸೇರುವಂತಾಗಿರೋದು ನಿಜಕ್ಕೂ ದುರಂತ.