BPL ಕುಟುಂಬಗಳಿಗೆ ಗುಡ್ ನ್ಯೂಸ್ – ಸರ್ಕಾರದಿಂದ ದೊಡ್ಡ ನೆರವು;

ಬಿಪಿಎಲ್ ಕಾರ್ಡ್ ಹೊಂದಿರುವ ಬಡ ಕುಟುಂಬಗಳಿಗೆ ಕರ್ನಾಟಕ ಸರ್ಕಾರದಿಂದ ಒಂದು ಅತ್ಯಂತ ಖುಷಿಯ ವಿಚಾರ ಕೇಳಿಬಂದಿದೆ. ಆರ್ಥಿಕ ಅಡಚಣೆಯಿಂದಾಗಿ ದುಬಾರಿ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆದುಕೊಳ್ಳಲಾಗದ ಬಂಜೆತನದಿಂದ ನೊಂದಿರುವ ದಂಪತಿಗಳಿಗೆ ನೆರವಾಗಲು, ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಹೌದು, ಆಯುಷ್ಮಾನ್ ಭಾರತ್ ಯೋಜನೆಯಡಿ IVF ಚಿಕಿತ್ಸೆಯನ್ನು ಜಾರಿಗೆ ತರಲಾಗಿದೆ.

ಸಾಮಾನ್ಯವಾಗಿ ಐವಿಎಫ್ ಅಂದ್ರೆ ಫಲವತ್ತತೆ ಚಿಕಿತ್ಸೆಗಳಿಗಾಗಿ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಬಡವರಿಗೆ ಇದು ಬ್ರಹ್ಮಪದಾರ್ಥವಿದ್ದಂತೆ. ಇದನ್ನರಿತು ‘ಕರ್ನಾಟಕ ಸರ್ಕಾರವು, ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ-ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ ಕಾರ್ಯವಿಧಾನಗಳನ್ನು ತಂದಿದೆ.

ವಿಧಾನ ಪರಿಷತ್ತಿನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಈ ಯೋಜನೆಯಡಿ IVF, ICSI, ಹಾಗೂ FET ನಂತಹ ಅತ್ಯಾಧುನಿಕ ಚಿಕಿತ್ಸೆಗಳು ಇನ್ನುಮುಂದೆ ಉಚಿತವಾಗಿ ಲಭ್ಯವಾಗಲಿವೆ. ಸದ್ಯಕ್ಕೆ ಈ ಯೋಜನೆಯನ್ನು ಒಂದು ವರ್ಷದ ಅವಧಿಗೆ ಪ್ರಾಯೋಗಿಕ ಆಧಾರದ ಮೇಲೆ ಜಾರಿಗೆ ತರಲಾಗುತ್ತಿದೆ. ಈ ಮೊದಲ ಹಂತದಲ್ಲಿ 120 ಆದ್ಯತಾ ಕುಟುಂಬಗಳು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕಾರ್ಡ್‌ದಾರರಿಗೆ ಮಾತ್ರ ಈ ಪ್ರಯೋಜನ ಸಿಗಲಿದೆ.

ಮಕ್ಕಳಿಲ್ಲದ ಕಾರಣದಿಂದ ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ನೊಂದಿರುವ ಅನೇಕ ಬಡ ದಂಪತಿಗಳಿಗೆ ಇದು ನಿಜಕ್ಕೂ ಒಂದು ಆಶಾಕಿರಣವಾಗಿದೆ ಅಂತ ಹೇಳಬಹುದು. ಸರ್ಕಾರಿ ಆಸ್ಪತ್ರೆಗಳು ಅಥವಾ ಗುರುತಿಸಲಾದ ಆಸ್ಪತ್ರೆಗಳಲ್ಲಿ ಈ ಸೌಲಭ್ಯವನ್ನು ಪಡೆಯಬಹುದು. ಈ ಪ್ರಾಯೋಗಿಕ ಹಂತ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಜನರಿಗೆ ವಿಸ್ತರಿಸುವ ಸಾಧ್ಯತೆಯಿದೆ.

ಬಡವರ ಆರೋಗ್ಯದ ಕಡೆಗೆ ಸರ್ಕಾರ ಕೈಗೊಂಡಿರುವ ಈ ಹೆಜ್ಜೆ ನಿಜಕ್ಕೂ ಶ್ಲಾಘನೀಯ. ದುಬಾರಿ ಚಿಕಿತ್ಸೆಯನ್ನು ಉಚಿತವಾಗಿ ನೀಡುವ ಮೂಲಕ ಅನೇಕ ಕುಟುಂಬಗಳಿಗೆ ಮಗುವಿನ ನಗುವನ್ನು ನೋಡುವ ಭಾಗ್ಯವನ್ನು ಸರ್ಕಾರ ಕಲ್ಪಿಸುತ್ತಿದೆ.

About The Author