ಕಾಂಗ್ರೆಸ್ ನ ಕನಕಪುರದ ಬಂಡೆ ಡಿ.ಕೆ ಶಿವಕುಮಾರ್ ಅವರನ್ನ ಬಿಜೆಪಿ ಟಾರ್ಗೆಟ್ ಮಾಡಿದೆ ಅಂತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ. ರಾಜಕೀಯವಾಗಿ ಎದುರಿಸಬೇಕು. ಅದನ್ನ ಬಿಟ್ಟು ಅಡ್ಡದಾರಿಯಲ್ಲಿ ಈ ರೀತಿ ಮಾಡುವುದು ಸರಿಯಲ್ಲ. ಡಿಕೆಶಿ ಕಳಂಕ ರಹಿತರಾಗಿ ಹೊರಬರುತ್ತಾರೆ. ಬಿಜೆಪಿಯ ಎಲ್ಲಾ ಕುತಂತ್ರವನ್ನ ಭೇದಿಸಿ ಹೊರಬರುತ್ತಾರೆ. ಅವರು ಮತ್ತಷ್ಟು ಶಕ್ತಿಶಾಲಿಯಾಗುತ್ತಾರೆ. ಇದನ್ನ ಧೈರ್ಯವಾಗಿ ಅವರು ಎದುರಿಸುತ್ತಾರೆ ಅಲ್ಲದೆ ಸತ್ಯವನ್ನ ಜನರ ಮುಂದಿಡುತ್ತಾರೆ ಎಂದು ದಿನೇಶ್ ಗುಂಡೂರಾವ್ ಡಿಕೆಶಿ ಬೆನ್ನಿಗೆ ನಿಂತಿದ್ದಾರೆ. ಇದಲ್ಲದೇ ಮಾಧ್ಯಮಗಳು ಇದರ ಬಗ್ಗೆ ಸತ್ಯ ತಿಳಿಸುತ್ತಿಲ್ಲ. ಯಾಕಂದ್ರೆ ಮಾಧ್ಯಮಗಳಿಗೂ ಇವತ್ತು ಆತಂಕವಿದೆ ಅಂತ ದಿನೇಶ್ ಗುಂಡೂರಾವ್ ಆತಂಕ ವ್ಯಕ್ತಪಡಿಸಿದರು.
ಡಿಕೆಶಿ ಬೆಂಬಲಕ್ಕೆ ಪಕ್ಷ ಪೂರ್ಣವಾಗಿ ನಿಲ್ಲಲಿದೆ
ಇನ್ನು ಕಾಂಗ್ರೆಸ್ ಪಕ್ಷ ಡಿಕೆ ಶಿವಕುಮಾರ್ ಪರ ನಿಲ್ಲಲಿದ್ದು, ಬಿಜೆಪಿ ಕುತಂತ್ರದ ವಿರುದ್ಧ ಒಗ್ಗಟ್ಟಾಗಿ ಹೋರಾಡಲಿದೆ. ಮುಂದೆ ಹೋರಾಟದ ರೂಪುರೇಷೆ ರೂಪಿಸ್ತೇವೆ. ಚಿದಂಬರಂ ಯಾವ ರೀತಿ ಅಟ್ಯಾಕ್ ಮಾಡಿದ್ರು ಇದೆಲ್ಲವನ್ನ ನೋಡ್ತಿದ್ರೆ ಪ್ರತಿಪಕ್ಷಗಳನ್ನ ಮೋದಿ-ಅಮಿತ್ ಶಾ ಯಾವ ರೀತಿ ತೆಗೆಯೋಕೆ ಅವರು ಮುಂದಾಗಿದ್ದಾರೆ ಅನ್ನೋದು ಗೊತ್ತಾಗುತ್ತದೆ. ಮೋದಿ-ಶಾ ಪ್ರಜಾಪ್ರಭುತ್ವ ತೆಗೆದು ಸರ್ವಾಧಿಕಾರ ಧೋರಣೆ ತಾಳ್ತಿದ್ದಾರೆ. ಅವರು ಮಾಡಿದ್ದೇ ಸರಿ ಅಂತ ಸಮರ್ಥಿಸಿಕೊಳ್ತಿದ್ದಾರೆ. ನಾವು ಎಲ್ಲ ಹೋರಾಟಕ್ಕೂ ಸಜ್ಜಾಗಿದ್ದೇವೆ ಅಂತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗುಡುಗಿದ್ರು.