Political News: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷವಾಗಿದ್ದು, ನಾಳೆ ಸಾಧನಾ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ತುಮಕೂರಿನಲ್ಲಿ ಇಂದು ಕೂಡ ಕಾರ್ಯಕ್ರಮ ನಡೆದಿದ್ದು, ಬಿಜೆಪಿ ನಾಯಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದಿರುವ ಸಿ.ಟಿ.ರವಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸಿದ್ದಕ್ಕೆ ಸಾಧನಾ ಸಮಾವೇಶ ನಡೆಸುತ್ತಿದೆ. ‘ಸಾಧನಾ ಸಮಾವೇಶ’ ಸರ್ಕಾರ ಅಂತಹ ಯಾವ ಗಮನಾರ್ಹ ಸಾಧನೆ ಮಾಡಿದೆ ಮುಖ್ಯಮಂತ್ರಿಗಳೇ? ರಾಜ್ಯದ ಬೊಕ್ಕಸವನ್ನು ಸಂಪೂರ್ಣ ಖಾಲಿ ಮಾಡಿ, ಸಾಲದ ಹೊರೆಯನ್ನು ರಾಜ್ಯದ ಎಲ್ಲ ನಾಗರಿಕರ ಮೇಲೆ ಹೊರಿಸಿದ್ದು ಸಾಧನೆಯೇ? ದಿನದಿಂದ ದಿನಕ್ಕೆ ರಾಜ್ಯದ ಸಾಲ ಹೆಚ್ಚುತ್ತಿದ್ದು, ಅಭಿವೃದ್ಧಿಗೆ ಒಂದು ರೂಪಾಯಿ ಬಿಡುಗಡೆಯಾಗದ ಸ್ಥಿತಿಗೆ ತಳ್ಳಿದ್ದನ್ನೂ ಸಂಭ್ರಮಿಸುತ್ತೀರೇ? ಎಂದು ಪ್ರಶ್ನಿಸಿದ್ದಾರೆ.
ಮುಡಾ ಹಗರಣ, ಕೆಪಿಎಸ್‌ಸಿ ಹಗರಣ, ಕೆಐಎಡಿಬಿ ಹಗರಣಗಳು ಈ ಸರ್ಕಾರದ ಸಾಧನೆಯೇ? ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಾಗಿದ್ದ ವಾಲ್ಮೀಕಿ ನಿಗಮದ ಬ್ಯಾಂಕ್ ಖಾತೆಯನ್ನು ಲೂಟಿ ಹೊಡೆದು, ಹಣ ದುರ್ಬಳಕೆ ಮಾಡಿದ್ದು ಸಾಧನೆಯೇ? ಒಳ ಮೀಸಲಾತಿ ಹೆಸರಿನಲ್ಲಿ ಸಮುದಾಯಗಳು ಪರಸ್ಪರ ಜಗಳಾಡುವಂತೆ ಮಾಡಿ, ಬಿಜೆಪಿ ನೀಡಿದ್ದ ಹೆಚ್ಚುವರಿ ಮೀಸಲಾತಿಯನ್ನು ಕಡಿತಗೊಳಿಸಿದ್ದು ಕಾಂಗ್ರೆಸ್ ಸಾಧನೆಯೇ? ಎಂದು ರವಿ ಪ್ರಶ್ನಿಸಿದ್ದಾರೆ.
ಉಡ್ತಾ ಪಂಜಾಬ್ ಮಾದರಿಯಲ್ಲಿ ಉಡ್ತಾ ಕರ್ನಾಟಕ ಆಗುತ್ತಿದ್ದು, ಎಲ್ಲೆಡೆ ಡ್ರಗ್ಸ್ ಹಾವಳಿ ಮಿತಿಮೀರುತ್ತಿದೆ. ಇದನ್ನು ತಡೆಗಟ್ಟಲು ಸಂಪೂರ್ಣ ವಿಫಲರಾಗಿ, ಯುವ ಜನರು ಹಾದಿ ತಪ್ಪುವಂತೆ ಮಾಡಿರುವುದು ಕಾಂಗ್ರೆಸ್ ಸರ್ಕಾರದ ಸಾಧನೆಯೇ?
ಕಬ್ಬು, ಭತ್ತ ಬೆಳೆಗಾರರಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಯನ್ನೂ ಪಾವತಿಸದೆ, ತಿಂಗಳುಗಳ ಕಾಲ ಅನ್ನದಾತರನ್ನು ಬೀದಿಯಲ್ಲಿ ನಿಲ್ಲಿಸಿದ್ದು ಕಾಂಗ್ರೆಸ್ ಪಕ್ಷದ ಸಾಧನೆಯೇ ಸರಿ! ಬೌರಿಂಗ್ ಆಸ್ಪತ್ರೆಯ ತಡೆಗೋಡೆ ಸರಿಪಡಿಸಲಾಗದೆ, 7 ಅಮಾಯಕರ ಪ್ರಾಣ ಕಸಿದದ್ದು ಸಿದ್ದರಾಮಯ್ಯನವರ ಸಾಧನೆಯೇ? ಮೈಸೂರಿನ ಚೆಲುವಾಂಬಾ ಆಸ್ಪತ್ರೆಯಲ್ಲಿ ನೂರಾರು ಸಂಖ್ಯೆಯಲ್ಲಿ ಅಮಾಯಕ ಹಸುಳೆಗಳು ಸಾವಿಗೀಡಾಗಿದ್ದಾರೆ. ಇದನ್ನೂ ಸಾಧನೆಯ ಪಟ್ಟಿಗೆ ಸೇರಿಸುತ್ತೀರೇ? ಎಂದು ರವಿ ಪ್ರಶ್ನಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳಿಲ್ಲ, ಡಯಾಲಿಸಿಸ್ ಸೇವೆಗಳಿಲ್ಲ. ಜನರ ಜೀವಕ್ಕೆ ಬೆಲೆಯಿಲ್ಲದಂತೆ ಮಾಡಿರುವುದು ಸಂಭ್ರಮಿಸಬೇಕಾದ ಸಾಧನೆಯೇ ಹೌದು!
ಗುತ್ತಿಗೆದಾರರಿಂದ 60% ಕಮಿಷನ್ ಹೊಡೆದು, ಗುತ್ತಿಗೆದಾರರು ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ತಳ್ಳಿದ ಭ್ರಷ್ಟ ಸರ್ಕಾರ ಸಾಧನಾ ಸಮಾವೇಶ ಮಾಡುತ್ತಿದೆ! ಈಗಾಗಲೇ ರಾಜ್ಯದ ಆರ್ಥಿಕತೆಯನ್ನು ಹಳ್ಳ ಹಿಡಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಕೊಂಚವಾದರೂ ನಾಚಿಗೆ ಇದ್ದರೆ, ತಕ್ಷಣವೇ ಈ ವೈಫಲ್ಯದ ಸಮಾವೇಶವನ್ನು ರದ್ದುಗೊಳಿಸಬೇಕು. ಜನರನ್ನು ಮೋಸಗೊಳಿಸಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಬೀಳುವ ಒಂದೊಂದು ಮತವೂ ಭ್ರಷ್ಟ ಕಾಂಗ್ರೆಸ್ ಪಕ್ಷ ಠೇವಣಿ ಕಳೆದುಕೊಳ್ಳುವಂತೆ ಮಾಡಲಿದೆ ಎಂದು ರವಿ ಎಚ್ಚರಿಕೆ ನೀಡಿದ್ದಾರೆ.




