ರಾಜ್ಯದ ಪ್ರಯಾಣಿಕರಿಗೆ ಮತ್ತೊಂದು ಆರ್ಥಿಕ ಹೊರೆಯ ಶಾಕ್ ಈಗ ಎದುರಾಗಲಿದೆ. ಎಸ್ ‘ಡೀಸೆಲ್ ಬೆಲೆ ಏರಿಕೆ ಹಾಗೂ ತೀವ್ರ ನಷ್ಟದ ಸುಳಿಯಲ್ಲಿ ಸಿಲುಕಿರುವ ಸಾರಿಗೆ ಇಲಾಖೆಯು, KSRTC ಮತ್ತು BMTC ಸೇರಿದಂತೆ ಎಲ್ಲಾ ನಾಲ್ಕೂ ರಸ್ತೆ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರವನ್ನು ಶೀಘ್ರದಲ್ಲೇ ಹೆಚ್ಚಿಸುವ ಗಂಭೀರ ಚಿಂತನೆಯಲ್ಲಿದೆ ಅಂತ ಕೇಳಿ ಬಂದಿದೆ. ಬನ್ನಿ ಇದರ ಕಂಪ್ಲೀಟ್ ಡೀಟೇಲ್ಸ್ ಈಗ ನೋಡೋಣ.
ಹೌದು ‘ಇತ್ತೀಚಿನ ದಿನಗಳಲ್ಲಿ ಡೀಸೆಲ್ ದರ ಸತತವಾಗಿ ಏರಿಕೆಯಾಗುತ್ತಿರುವುದರಿಂದ ರಾಜ್ಯದ ಸಾರಿಗೆ ಇಲಾಖೆಗೆ ಪ್ರತಿವಾರ ಬರೋಬ್ಬರಿ 7 ಕೋಟಿ ರೂಪಾಯಿಗಳ ಆರ್ಥಿಕ ಹೊರೆ ಬೀಳುತ್ತಿದೆ. ಈ ನಿರಂತರ ನಷ್ಟವನ್ನು ಸರಿದೂಗಿಸಿಕೊಂಡು ಬಂಡಿ ನಡೆಸುವುದು ಹೇಗೆ ಎಂಬ ಚಿಂತೆಯಲ್ಲಿರುವ ಸರ್ಕಾರ, ಪ್ರಯಾಣ ದರವನ್ನು ಪರಿಷ್ಕರಿಸುವುದು ಅನಿವಾರ್ಯ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ಸುಳಿವು ನೀಡಿದ್ದಾರೆ.
ಈ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದ್ದು, ವರದಿ ಬಂದ ಬಳಿಕ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ. ಇನ್ನೊಂದೆಡೆ, ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ ಯೋಜನೆ’ಯು ಸಾರಿಗೆ ನಿಗಮಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈ ಯೋಜನೆಯಡಿ ಬಸ್ಗಳು ನಿರಂತರವಾಗಿ ಓಡುತ್ತಿದ್ದರೂ, ಸರ್ಕಾರದಿಂದ ನಿಗಮಗಳಿಗೆ ಬರಬೇಕಾದ ಸಾವಿರಾರು ಕೋಟಿ ರೂಪಾಯಿ ಬಾಕಿ ಹಣ ಇನ್ನೂ ಬಿಡುಗಡೆಯಾಗಿಲ್ಲ. ನಾಲ್ಕೂ ನಿಗಮಗಳಿಗೆ ಸರ್ಕಾರದಿಂದ ಬರೋಬ್ಬರಿ 5,418 ಕೋಟಿ ರೂಪಾಯಿ ಹಣ ಪಾವತಿಯಾಗಬೇಕಿದ್ದು, ಹಣಕಾಸಿನ ಅಭಾವದಿಂದ ಕನಿಷ್ಠ ಬಸ್ಗಳ ಸ್ಪೇರ್ ಪಾರ್ಟ್ಸ್ ಕೊಳ್ಳಲೂ ಹಣವಿಲ್ಲದೆ ನಿಗಮಗಳು ಕಂಗಾಲಾಗಿವೆ.
ಕೂಡಲೇ ಬಾಕಿ ಹಣ ಬಿಡುಗಡೆ ಮಾಡುವಂತೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಸಾರಿಗೆ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ಸಾರಿಗೆ ನಿಗಮಗಳ ಆರ್ಥಿಕ ಬಿಕ್ಕಟ್ಟು ಹಾಗೂ ದರ ಏರಿಕೆಯ ಭೀತಿಯು ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುವಂತೆ ಮಾಡಿದೆ. ಈ ಕುರಿತು ಸರ್ಕಾರದ ಮುಂದಿನ ಹೆಜ್ಜೆ ಹೇಗಿರಲಿದೆ ಎಂಬುದನ್ನ ಕಾದು ನೋಡಬೇಕು..




