ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಅವರಿಗೆ ನ್ಯಾಯಾಲಯದಲ್ಲಿ ಮತ್ತೊಂದು ದೊಡ್ಡ ಹಿನ್ನಡೆ ಎದುರಾಗಿದೆ. ಹೌದು ‘ಕೋರ್ಟ್‌ಗೆ ವೈಯಕ್ತಿಕ ಹಾಜರಾತಿಯಿಂದ ವಿನಾಯತಿ ಕೋರಿ ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಅಧಿಕೃತವಾಗಿ ವಜಾಗೊಳಿಸಿದೆ!
ನ್ಯಾಯಾಲಯದಲ್ಲಿ ಈ ಅರ್ಜಿಯ ವಿಚಾರಣೆ ನಡೆದಾಗ, ವಿಶೇಷ ಸರ್ಕಾರಿ ಅಭಿಯೋಜಕರು ‘ಪ್ರಸನ್ನ ಕುಮಾರ್’ ಅವರು ಅರ್ಜಿಯನ್ನು ಮಾನ್ಯ ಮಾಡದಂತೆ ಅತ್ಯಂತ ಬಲವಾಗಿ ವಾದ ಮಂಡಿಸಿದ್ದರು.
ಈ ಹಿಂದೆ ದರ್ಶನ್ ಅವರನ್ನು ಕೋರ್ಟ್‌ಗೆ ಕರೆತಂದಾಗ ಅಭಿಮಾನಿಗಳು ಹಾಗೂ ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿ, ಇಡೀ ನ್ಯಾಯಾಲಯದ ಆವರಣವೇ ಉಸಿರುಗಟ್ಟುವ ವಾತಾವರಣ ಸೃಷ್ಟಿಯಾಗಿತ್ತು. ಅಷ್ಟೇ ಯಾಕೆ, ದೋಷಾರೋಪಣೆ ಪಟ್ಟಿ ಸಿದ್ಧಪಡಿಸುವ ವೇಳೆ ಕೋರ್ಟ್ ಭರ್ತಿಯಾಗಿದ್ದರಿಂದ ನ್ಯಾಯಾಧೀಶರ ಮಾತೇ ಆರೋಪಿಗಳಿಗೆ ಕೇಳಿಸದೆ ಅರ್ಧ ದಿನ ವ್ಯರ್ಥವಾಗಿತ್ತು ಎಂಬ ಅಂಶವನ್ನು ಎಸ್‌ಪಿಪಿ ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಇನ್ನು ಪ್ರಸ್ತುತ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ ಭದ್ರತೆಯ ದೊಡ್ಡ ಸವಾಲಿದೆ. ಇಂತಹ ಸಂದರ್ಭದಲ್ಲಿ ದರ್ಶನ್ ಅವರನ್ನು ಖುದ್ದು ಹಾಜರುಪಡಿಸಿದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂದು ಎಸ್‌ಪಿಪಿ ವಾದಿಸಿದ್ದಾರೆ!
ಪ್ರಮುಖ ಸಾಕ್ಷಿಗಳ ವಿಚಾರಣೆ ನಡೆಯುತ್ತಿರುವ ಈ ಸೂಕ್ಷ್ಮ ಹಂತದಲ್ಲಿ ದರ್ಶನ್ ಕೋರ್ಟ್‌ಗೆ ಬಂದರೆ ಜನಸ್ತೋಮ ಹೆಚ್ಚಾಗಲಿದೆ ಎಂಬ ಪ್ರಸನ್ನ ಕುಮಾರ್ ಅವರ ಈ ಸ್ಟ್ರಾಂಗ್ ವಾದವೇ ಈಗ ದರ್ಶನ್ ಅವರಿಗೆ ಮುಳ್ಳಾಗಿದೆ. ನ್ಯಾಯಾಲಯ ಕೂಡ ಈ ವಾದವನ್ನು ಪುರಸ್ಕರಿಸಿ ಅರ್ಜಿಯನ್ನು ವಜಾ ಮಾಡಿದೆ.
ಒಟ್ಟಿನಲ್ಲಿ ನಟ ದರ್ಶನ್‌ಗೆ ಕಾನೂನು ಹೋರಾಟದಲ್ಲಿ ದಿನದಿಂದ ದಿನಕ್ಕೆ ಕಷ್ಟಗಳು ಹೆಚ್ಚಾಗುತ್ತಿವೆ. ಈ ಪ್ರಕರಣದ ಮುಂದಿನ ಬೆಳವಣಿಗೆಗಳು ಹೇಗಿರಲಿವೆ ಎಂಬುದನ್ನು ಕಾದು ನೋಡಬೇಕಿದೆ.




