ಚಿತ್ರದುರ್ಗ : ದೇಶದಲ್ಲಿ ಶೇಕಡಾ 70 ರಷ್ಟು ಜನರು ಜಿಎಸ್‌ಟಿ ಪಾವತಿಸುತ್ತಿದ್ದಾರೆ. ಇದರಿಂದ ಶ್ರೀಮಂತ ವರ್ಗದವರಿಗೆ ಅನುಕೂಲವಾಗುತ್ತಿದೆ. ಹಾಲು, ಮೊಸರು ಅರಿಶಿಣ -ಕುಂಕುಮಕ್ಕೂ ಶೇಕಡಾ 60 ರಿಂದ 70ರಷ್ಟು ಜಿಎಸ್‌ಟಿ ಕಟ್ಟಬೇಕಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಜಿಎಸ್‌ಟಿಯಿಂದ ದೇಶದಲ್ಲಿ ಶ್ರೀಮಂತರಿಗೆ ಅನುಕೂವಾಗಿದೆ. ಇಲ್ಲಿ ಎಲ್ಲದಕ್ಕೂ ತೆರಿಗೆ ಭರಿಸಬೇಕಾದ ಸ್ಥಿತಿಗೆ ದೇಶವನ್ನು ತಂದಿಟ್ಟಿದ್ದಾರೆ. ಅದಿರಲ್ಲಿ ಸುಡುಗಾಡಿಗೆ ಹೋಗಿ ತೆಂಗಿನಕಾಯಿ ಒಡೆದರೂ ಜಿಎಸ್‌ಟಿ ಕಟ್ಟಬೇಕಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಅಗತ್ಯ ವಸ್ತುಗಳೂ ಸೇರಿದಂತೆ ಎಲ್ಲವೂಗಳ ಮೇಲೆ ಜಿಎಸ್‌ಟಿ ಹೇರಿದ್ದಾರೆ. ಇವರೆಲ್ಲ ಜನರಿಗೆ ಸುಳ್ಳು ಹೇಳಿ ಪಿಕ್ಚರ್ ನಡೆಸಿಕೊಂಡು ಹೋಗುತ್ತಿದ್ದಾರೆ. ಜನಸಾಮಾನ್ಯರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು ಹದಿನಾರುವರೆ ಲಕ್ಷ ಕೋಟಿ ರೂಪಾಯಿ ಶ್ರೀಮಂತರ ಸಾಲ ಮನ್ನಾ ಆಗಿದೆ. ಆದರೆ ಇದರಿಂದ ರೈತರು, ಬಡವರು ಹಾಗು ಮಧ್ಯಮ ವರ್ಗಕ್ಕೆ ಯಾವುದೇ ಅನುಕೂಲವಾಗಿಲ್ಲ. ಅಲ್ಲದೆ ಯಾವ ಕ್ಯಾಶ್ ಲೆಸ್? ಕೌಂಟರ್ ಫೇಕ್ ನೋಟ್ಸ್ ಪತ್ತೆ ಆಗ್ತಿದ್ದು, ಸುಮಾರು 26,000 ಕೋಟಿಯಷ್ಟು 2 ಸಾವಿರರ ನೋಟನ್ನು ಆರ್‌ಬಿಐ ಪತ್ತೆ ಹಚ್ಚಿದೆ. 1 ಲಕ್ಷ 14 ಸಾವಿರ ಕೋಟಿಯಷ್ಟು 500 ರೂ. ಮುಖಬೆಲೆಯ ನೋಟು ಫೇಕ್ ಕರೆನ್ಸಿಯಾಗಿ ಸಿಗುತ್ತಿದೆ. ಆದರೆ ಇದನ್ನೆಲ್ಲ ಬಿಟ್ಟು ಕೇಂದ್ರ ಸರ್ಕಾರದವರು ಜನರನ್ನು ವಂಚಿಸುತ್ತಿದ್ದಾರೆ ಎಂದು ಸಚಿವ ಲಾಡ್ ಕೇಂದ್ರ ಸರ್ಕಾರದ ವಾಗ್ದಾಳಿ ನಡೆಸಿದ್ದಾರೆ.