ತಂತ್ರಜ್ಞಾನ ದಿಗ್ಗಜ ಗೂಗಲ್ 1.3 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಎಐ ಹಬ್ ಯೋಜನೆ ಕರ್ನಾಟಕದ ಕೈತಪ್ಪಿ ಆಂಧ್ರ ಪ್ರದೇಶದ ಪಾಲಾಗಿದೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಜೆಡಿಎಸ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಟ್ವೀಟ್ ಮಾಡಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ಟೀಕಿಸಿದೆ. ಗೂಗಲ್‌ನ ಈ ಮಹತ್ವದ ಹೂಡಿಕೆಯ ಯೋಜನೆ ಕರ್ನಾಟಕಕ್ಕೆ ಬಾರದಿರುವುದು ರಾಜ್ಯಕ್ಕೆ ದೊಡ್ಡ ಹೊಡೆತವಾಗಿದೆ ಎಂದು ಜೆಡಿಎಸ್ ಹೇಳಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಗತಿಗೆ ಗ್ರಹಣ ಹಿಡಿದಂತಾಗಿದೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ. ನಗರದ ರಸ್ತೆ ಗುಂಡಿಗಳು, ಮೂಲಸೌಕರ್ಯಗಳ ಕೊರತೆ ಹಾಗೂ ಐಟಿ ಸಚಿವ ಪ್ರಿಯಾಂಕ್ ಖರ್ಗೆಯ ನಿರ್ಲಕ್ಷ್ಯದಿಂದಾಗಿ 1.3 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯ ಈ ಯೋಜನೆ ಕೈತಪ್ಪಿದೆಯೆಂದು ಆರೋಪಿಸಲಾಗಿದೆ. ಗೂಗಲ್ ಸಂಸ್ಥೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಎಐ ಹಬ್ ಸ್ಥಾಪಿಸಲು ಆಂಧ್ರ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಯೋಜನೆಯಡಿ 30,000 ಉದ್ಯೋಗ ಸೃಷ್ಟಿಯಾಗುವ ಜೊತೆಗೆ ವರ್ಷಕ್ಕೆ 10,000 ಕೋಟಿ ರೂಪಾಯಿಗಳ ಆದಾಯ ದೊರಕುವ ನಿರೀಕ್ಷೆ ಇದೆ.
ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು, ಕಸದ ಸಮಸ್ಯೆ ಮತ್ತು ಮೂಲಸೌಕರ್ಯಗಳ ಹೀನಾಯ ಸ್ಥಿತಿ ಕಾರಣದಿಂದ ಕಾರ್ಪೊರೇಟ್ ವಲಯ ಈಗಾಗಲೇ ಅಸಮಾಧಾನಗೊಂಡಿತ್ತು. ಈ ಪರಿಸ್ಥಿತಿಯಲ್ಲೇ ಇಂತಹ ದೊಡ್ಡ ಮಟ್ಟದ ಹೂಡಿಕೆ ಯೋಜನೆ ನೆರೆ ರಾಜ್ಯಕ್ಕೆ ಹೋಗಿರುವುದು ರಾಜ್ಯ ಸರ್ಕಾರದ ವೈಫಲ್ಯವನ್ನೇ ತೋರಿಸುತ್ತದೆ ಎಂದು ಜೆಡಿಎಸ್ ಕಿಡಿಕಾರಿದೆ. ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವುದಕ್ಕಿಂತ ಅವರನ್ನು ಬೆದರಿಸುವ ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ನಿಷ್ಪ್ರಯೋಜಕ ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆಯ ನಿರ್ಲಕ್ಷ್ಯವೇ ಈ ಯೋಜನೆ ಕೈತಪ್ಪಲು ಕಾರಣ ಎಂದು ಜೆಡಿಎಸ್ ಟ್ವೀಟ್‌ನಲ್ಲಿ ಆರೋಪಿಸಿದೆ.
ಈ ವಿಷಯಕ್ಕೆ ಸಾಮಾಜಿಕ ಮಾಧ್ಯಮದಲ್ಲೂ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕಿರಣ್ ಮಜುಂದಾರ್ ಸತ್ಯ ಹೇಳಿದರೆ ಸರ್ಕಾರವೇ ಅವರ ಮೇಲೆ ಮುಗಿ ಬೀಳುತ್ತದೆ. ಇಂತಹ ಸರ್ಕಾರದಿಂದ ಇನ್ನೇನು ನಿರೀಕ್ಷೆ ಮಾಡಬಹುದು? ಎಂದು ಒಬ್ಬ ಬಳಕೆದಾರ ಕಿಡಿಕಾರಿದ್ದರೆ, ಮತ್ತೊಬ್ಬರು ಬೆಂಗಳೂರು ನಗರವನ್ನು ಅವೈಜ್ಞಾನಿಕವಾಗಿ ವಿಸ್ತರಿಸಿದ ಪರಿಣಾಮ ಅದು ಈಗ ತಿಪ್ಪೆಗುಂಡಿಯಂತಾಗಿದೆ ಎಂದು ತೀವ್ರ ಟೀಕೆ ಮಾಡಿದ್ದಾರೆ. ಒಟ್ಟಿನಲ್ಲಿ, ಗೂಗಲ್‌ನ ಎಐ ಹಬ್ ಯೋಜನೆ ಕೈತಪ್ಪಿರುವುದು ಕರ್ನಾಟಕದ ಹೂಡಿಕೆ ವಲಯಕ್ಕೆ ದೊಡ್ಡ ಹಿನ್ನಡೆ ಎಂಬ ಅಭಿಪ್ರಾಯ ಸಾಮಾಜಿಕ ಹಾಗೂ ರಾಜಕೀಯ ವಲಯಗಳಲ್ಲಿ ವ್ಯಕ್ತವಾಗುತ್ತಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ