ಬೆಂಗಳೂರು : ದೇವನಹಳ್ಳಿ ಭೂಸ್ವಾಧೀನದ ವಿರುದ್ಧದ ಹೋರಾಟದಲ್ಲಿ ರೈತರು ಜಯಗಳಿಸಿದ್ದಾರೆ. ಸತತ ಮೂರು ವರ್ಷಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಬ್ರೇಕ್ ಹಾಕಿದ್ದಾರೆ. ಈ ಮೂಲಕ ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಕೈ ಬಿಟ್ಟಿದೆ ಎಂದು ಘೋಷಿಸಿದ್ದರು. ಆದರೆ ಇದಾದ ಬಳಿಕ ಆಂಧ್ರಪ್ರದೇಶದ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವ ನಾರಾ ಲೋಕೇಶ್, ರಾಜ್ಯದ ಉದ್ಯಮಿಗಳನ್ನು ಆಹ್ವಾನಿಸಿ ಹೊಸ ಚರ್ಚೆಗೆ ಕಾರಣವಾಗಿದ್ದರು.
ನೀವು ನಮ್ಮಲ್ಲಿ ಜಾಗನೋಡಿ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಸಚಿವ ನಾರಾ ಓಪನ್ ಆಫರ್ ನೀಡಿದ್ದರು. ಆದರೆ ಆಂಧ್ರಪ್ರದೇಶದ ಕುತಂತ್ರಕ್ಕೆ ಹಾಗೂ ನಾರಾ ಲೋಕೇಶ್ ವಿರುದ್ಧ ರಾಜ್ಯ ಸರ್ಕಾರದ ಸಚಿವರು ಸಿಡಿದೆದ್ದಿದ್ದಾರೆ. ನಾರಾ ಲೋಕೇಶ್ ನಡೆಯನ್ನು ಖಂಡಿಸಿರುವ ಕೈ ನಾಯಕರು ಒಬ್ಬೊಬ್ಬರಾಗಿಯೇ ಆಂಧ್ರದ ಸಚಿವನ ವಿರುದ್ಧ ಮುಗಿಬೀಳುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಡಿಫೆನ್ಸ್ ಹಾಗೂ ಏರೋಸ್ಪೇಸ್ ಪಾರ್ಕ್ ಸ್ಥಾಪನೆಗೆ ದೇವನಹಳ್ಳಿಯಲ್ಲಿ ಆಗಬೇಕಿದ್ದ ಭೂಸ್ವಾಧೀನವನ್ನು ರೈತರ ಹಿತದೃಷ್ಟಿಯಿಂದ ಕೈಬಿಡಬೇಕಾಯಿತು. ಆದರೆ ಈ ಉದ್ಯಮಿಗಳು ಕೇಳಿದ ಕಡೆ ಜಮೀನು ನೀಡಲಾಗುವುದು. ಆಂಧ್ರ ಪ್ರದೇಶದ ಸಚಿವ ನಾರಾ ಲೋಕೇಶ್ ಕರೆದಾಕ್ಷಣ ಯಾವ ಉದ್ಯಮಿಯೂ ಇಲ್ಲಿಂದ ಅಲ್ಲಿಗೆ ಹೋಗಿಬಿಡುವುದಿಲ್ಲ ಎಂದು ಕೌಂಟರ್ ನೀಡಿದ್ದಾರೆ.
ರಾಜ್ಯವು ವೈಮಾನಿಕ ಅಂತರಿಕ್ಷ ವಲಯದಲ್ಲಿ ದೇಶದ ಶೇಕಡಾ 65ರಷ್ಟು ಪಾಲನ್ನು ಹೊಂದಿದೆ. ಜಾಗತಿಕ ಮಟ್ಟದಲ್ಲಿ ನಮ್ಮಲ್ಲಿ ಮೂರನೇ ಅತ್ಯುತ್ತಮ ಕಾರ್ಯಕೈಗೊಳ್ಳುವ ವಾತಾವರಣವಿದೆ. ಉದ್ಯಮಗಳಿಗೆ ಭೂಮಿ ಕೊಟ್ಟಮಾತ್ರಕ್ಕೆ ಅವರೆಲ್ಲ ಅಲ್ಲಿಗೆ ಹೋಗುವುದಿಲ್ಲ. ಕಾರ್ಯ ಮಾಡುವ ವಾತಾವರಣ, ಪರಿಸರವೂ ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕುಟುಕಿದ್ದಾರೆ.
ಇನ್ನೂ ಆಂಧ್ರದ ಸಚಿವ ನಾರಾ ಲೋಕೇಶ್ ಅವರ ಟ್ವೀಟ್ ಅನ್ನು ನಾನೂ ನೋಡಿದ್ದೇನೆ. ನಾನೂ ಅಲ್ಲೇ ಉತ್ತರ ಕೊಟ್ಟಿದ್ದೇನೆ. ಎಂಬಿ ಪಾಟೀಲ್‌ಗೂ ಸಾಮರ್ಥ್ಯವಿದೆ, ಕರ್ನಾಟಕ ರಾಜ್ಯವೂ ಸಮರ್ಥವಾಗಿದೆ. ರಾಜ್ಯದ ಅನೇಕ ಕಡೆಗಳಲ್ಲಿ ಏರೋಸ್ಪೇಸ್ ಮಾತ್ರವಲ್ಲ, ಎಐ, ಡೀಪ್ ಟೆಕ್, ಐಟಿ ಹೀಗೆ ಎಲ್ಲಾ ತರಹದ ಉದ್ಯಮಗಳಿಗೂ ಭೂಮಿ ಇದೆ ಎಂದು ತಿಳಿಸಿದ್ದಾರೆ.
ಏರೋಸ್ಪೇಸ್ ಉದ್ಯಮಿಗಳಿಗೆ ಕೇವಲ ಭೂಮಿಯಲ್ಲ, ಅದರ ಜೊತೆಗೆ ನೀರು, ವಿದ್ಯುತ್ ಎಲ್ಲ ಸೌಲಭ್ಯವನ್ನೂ ನೀಡುತ್ತೇವೆ. ರಾಜ್ಯದಲ್ಲಿ ಕೈಗಾರಿಕಾ ಪ್ರದೇಶಗಳಿಗೆ ನಮ್ಮ ಪಾಲಿನ ನೀರು ಬಳಸಿಕೊಳ್ಳಲು 3,600 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರ ಯೋಜನೆಯನ್ನೇ ರೂಪಿಸಲಾಗಿದೆ. ಹೀಗಿರುವಾಗ ಒಬ್ಬೇ ಒಬ್ಬ ಉದ್ಯಮಿಯೂ ಕರ್ನಾಟಕದಿಂದ ಹೊರಹೋಗಲು ನಾನು ಬಿಡುವುದಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ್ ಭರವಸೆ ನೀಡಿದ್ದಾರೆ
ಅಲ್ಲದೆ ಆಂಧ್ರದ ಸಚಿವ ನಾರಾ ಲೋಕೇಶ್ ಉದ್ಯಮಿಗಳನ್ನು ಆಹ್ವಾನಿಸಿರುವ ಈ ವಿಚಾರಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಕೂಡ ಪ್ರತಿಕ್ರಿಯಿಸಿದ್ದು, ಹೂಡಿಕೆದಾರರನ್ನು ಇತರ ರಾಜ್ಯಗಳಿಗೆ ಹೋಗಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ಕರ್ನಾಟಕ ಸರ್ಕಾರವು ದೇವನಹಳ್ಳಿಯಲ್ಲಿ ಭೂಮಿ ನೀಡಲು ಸಾಧ್ಯವಾಗದಿದ್ದರೆ, ಹೂಡಿಕೆದಾರರಿಗೆ ಪರ್ಯಾಯ ಸ್ಥಳವನ್ನು ನೀಡಲಿದೆ. ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡಿನಂತಹ ಇತರ ರಾಜ್ಯಗಳಿಗೆ ಹೂಡಿಕೆದಾರರು ಹೋಗಲು ನಾವು ಬಿಡುವುದಿಲ್ಲ. ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ನಾವು ಖಂಡಿತವಾಗಿಯೂ ಅವರನ್ನು ಮನವೊಲಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.