Thursday, May 1, 2025

Latest Posts

ಮೆಟ್ರೊದಲ್ಲಿಲ್ಲ ಕರುನಾಡಿಗರಿಗೆ ಕೆಲಸದ ಭಾಗ್ಯ – ಬಿಎಂಆರ್‌ಸಿಎಲ್‌ ವಿರುದ್ಧ ಸಿಡಿದೆದ್ದ ಕನ್ನಡಿಗರು

- Advertisement -

Bengaluru News: ಟಿಕೆಟ್‌ ದರ ಏರಿಕೆಯಿಂದ ಸುದ್ದಿಯಲ್ಲಿರುವ ಬೆಂಗಳೂರಿನ ನಮ್ಮ ಮೆಟ್ರೊ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದೆ. ಮೆಟ್ರೊದಲ್ಲಿ ಖಾಲಿ ಇರುವ ಲೋಕೊ ಪೈಲಟ್‌ ಹುದ್ದೆಗಳನ್ನು ನೇಮಕ ಮಾಡಲು ಹೊರಟಿರುವ ಬಿಎಂಆರ್‌ಸಿಎಲ್‌ ಈ ಹುದ್ದೆಗಳಿಂದ ಕನ್ನಡಿಗರನ್ನು ದೂರ ಇಡಲು ಮುಂದಾಗಿದೆ ಎನ್ನುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಮುಖವಾಗಿ ಮೆಟ್ರೊದಲ್ಲಿ ನಡೆದ ಈ ಹಿಂದಿನ ನೇಮಕಾತಿಗಳಲ್ಲಿ ಇದ್ದ ಪದ್ದತಿಯನ್ನು ಕೈಬಿಡಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ. ಇದರಿಂದ ಕನ್ನಡಿಗರಿಗೆ ಅನ್ಯಾಯವಾಗಲಿದೆ. ಬಿಎಂಆರ್‌ಸಿಎಲ್‌ ವತಿಯಿಂದ ಈ ಮೊದಲು ಆಯ್ಕೆಯಾದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡು ತರಬೇತಿ ನೀಡಿ ಅವರನ್ನು ಚಾಲಕರನ್ನಾಗಿ ಮಾಡಲಾಗುತ್ತಿತ್ತು. ಇದರಿಂದ ಅರ್ಜಿ ಹಾಕಿ ಆಯ್ಕೆಯಾದವರಿಗೆ ಸುಲಭವಾಗಿ ಮೆಟ್ರೊದಲ್ಲಿ ಕೆಲಸ ಸಿಗುವ ಅವಕಾಶಗಳಿದ್ದವು. ಆದರೆ ಈ ಬಾರಿ ಅದನ್ನು ಮಾಡದೆ ಮೆಟ್ರೊದ ಆಡಳಿತ ಮಂಡಳಿ ವಿಧಿಸಿರುವ ಷರತ್ತು ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ.

ನೇಮಕಾತಿ ಷರತ್ತುಗಳಲ್ಲಿ ಮತ್ತಷ್ಟು ಬಿಗಿ ಮಾಡಿರುವ ಬಿಎಂಆರ್‌ಸಿಎಲ್‌ ಎಂಜಿನಿಯರಿಂಗ್‌ನ ವಿಭಾಗದಲ್ಲಿ ಡಿಪ್ಲೋಮಾ ಪದವಿಯನ್ನು ಪಡೆದಿರಬೇಕು. ಅಲ್ಲದೆ ಮುಖ್ಯವಾಗಿ ದೇಶದ ಯಾವುದೇ ಮೆಟ್ರೊದಲ್ಲಿ ಚಾಲಕರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು. ಈ ಎಲ್ಲ ಅರ್ಹತೆಗಳನ್ನು ಹೊಂದಿರುವವರು ಮಾತ್ರ ಚಾಲಕ ಹುದ್ದೆಗೆ ಅರ್ಜಿ ಹಾಕುವಂತೆ ತಿಳಿಸಿರುವ ಬಿಎಂಆರ್‌ಸಿಎಲ್‌ ನಡೆಯು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಅಲ್ಲದೆ ಮೆಟ್ರೊ ವಿಧಿಸಿರುವ ಶಿಕ್ಷಣದ ಷರತ್ತನ್ನು ನಾವು ಒಪ್ಪಿಕೊಳ್ಳಬಹುದು. ಆದರೆ ಅನುಭವ ಇರಬೇಕು ಎಂಬ ಮಾನದಂಡವೇ ಕನ್ನಡಿಗರು ಅರ್ಜಿ ಹಾಕಲು ತೊಡಕಾಗಲಿದೆ. ಇನ್ನೂ 5 ವರ್ಷದ ಅವಧಿಗಳ ಕಾಲ ಗುತ್ತಿಗೆ ಆಧಾರದ ಮೇಲೆ ನಡೆಯುವ ಈ ನೇಮಕಾತಿ ಪ್ರಕ್ರಿಯೆಯಲ್ಲಿ 50 ಚಾಲಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಲ್ಲದೆ 5 ವರ್ಷಗಳ ಅವಧಿಯನ್ನು ಮೀರಿಯೂ ಚಾಲಕರ ಬದ್ಧತೆಯ ಮೇಲೆ ಅವರನ್ನು ಮುಂದುವರೆಸಲು ಅವಕಾಶವಿದೆ ಎಂದು ಬಿಎಂಆರ್‌ಸಿಎಲ್‌ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.

ಕನ್ನಡಿಗರ ವಿರೋಧ ಕಟ್ಟಿಕೊಂಡ್ರೆ ಮೆಟ್ರೊ ಓಡಾಡುವುದು ಕಷ್ಟ..

ಇನ್ನೂ ಕೇಂದ್ರ ಸರ್ಕಾರದ ಕಚೇರಿಗಳಲ್ಲಿನ ಉದ್ಯೋಗಗಳಲ್ಲಿ ಕನ್ನಡಿಗರಿಗೆ ದೊಡ್ಡ ಅನ್ಯಾಯ ಮಾಡಲಾಗುತ್ತಿದೆ. ಬ್ಯಾಂಕಿಂಗ್‌ ಹಾಗೂ ರೈಲ್ವೆಗಳಲ್ಲಿ ಕನ್ನಡಿಗರನ್ನು ಹೊರಗಿಡಲು ನಿರಂತರವಾಗಿ ಕುತಂತ್ರ ನಡೆಸಲಾಗುತ್ತಿದೆ. ಆದರೆ ಈಗ ರಾಜ್ಯ ಸರ್ಕಾರದ ಸಂಸ್ಥೆಯಲ್ಲೂ ಕನ್ನಡಿಗರನ್ನು ಕಡೆಗಣಿಸಲು ಮುಂದಾಗಿರುವುದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಮ್ಮ ಮೆಟ್ರೊದಲ್ಲಿ ಅನ್ಯ ಭಾಷಿಕರಿಗೆ ಮಣೆ ಹಾಕುವ ಮೂಲಕ ಕನ್ನಡಿಗರಿಗೆ ಅಪಚಾರವೆಸಗಲು ಮೆಟ್ರೊ ಹೊರಡಿಸಿರುವ ಅಧಿಸೂಚನೆಯನ್ನು ಕೂಡಲೇ ಹಿಂಪಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ. ಇನ್ನೂ ನಮ್ಮ ಮೆಟ್ರೊ ಕನ್ನಡಿಗರಿಗೆ ಮೋಸ ಮಾಡಿ, ಕನ್ನಡದ ಮಕ್ಕಳಿಗೆ ಅನ್ಯಾಯವೆಸಗಿ, ವಿರೋಧ ಕಟ್ಟಿಕೊಂಡರೆ ಬೆಂಗಳೂರಲ್ಲಿ ಮೆಟ್ರೊ ಓಡಾಡುವುದು ಕಷ್ಟವಾಗುತ್ತದೆ ಎಂದು ಬಿಎಂಆರ್‌ಸಿಎಲ್‌ಗೆ ನಾರಾಯಣ ಗೌಡ ಎಚ್ಚರಿಸಿದ್ದಾರೆ.

ಒಟ್ನಲ್ಲಿ.. ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರಿಗೆ ಉದ್ಯೋಗಗಳು ದೊರೆಯಬೇಕು. ಆದರೆ ಕನ್ನಡಿಗರಿಂದ ಲಾಭ ಪಡೆಯುವ, ಅದರಲ್ಲೂ ರಾಜ್ಯ ಸರ್ಕಾರದಿಂದ ನಿರ್ವಹಣೆಯಾಗುವ ಮೆಟ್ರೊದಲ್ಲಿ ಕನ್ನಡಿಗರಿಗೇನೆ ಉದ್ಯೋಗಕ್ಕೆ ಅವಕಾಶ ಇಲ್ಲ ಎನ್ನುವುದು ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯವೇ ಆಗಿದೆ. ಹೀಗಾಗಿ ಕನ್ನಡಿಗರ ಹಿತ ರಕ್ಷಣೆ ಮಾಡಲು ಮುಂದಾಗುವ ಮೂಲಕ ಈ ಕೂಡಲೇ ಮೆಟ್ರೊ ಹೊರಡಿಸಿರುವ ಆದೇಶವನ್ನುಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಮೆಟ್ರೊ ಕನ್ನಡಿಗರ ವಿರೋಧ ಕಟ್ಟಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ..

- Advertisement -

Latest Posts

Don't Miss