ರಾಯಚೂರು : ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂದ್ರೆ ಇದೇ ಅನ್ಸುತ್ತೆ. ಕೆಐಎಡಿಬಿ ಹಾಗೂ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಕಾರ್ಮಿಕರಿಗಾಗಿ ಬರೋಬ್ಬರಿ 208 ಕೋಟಿ ಅನುದಾನದಲ್ಲಿ ನಿರ್ಮಿಸಿರೋ 300 ಮನೆಗಳು ಬಿರುಕು ಬಿಟ್ಟು ಹಾಳಾಗ್ತಿದ್ದು, ಅನೈತಿಕ ಚಟುವಟಿಕೆಗೆ ದಾರಿಯಾಗಿದೆ. ಎಲ್ಲೆಂದರಲ್ಲಿ ಬಿದ್ದಿರೋ ಮದ್ಯದ ಬಾಟಲಿಗಳು, ಸಿಗರೇಟ್ ಪ್ಯಾಕ್ ಗಳು. ಬಿರುಕು ಬಿಟ್ಟಿರೋ ಅತ್ಯಾಕರ್ಷಕ ಮನೆಗಳು, ಮುರಿದಿರೋ ಬಾಗಿಲು ಹಾಗೂ ಕಿಟಕಿಗಳು. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು, ರಾಯಚೂರು ನಗರದ ಯರಮರಸ್ ಬಳಿ. ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ, ಕೆಐಎಡಿಬಿ ವತಿಯಿಂದ ನಿರ್ಮಿಸಲಾಗಿರುವ ನೂರಾರು ಮನೆಗಳು ಉದ್ಘಾಟನೆಗೂ ಮುನ್ನವೇ ಶಿಥಿಲಾವಸ್ಥೆಗೆ ತಲುಪಿವೆ. ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿ ಕೈಗಾರಿಕೆಗಳ ಕಾರ್ಮಿಕರು, ಉದ್ಯೋಗಸ್ಥರಿಗಾಗಿ ನಿರ್ಮಿಸಿದ ವಿವಿಧ ಹಂತದ ನೂರಾರು ಮನೆಗಳು ಹಂಚಿಕೆಯಾಗದೆ ಹಾಗೇ ಉಳಿದಿವೆ. ಮನೆಗಳಲ್ಲಿ ಯಾರೂ ವಾಸಮಾಡದೇ ಅನೈತಿಕ ಚಟುವಟಿಕೆಗಳಿಗೆ ಪ್ರದೇಶ ಆಸರೆಯಾಗಿದೆ. ರಾಯಚೂರು ನಗರದಲ್ಲಿ ಕೆಐಎಡಿಬಿಯಿಂದ ಕೈಗಾರಿಕೆ ಅಭಿವೃದ್ದಿಗಾಗಿ 3,000 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಇಲ್ಲಿ ಯಾವುದೇ ಕೈಗಾರಿಕೆ ಅಭಿವೃದ್ದಿಯಾಗಿಲ್ಲ. ಈ ಮಧ್ಯೆ ಆರ್ಟಿಪಿಎಸ್(RTPS), ವೈಟಿಪಿಎಸ್ (YTPS) ಸೇರಿದಂತೆ ಇತರೆ ಕಾರ್ಮಿಕರಿಗಾಗಿಯೇ 300 ಮನೆಗಳನ್ನು ನಿರ್ಮಿಸಿ ಅವುಗಳನ್ನು ಕಡಿಮೆ ದರದಲ್ಲಿ ಕಾರ್ಮಿಕರಿಗೆ ಹಂಚಬೇಕಾಗಿತ್ತು. ಆದರೆ ಸರಿಯಾದ ಸಮಯಕ್ಕೆ ಹಂಚಿಕೆ ಮಾಡದೇ ಇರುವುದರಿಂದ ಈ ಮನೆಗಳೂ ದುಬಾರಿಯಾಗಿವೆ. ಮನೆಗಳು ಹಂಚಿಕೆಯಾಗದೆ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಆರ್ಥಿಕ ನಷ್ಟ ಉಂಟಾಗಿದೆ. ಬೆಂಗಳೂರು ನಗರ ಮಟ್ಟದ ದರವನ್ನು ನಿಗದಿ ಮಾಡಿದ್ದರಿಂದ ಮಧ್ಯಮ ವರ್ಗದ ಕಾರ್ಮಿಕರು ಈ ಮನೆಗಳನ್ನು ಖರೀದಿಸಲು ಹಿಂಜರಿದಿದ್ದಾರೆ. ಇದರಿಂದಾಗಿ ನಿರ್ಮಾಣವಾಗಿ 7 ವರ್ಷವಾದರೂ ಮನೆಗಳು ವಾಸವಿಲ್ಲದೆ ಹಾಳಾಗಿವೆ. ಅನೈತಿಕ ಚಟುವಟಿಕೆಯ ಕೇಂದ್ರಗಳಾಗಿವೆ. ಇವುಗಳ ನಿರ್ಮಾಣಕ್ಕಾಗಿ 208 ಕೋಟಿ ರೂಪಾಯಿ ಖರ್ಚು ಮಾಡಿದರೂ ಪ್ರಯೋಜನವಾಗದೆ ಸರಕಾರದ ದುಡ್ಡು ವ್ಯರ್ಥವಾಗಿದೆ. ಪ್ರಾರಂಭದಲ್ಲೊಂದು ದರ ನಿಗದಿ ಮಾಡಿದ್ದ ಕೆಐಎಡಿಬಿ, ನಂತರದಲ್ಲಿ ಮತ್ತೊಂದು ದರ ನಿಗದಿ ಮಾಡಿತು. ಹೀಗೇ ಅವೈಜ್ಞಾನಿಕ ದರ ನಿಗದಿ ಮಾಡಿ ಎಡವಟ್ಟು ಮಾಡಿದ್ರಿಂದ ಮನೆಗಳು ಭೂತ ಬಂಗಲೆಗಳಾಗಿವೆ ಅಲ್ಲದೇ ಸ್ಕ್ವೆಯರ್ ಫೀಟ್ ಗೆ 4000 ದಿಂದ 4500ರೂ ದರ ನಿಗದಿ ಮಾಡಿದೆ. ಆದ್ರೆ ರಿಯಲ್ ಎಸ್ಟೇಟ್ ನಲ್ಲೂ ಈ ದರ ಇಲ್ಲ. ರಾಯಚೂರು ನಗರದಲ್ಲಿ ಇದಕ್ಕಿಂತ ಕಡಿಮೆ ದರದಲ್ಲಿ ಮನೆ ಹಾಗೂ ಸೈಟ್ ಗಳು ಲಭ್ಯವಾಗ್ತವೆ. ಕೆಐಎಡಿಬಿ ನಿರ್ಮಿಸಿರುವ ಒಂದು ಮನೆ ಕೊಂಡುಕೊಳ್ಳಲು ಬರೋಬ್ಬರಿ 12-30 ಲಕ್ಷ ಬೇಕಾಗುತ್ತದೆ. ಅಂದಿನ ಕೈಗಾರಿಕ ಸಚಿವ ಮುರುಗೇಶ ನಿರಾಣಿಯವರು (Industry Minister Murugesh Nirani) ವಿಶೇಷ ಕಾಳಜಿ ವಹಿಸಿ ಮನೆಗಳ ನಿರ್ಮಾಣಕ್ಕೆ ಮುಂದಾಗಿದ್ರು ಕಂಪ್ಲೀಟ್ ಪ್ಲಾನ್ ಫೈಲ್ಯೂರ್ ಆಗಿದ್ದಲ್ಲದೇ ಇಷ್ಟೊಂದು ಬೃಹತ್ ಪ್ರಮಾಣದ ಮನೆಗಳನ್ನ ನಿರ್ಮಿಸಿ, ಸಾವಿರಾರು ಸೈಟ್ ಗಳಿದ್ರೂ ಜಿಲ್ಲೆಯಲ್ಲಿ ಕೆಐಎಡಿಬಿ ಅಧಿಕಾರಿ ಇಲ್ಲದೇ ಇರೋದೂ ಈ ಸಮಸ್ಯೆಗೆ ಕಾರಣವಾಗಿದೆ. ನೂರಾರು ರೈತರ ಸಾವಿರಾರು ಎಕರೆ ಭೂಮಿಯನ್ನ ವಶಪಡಿಸಿಕೊಂಡಿರೋ ಸರ್ಕಾರ ಹಾಗೂ ಕೆಐಎಡಿಬಿ, ನಿವೇಶನ ಮಾಡಿ ಮನೆಗಳನ್ನ ನಿರ್ಮಾಣ ಮಾಡಿ ನೂರಾರು ಕೋಟಿ ಹಣವನ್ನ ನೀರಿನಲ್ಲಿ ಹೋಮ ಮಾಡಿದೆ. ಇನ್ಮೇಲಾದ್ರೂ ಕೆಐಎಡಿಬಿ ಹಾಗೂ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ವೈಜ್ಞಾನಿಕ ದರವನ್ನ ನಿಗದಿ ಮಾಡಿ, ಕಾರ್ಮಿಕರಿಗೆ ಮನೆಗಳನ್ನ ಹಂಚಿಕೆ ಮಾಡಬೇಕಿದೆ.
ಅನಿಲ್ ಕುಮಾರ್, ಕರ್ನಾಟಕ ಟಿವಿ, ರಾಯಚೂರು.