Kolar News: ಇಂದು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ವಿವಿಧ ಇಲಾಖೆಯ ಸುಮಾರು 3,200 ಕೋಟಿ ರೂಪಾಯಿಯ ಸರ್ವತೋಮುಖ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಸಿಎಂ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಡಿಕೆಶಿ, ಅಧಿಕಾರವು ಶಕ್ತಿಯ ಸಂಕೇತವಲ್ಲ, ಅದೊಂದು ಜವಾಬ್ದಾರಿಯ ಸಂಕೇತ. ಅಧಿಕಾರವನ್ನು ನಾವು ಸಿಂಹಾಸನವೆಂದು ತಿಳಿದಿಲ್ಲ, ಬದಲಾಗಿ ಜನಸೇವೆಗೆ ಸಿಕ್ಕಿರುವ ಅವಕಾಶ ಎಂದು ಭಾವಿಸಿ ಕೆಲಸ ಮಾಡುತ್ತಿದ್ದೇವೆ. ಮೂರ್ತಿಗೆ ಬೆಲೆ ಕಟ್ಟಬಹುದು, ಆದರೆ ದೇವರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ದೇವರು. ನೀವು ನಮಗೆ ಆಶೀರ್ವಾದ ಮಾಡಿ, ನಿಮ್ಮ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದೀರಿ.
ನಂಜೇಗೌಡರು ರಾಜ್ಯಕ್ಕೆ ಆದರ್ಶ ಶಾಸಕರು. ಇಂತಹ ಶಾಸಕರನ್ನು ಪಡೆದ ನಿಮ್ಮ ಕ್ಷೇತ್ರಕ್ಕೆ ಅವರು 3,200 ಕೋಟಿ ರೂ. ಅನುದಾನವನ್ನು ತಂದಿದ್ದಾರೆ. ಕೋವಿಡ್ ಸಮಯದಲ್ಲಿ ರೈತರ ಬೆಳೆಗೆ ಮಾರುಕಟ್ಟೆ ಇಲ್ಲದಿದ್ದಾಗ, ನಾವು ಇಲ್ಲಿಂದಲೇ ತರಕಾರಿ ಖರೀದಿಸಿ ಬೆಂಗಳೂರಿನ ಜನರಿಗೆ ಉಚಿತವಾಗಿ ಹಂಚಿದ್ದೆವು. ಈ ಜಿಲ್ಲೆಯ ರೈತರನ್ನು ರಾಜ್ಯದ ಜನತೆ ಸದಾ ಸ್ಮರಿಸಬೇಕು. ಇಲ್ಲಿ ಅಂತರ್ಜಲ ಮಟ್ಟ 2,000 ಅಡಿಗೆ ಕುಸಿದಾಗಲೂ ಕಂಗೆಟ್ಟು ಆತ್ಮಹತ್ಯೆಗೆ ಶರಣಾಗದೆ; ಬೆಂಗಳೂರಿಗೆ ಹಾಲು, ತರಕಾರಿ, ರೇಷ್ಮೆ ಹಾಗೂ ಹೂವು ಬೆಳೆದು ಪೂರೈಸುವ ಮೂಲಕ ರೈತರು ತಮ್ಮ ಸ್ವಾಭಿಮಾನವನ್ನು ಮೆರೆದಿದ್ದಾರೆ.
ನಂಜೇಗೌಡರು ನಿಮಗೆ ಮಾತು ಕೊಟ್ಟಿದ್ದರು. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ; ಅವರು ಆ ಮಾತನ್ನು ಉಳಿಸಿಕೊಂಡಿದ್ದಾರೆ ಎಂಬುದಕ್ಕೆ ಈ ಕಾರ್ಯಕ್ರಮವೇ ಉದಾಹರಣೆ. ತಮಗೆ ಸಿಕ್ಕ ಅವಕಾಶದಲ್ಲಿ ಇಂತಹ ಜನಪರ ಯೋಜನೆಗಳ ಮೂಲಕ ಅವರು ಅಭಿವೃದ್ಧಿಯ ಸಾಕ್ಷಿಗುಡ್ಡೆ ನಿರ್ಮಿಸಿದ್ದಾರೆ. ನಮ್ಮದು ರೈತರ ಕಣ್ಣೀರು ಒರೆಸುವ ಸರ್ಕಾರ. ಕೃಷಿ ನಿಮ್ಮೆಲ್ಲರ ಸಂಸ್ಕೃತಿ, ರೈತರು ನಮ್ಮೆಲ್ಲರ ಆಸ್ತಿ. ಕಾಯಕದಿಂದ ನಾಯಕತ್ವ ಸಿಗುತ್ತದೆ, ಜನಪರವಾಗಿದ್ದರೆ ಮಾತ್ರ ಅಧಿಕಾರ ಒಲಿಯುತ್ತದೆ. ‘ಅಧಿಕಾರ ನಶ್ವರ, ಸಾಧನೆ ಅಜರಾಮರ, ಮತದಾರರೇ ಈಶ್ವರ’ ಎಂದು ಭಾವಿಸಿ ನಾವು ನಿಮ್ಮನ್ನು ದೇವರಂತೆ ಕಾಣುತ್ತಿದ್ದೇವೆ.
ನಮ್ಮ ಏಳನೇ ಗ್ಯಾರಂಟಿಯೇ ‘ನೀರಿನ ಗ್ಯಾರಂಟಿ’. ‘ಎತ್ತಿನಹೊಳೆ ಯೋಜನೆ ಅಸಾಧ್ಯ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರು ಲೇವಡಿ ಮಾಡುತ್ತಿದ್ದಾರೆ. ಯಾವುದೂ ಸುಲಭವಾಗಿ ಒಲಿಯುವುದಿಲ್ಲ, ಈ ಯೋಜನೆಯೂ ಕಷ್ಟಕರವಾಗಿದೆ. ಆದರೆ ನಾವು ಪ್ರಯತ್ನ ಪಡಬೇಕಲ್ಲವೇ? ಪಶ್ಚಿಮ ಘಟ್ಟದಿಂದ ಹಾಸನದ ಮೂಲಕ ನೀರು ತಂದು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸಲಾಗುವುದು.
ತುಮಕೂರುವರೆಗೂ ನೀರು ತರುವ ಪ್ರಯತ್ನ ಮಾಡಲಾಗಿದೆ. ಈಗಾಗಲೇ ನಾವು ಕೆ.ಸಿ. ವ್ಯಾಲಿ ಯೋಜನೆಯ ಮೂಲಕ 104 ಕೆರೆಗಳಿಗೆ ನೀರು ತುಂಬಿಸಿದ್ದೇವೆ. ಎತ್ತಿನಹೊಳೆ ಯೋಜನೆಯನ್ನು 2027ರ ವೇಳೆಗೆ ಪೂರ್ಣಗೊಳಿಸಲು ಸಂಕಲ್ಪ ಮಾಡಿದ್ದೇವೆ. ಹೆಚ್.ಎನ್. ವ್ಯಾಲಿ ಯೋಜನೆಯಡಿ 65 ಕೆರೆಗಳನ್ನು ತುಂಬಿಸುವ ಕೆಲಸ ನಡೆಯುತ್ತಿದೆ. 700ಕ್ಕೂ ಹೆಚ್ಚು ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ತುಂಬಿಸಲು ಮುಂದಾಗಿದ್ದೇವೆ. ಅಂತರ್ಜಲ ಮಟ್ಟ ಹೆಚ್ಚಾಗಬೇಕು, ಕೆರೆಗಳಿಗೆ ಹಾಗೂ ರೈತರ ಜಮೀನುಗಳಿಗೆ ನೀರು ತಲುಪಬೇಕು ಎಂಬುದು ನಮ್ಮ ಉದ್ದೇಶ. ಹೀಗಾಗಿ, ಆಗಸ್ಟ್ 15ರಂದು ನಮ್ಮ ಸರ್ಕಾರ ಹಮ್ಮಿಕೊಂಡಿರುವ ಹೊಸ ಯೋಜನೆಗಳನ್ನು ಪ್ರಕಟಿಸಲಿದ್ದೇವೆ.
ನಮ್ಮ ಸರ್ಕಾರದಲ್ಲಿ ಕೇವಲ ನಾನು ಹಾಗೂ ಸಿದ್ದರಾಮಯ್ಯನವರು ಮಾತ್ರ ಸಾಧನೆ ಮಾಡಿಲ್ಲ; ನಮ್ಮ ಸಚಿವರೂ ಸಹ ತಮ್ಮ ತಮ್ಮ ಇಲಾಖೆಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ನಮಗೆ ಆಧಾರಸ್ತಂಭವಾಗಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ. ಮಂತ್ರಿಮಂಡಲದಲ್ಲಿ ಈ ಜಿಲ್ಲೆಗೆ ಸಚಿವ ಸ್ಥಾನ ನೀಡಲು ಸಾಧ್ಯವಾಗಿಲ್ಲ. ಆದರೆ, ಈ ಜಿಲ್ಲೆಯ ಪ್ರತಿ ಶಾಸಕರೂ ನನಗೆ ಮುಖ್ಯಮಂತ್ರಿಗಳು ಹಾಗೂ ಸಚಿವರ ಸಮಾನರು. ಅವರಿಗೆ ಶಕ್ತಿ ತುಂಬುವ ಕೆಲಸವನ್ನು ನಾನು ಮಾಡುತ್ತೇನೆ, ಅದು ನನ್ನ ಕರ್ತವ್ಯ.
ಈಗಾಗಲೇ ಬಜೆಟ್ನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯ ಘೋಷಣೆಯಾಗಿದೆ. ಜೊತೆಗೆ ಕೋಲಾರ ಎಪಿಎಂಸಿಗೆ 60 ಎಕರೆ ಜಮೀನು ಮಂಜೂರು ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಯಾವುದೇ ಕಾರಣಕ್ಕೂ ನಿಮ್ಮ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ. ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ.




