Koppala News: ವಿಶೇಷ ತೀವ್ರ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಮತ್ತು ಬಿಜೆಪಿ ನಡುವಿನ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ಎಸ್‌ಐಆರ್ ಪ್ರಕ್ರಿಯೆ ಕುರಿತು ರಾಯರೆಡ್ಡಿ ತಿಳುವಳಿಕೆಯಿಂದ ಮಾತನಾಡಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ನವೀನಕುಮಾರ್ ಗುಳಗಣ್ಣವರ ಆಗ್ರಹಿಸಿದ್ದಾರೆ.
ಕೊಪ್ಪಳದಲ್ಲಿ ಈ ಕುರಿತು ಪ್ರಕಟಣೆ ನೀಡಿರುವ ಬಿಜೆಪಿ ಜಿಲ್ಲಾ ಅಧ್ಯಕ್ಷ ನವೀನಕುಮಾರ್ ಈ. ಗುಳಗಣ್ಣವರ, ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಭಾರತೀಯ ಚುನಾವಣಾ ಆಯೋಗದ ಸ್ವಾಯತ್ತ ಹಾಗೂ ನಿಯಮಬದ್ಧ ಕಾರ್ಯವಾಗಿದ್ದು, ಈ ಪ್ರಕ್ರಿಯೆಯಲ್ಲಿ ಕೇಂದ್ರ ಸಚಿವರು ಅಥವಾ ರಾಜಕೀಯ ನಾಯಕರು ಮಧ್ಯಪ್ರವೇಶ ಮಾಡುವ ಅಧಿಕಾರ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೂತ್ ಮಟ್ಟದ ಅಧಿಕಾರಿಗಳಿಗೆ ಕಾರ್ಯನಿರ್ವಹಿಸಲು ಚುನಾವಣಾ ಆಯೋಗವೇ ನಿರ್ದೇಶನ ನೀಡುತ್ತದೆ. ಹೀಗಿರುವಾಗ ಎಸ್‌ಐಆರ್ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರದೊಂದಿಗೆ ತಳಕು ಹಾಕುವುದು ಹಾಗೂ ಕೇಂದ್ರ ಸಚಿವರ ಮೇಲೆ ಆರೋಪ ಮಾಡುವುದು ಸಂಪೂರ್ಣ ಆಧಾರರಹಿತ ಮತ್ತು ವಾಸ್ತವಕ್ಕೆ ವಿರುದ್ಧವಾಗಿದೆ ಎಂದು ಅವರು ಟೀಕಿಸಿದ್ದಾರೆ.
ಧಾರ್ಮಿಕ ಸ್ಥಳವೊಂದರ ಒಳಗೆ ಎಸ್‌ಐಆರ್ ಪ್ರಕ್ರಿಯೆ ನಡೆದಿರುವುದು ನಿಜವಾಗಿದ್ದರೆ, ಅದರ ಹೊಣೆಗಾರಿಕೆ ಸ್ಥಳೀಯ ಆಡಳಿತ ಮತ್ತು ರಾಜ್ಯ ಪೊಲೀಸ್ ಇಲಾಖೆಯ ಮೇಲಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದ್ದು, ಅದನ್ನು ಕೇಂದ್ರ ಸರ್ಕಾರದ ಪಿತೂರಿ ಎಂದು ಬಿಂಬಿಸುವುದು ತಮ್ಮ ವೈಫಲ್ಯವನ್ನು ಮುಚ್ಚಿಹಾಕುವ ಪ್ರಯತ್ನ ಎಂದು ಗುಳಗಣ್ಣವರ ಆರೋಪಿಸಿದ್ದಾರೆ.
ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಬಸವರಾಜ ರಾಯರೆಡ್ಡಿ ವಿಚಲಿತರಾಗಿ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ರಾಜಕೀಯ ಆರೋಪ ಮಾಡುವ ಬದಲು ವಾಸ್ತವಾಂಶಗಳನ್ನು ತಿಳಿದು ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದು ಸಲಹೆ ನೀಡಿದರು. ಎಸ್‌ಐಆರ್ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಆರೋಪ-ಪ್ರತ್ಯಾರೋಪಗಳು ಮತ್ತಷ್ಟು ತೀವ್ರಗೊಂಡಿದ್ದು, ಚುನಾವಣಾ ಆಯೋಗದ ಸ್ವಾಯತ್ತತೆ, ರಾಜ್ಯ ಸರ್ಕಾರದ ಹೊಣೆಗಾರಿಕೆ ಮತ್ತು ರಾಜಕೀಯ ಆರೋಪಗಳ ವಿಚಾರ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.




