ಪ್ರತಿ ವರ್ಷ ಕಾವೇರಿ ನೀರು ಬಿಡುವ ವಿವಾದದಿಂದ ಸುದ್ದಿಯಲ್ಲಿರೋ ಕೆಆರ್‌ಎಸ್ ಅಣೆಕಟ್ಟು, ಈ ಬಾರಿ ಬೇರೆಯದ್ದೇ ಕಾರಣಕ್ಕೆ ದಾಖಲೆ ನಿರ್ಮಿಸಿದೆ. ಕಳೆದ ಹಲವಾರು ವರ್ಷಗಳಿಂದ ಸರಿಯಾದ ಅವಧಿಯಲ್ಲಿ ಭರ್ತಿಯಾಗದ ಕೆಆರ್‌ಎಸ್, ಈ ವರ್ಷ ಮಳೆಯ ಕೃಪೆಯಿಂದ ಒಂದೇ ಸಾಲಿನಲ್ಲಿ ಮೂರನೇ ಬಾರಿಗೆ ಸಂಪೂರ್ಣ ಭರ್ತಿಯಾಗಿ ಹೊಸ ಇತಿಹಾಸ ನಿರ್ಮಿಸಿದೆ.
ಸಾಧಾರಣವಾಗಿ ಜುಲೈ ಅಥವಾ ಆಗಸ್ಟ್‌ನಲ್ಲಿ ತುಂಬೋ ಡ್ಯಾಂ, ಈ ಬಾರಿ ಜೂನ್‌ನಲ್ಲೇ ಭರ್ತಿಯಾದದ್ದು ದಾಖಲೆ ಆಗಿತ್ತು. ಈಗ ಹಿಂಗಾರು ಮಳೆಯಲ್ಲಿಯೂ ಮತ್ತೆ ಸಂಪೂರ್ಣ ತುಂಬಿ, ಕೆಆರ್‌ಎಸ್ ಡ್ಯಾಂ ದಾಖಲೆಗಳ ಮೇಲೆಯೇ ದಾಖಲೆ ಬರೆದಿದೆ. 124.80 ಅಡಿ ಸಾಮರ್ಥ್ಯ ತಲುಪಿದ ಹಿನ್ನೆಲೆ, ಕಾವೇರಿ ನದಿಗೆ ಪ್ರತಿ ಸೆಕೆಂಡ್‌ಗೆ 20 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಕಾವೇರಿ ನೀರಾವರಿ ನಿಗಮ ನದಿ ಪಕ್ಕದ ಜನರಿಗೆ ಎಚ್ಚರಿಕೆ ನೀಡಿದೆ. ನದಿಗೆ ಇಳಿಯಬೇಡಿ, ಸುರಕ್ಷಿತ ಸ್ಥಳಕ್ಕೆ ತೆರಳಿ ಎಂದು. ಈ ಬಾರಿ ಹಿಂಗಾರು ಮಳೆಯ ಕೃಪೆಯಿಂದ ಮಂಡ್ಯದ ರೈತರಿಗೆ ನಿಜವಾದ ಸಂತಸ ಬಂದಿದೆ. ಕೆಆರ್‌ಎಸ್ ಮತ್ತೆ ತುಂಬಿದ ಸುದ್ದಿ, ನಿಜಕ್ಕೂ ಕರ್ನಾಟಕದ ಜನರಿಗೂ ರೈತರಿಗೂ ನೆಮ್ಮದಿಯ ಮಳೆಗಾಲದ ಉಡುಗೊರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

