ಕಾಂಗ್ರೆಸ್ ಸರ್ಕಾರದ ವಿರುದ್ಧ ಆರಂಭದಲ್ಲಿ ತೊಡೆ ತಟ್ಟಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಬಳಿಕ ಸೈಲೆಂಟ್ ಆಗಿದ್ರು. ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡುವುದರಲಿ, ಮಾಧ್ಯಮಗಳ ಮುಂದೆ ಕಾಣಿಸಿದ್ದೇ ಇಲ್ಲ. ಆರೋಗ್ಯ ಕೆಟ್ಟಿದ್ದರಿಂದ ದೆಹಲಿಯಲ್ಲೇ ಸೆಟಲ್ ಆಗಿದ್ದರು. ವೈದ್ಯರ ಸೂಚನೆಯಂತೆ ವಿಶ್ರಾಂತಿಗೆ ಮೊರೆ ಹೋಗಿದ್ದರು.
ಅಕ್ಟೋಬರ್ ಅಂತ್ಯದವರೆಗೆ ಸುಮ್ಮನಿರಿ. ಕುಮಾರಸ್ವಾಮಿ ಅವರಿಗೆ ವಿಶ್ರಾಂತಿ ಬೇಕಾಗಿದೆ ಎಂದು ದೊಡ್ಡಗೌಡರು ನಿರ್ದೇಶನ ಹಿನ್ನೆಲೆ ಸ್ವಲ್ಪ ವಿರಾಮ ನೀಡಲಾಗಿತ್ತು. ಆದ್ರೀಗ ದೀರ್ಘಕಾಲದ ವಿಶ್ರಾಂತಿ ನಂತರ ಕುಮಾರಸ್ವಾಮಿ ರಾಜ್ಯಕ್ಕೆ ಆಗಮಿಸಿದ್ದಾರೆ. ಪಕ್ಷ ಸಂಘಟನೆಯಲ್ಲಿ ಹೆಚ್‌ಡಿಕೆ ಆಕ್ಟೀವ್ ಆಗಿದ್ದು, ಕಾರ್ಯಕರ್ತರಲ್ಲಿ ಹುಮ್ಮಸ್ಸು ತಂದಿದೆ. ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಯುವ ಸಾಧ್ಯತೆ ಇದ್ದು, ನಿರಂತರ ಸಭೆಗಳಲ್ಲಿ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುತ್ತಿದೆ.
ಪ್ರತಿಯೊಂದು ಜಿಲ್ಲೆಯಲ್ಲಿ ನಡೆಯಲಿರುವ ಹೋರಾಟದಲ್ಲಿ, ತಾವೇ ಖುದ್ದಾಗಿ ಭಾಗವಹಿಸುವುದಾಗಿ ಕುಮಾರಸ್ವಾಮಿ ಘೋಷಿಸಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ಸಿನ ಅಧಿಕೃತ ಹೋರಾಟ ಪ್ರಾರಂಭವಾಗುವ ಮುನ್ಸೂಚನೆ ಸಿಕ್ಕಿದೆ. ಇದೆಲ್ಲದರ ಮಧ್ಯೆ, ಬಿಜೆಪಿ ನಾಯಕರು ಮೈತ್ರಿಯಂತೆ ನಡೆದುಕೊಳ್ತಿಲ್ಲ. ತಮ್ಮಿಷ್ಟದ ರಾಜಕಾರಣ ಮಾಡುತ್ತಿದ್ದಾರೆ. ಆ ಪಕ್ಷದ ನಾಯಕರ ವರಸೆ ಬೇರೆಯೇ ಆಗಿದೆ. ಅವರಲ್ಲೇ ಭವಿಷ್ಯದ ನಾಯಕತ್ವಕ್ಕೆ ಸಾಕಷ್ಟು ಪೈಪೋಟಿ ಇದೆ. ಇದರಿಂದ ಲಾಭ ಏನೆಂದು ಕೆಲವು ಜೆಡಿಎಸ್ ಮುಖಂಡರು ಅಸಮಾಧಾನ ಹೊರ ಹಾಕಿದ್ದಾರೆ.
ಆದರೆ, ಬಿಜೆಪಿ ಪಕ್ಷದಿಂದಾಗುತ್ತಿರುವ ಸಮಸ್ಯೆಗಳನ್ನು ನಾವು ಯಾವುದೇ ಕಾರಣಕ್ಕೂ ಪ್ರಸ್ತಾಪಿಸದೇ, ಪಕ್ಷ ಸಂಘಟನೆಯಲ್ಲಿ ಮಂದಾಗಬೇಕು. ಈ ಹಿಂದಿನಂತೆಯೇ ಅಧಿಕಾರ ಹಸ್ತಾಂತರ ಮಾಡದೇ ಮೈತ್ರಿಗೆ ಚ್ಯುತಿ ತಂದಿದ್ದಾರೆ ಎಂಬ ಅಪವಾದ ಜೆಡಿಎಸ್‌ಗೆ ಮತ್ತೆ ಬರುವುದು ಬೇಡ. ಈ ಹಿನ್ನೆಲೆ ನಮ್ಮ ಕೆಲಸ ನಾವು ಮಾಡೋಣ. ಮುಂದಿನ ದಿನಗಳಲ್ಲಿ ಅವರ ಪಕ್ಷದ ವರಿಷ್ಠರು ಇದರ ಬಗ್ಗೆ ಗಮನಹರಿಸುತ್ತಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಸಮಾಧಾನ ಮಾಡಿದ್ದಾರಂತೆ.
ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ವರದಾನವಾಗಿದೆ. ಆದರೆ, ಇದೇ ಮೈತ್ರಿ ಮುಂದುವರೆದಿದ್ದೇ ಆದ್ದಲ್ಲಿ ಮುಂಬರುವ ದಿನಗಳಲ್ಲಿ ಯಾವ ರೀತಿಯ ಹೊಂದಾಣಿಕೆ ವಿಧಾನಸಭಾ ಚುನಾವಣೆಯಲ್ಲಿರಲಿದೆ ಎನ್ನುವುದು ಹಲವರ ಪ್ರಶ್ನೆಯಾಗಿದೆ. ಇದನ್ನು ಅನೇಕ ಶಾಸಕರು ಮತ್ತು ಜೆಡಿಎಸ್ ಮುಖಂಡರು ಕುಮಾರಸ್ವಾಮಿ ಅವರ ಮುಂದಿಟ್ಟಿದ್ದಾರೆ. ಆದರೆ, ಇದನ್ನೆಲ್ಲಾ ಪಕ್ಕಕ್ಕಿಟ್ಟು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ ಎಂಬ ಸೂಚನೆ ಕೊಟ್ಟಿದ್ದಾರೆ.
ನಾನು ಪಕ್ಷ ಸಂಘಟನೆಗಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಲು ಸಿದ್ದನಿದ್ದೇನೆ. ಎಲ್ಲಾ ರೀತಿಯಲ್ಲೂ ಸಂಘಟನೆ ಮತ್ತು ರಾಜ್ಯ ಸರ್ಕಾರದ ವಿರುದ್ದ ಹೋರಾಟ ಅತ್ಯಗತ್ಯ. ಈ ಹಿನ್ನೆಲೆ ಮುಂದಿನ ತಿಂಗಳಿಂದ ಪ್ರವಾಸ ಕೈಗೊಳ್ಳುತ್ತೇನೆಂದು ಹೆಚ್‌ಡಿಕೆ ಹೇಳಿದ್ದಾರೆ. ಈಗಾಗಲೇ ನಿಖಿಲ್ ಕುಮಾರಸ್ವಾಮಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಮುಂಬರುವ ರಾಜ್ಯ ಪ್ರವಾಸ ಕಾರ್ಯಕ್ರಮದಲ್ಲಿ ಹೆಚ್‌ಡಿಕೆ ಇರಲಿದ್ದು, ಜೆಡಿಎಸ್ ಪಕ್ಷದಲ್ಲಿನ ಕಾರ್ಯಚಟುವಟಿಕೆಗಳು ಗರಿಗೆದರಲಿವೆ.

