ಬೈ ಎಲೆಕ್ಷನ್‌ ‘ಕೈ’ ಅಭ್ಯರ್ಥಿ ಹಾವು ಕಚ್ಚಿ ಸಾವು!

ಗೋವಾ ಕಾಂಗ್ರೆಸ್‌ನ ಯುವ ನಾಯಕ ಹಾಗೂ ಪೊಂಡಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿಯಾಗಿದ್ದ ಕೇತನ್ ಭಾಟಿಕರ್ ಅವರು ಹಾವು ಕಡಿತದಿಂದ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅನಮೋಡ್ ಘಾಟ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ರಾಜಕೀಯ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಪಕ್ಷದ ಸಂಘಟನೆ ಹಾಗೂ ಉಪಚುನಾವಣೆಯ ಕಾರ್ಯತಂತ್ರದ ಸಭೆ ಹಿನ್ನೆಲೆಯಲ್ಲಿ ಸ್ನೇಹಿತನೊಂದಿಗೆ ಗೋವಾದ ಪೊಂಡಾದಿಂದ ಜೋಯಿಡಾ ಭಾಗಕ್ಕೆ ಕೇತನ್ ಭಾಟಿಕರ್ ಆಗಮಿಸಿದ್ದರು. ರಾಮನಗರ ಸಮೀಪದ ಅನಮೋಡ್ ಅರಣ್ಯ ಪ್ರದೇಶದಲ್ಲಿ ಪ್ರಯಾಣದ ಮಧ್ಯೆ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆಗಾಗಿ ತೆರಳಿದ ವೇಳೆ ಅವರಿಗೆ ನಾಗರಹಾವು ಕಚ್ಚಿದೆ ಎಂದು ತಿಳಿದುಬಂದಿದೆ. ಹಾವು ಕಡಿದ ತಕ್ಷಣ ಭಾಟಿಕರ್ ಅಸ್ವಸ್ಥಗೊಂಡಿದ್ದು, ಜೊತೆಗಿದ್ದ ಸ್ನೇಹಿತರು ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರು.

ಪ್ರಾಥಮಿಕ ಚಿಕಿತ್ಸೆ ಬಳಿಕ ಅವರನ್ನು ಗೋವಾದ ಬಾಂಬೋಲಿನ್‌ನ ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ವೈದ್ಯಕೀಯ ಮೂಲಗಳ ಪ್ರಕಾರ, ವಿಷಕಾರಿ ಹಾವಿನ ಕಡಿತದಿಂದ ದೇಹದಲ್ಲಿ ವಿಷವೇಗವಾಗಿ ಹರಡಿದ್ದರಿಂದ ಪರಿಸ್ಥಿತಿ ಗಂಭೀರವಾಗಿತ್ತು ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಹಿಲ್ ಪೋಲಿಸ್ ಸ್ಟೆಷನ್ ನಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅನಮೋಡ್ ಘಾಟ್ ಪ್ರದೇಶ ದಟ್ಟ ಅರಣ್ಯ ವಲಯವಾಗಿದ್ದು, ಮಳೆಗಾಲ ಹಾಗೂ ರಾತ್ರಿ ಸಮಯದಲ್ಲಿ ಹಾವುಗಳ ಸಂಚಾರ ಹೆಚ್ಚಿರುತ್ತದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಗೋವಾ ರಾಜ್ಯದ ಕೃಷಿ ಸಚಿವ ರವಿ ನಾಯಕ್ ಅವರ ಅಕಾಲಿಕ ನಿಧನದಿಂದ ತೆರವಾದ ಪೊಂಡಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕೇತನ್ ಭಾಟಿಕರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಕ್ಷೇತ್ರದಲ್ಲಿ ಬಲಿಷ್ಠ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದ ಅವರ ಅಕಾಲಿಕ ನಿಧನಕ್ಕೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

About The Author