Dharwad News: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಿನ್ನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಪರಿಸ್ಥಿತಿ ಮಾತ್ರ ಆ ಹೇಳಿಕೆಗಳಿಗೆ ವಿರುದ್ಧವಾಗಿದೆ. ಕಳೆದ 11 ವರ್ಷಗಳಿಂದ ವಿದ್ಯಾರ್ಥಿಗಳು ಶಿಥಿಲಗೊಂಡ ಹಂಚಿನ ಕಟ್ಟಡದಲ್ಲೇ ಶಿಕ್ಷಣ ಪಡೆಯುತ್ತಿದ್ದಾರೆ. ಮತ್ತೊಂದೆಡೆ ಸರ್ಕಾರಿ 6 ಎಕರೆ ಜಾಗದಲ್ಲಿ ನಿರ್ಮಾಣವಾಗಿರುವ ನೂತನ ಶಾಲಾ ಕಟ್ಟಡ ವಿದ್ಯುತ್, ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಇನ್ನೂ ಆರಂಭವಾಗಿಲ್ಲ. ಪರಿಣಾಮ ಮಕ್ಕಳು ಪಂಚಾಯಿತಿ ಕಟ್ಟಡ ಹಾಗೂ ದೇವಸ್ಥಾನದಲ್ಲೂ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿನ್ನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 11 ವರ್ಷಗಳಿಂದ ಶಿಥಿಲಗೊಂಡ ಹಂಚಿನ ಕಟ್ಟಡದಲ್ಲೇ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಮೇಲ್ಛಾವಣಿಯ ಹಂಚುಗಳು ಜಾರಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಮಳೆ ಬಂದರೆ ತರಗತಿ ಕೊಠಡಿಗಳೊಳಗೆ ನೀರು ಸೋರುತ್ತದೆ. ಯಾವ ಕ್ಷಣದಲ್ಲಾದರೂ ಕಟ್ಟಡ ಕುಸಿಯುವ ಭೀತಿಯ ನಡುವೆಯೇ ಶಿಕ್ಷಕರು ಪಾಠ ಮಾಡುತ್ತಿದ್ದರೆ, ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಶಿಕ್ಷಣ ಪಡೆಯುತ್ತಿದ್ದಾರೆ.
ವಿದ್ಯಾರ್ಥಿಗಳಿಗೆ ಸುರಕ್ಷಿತ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ ಸರ್ಕಾರಿ 6 ಎಕರೆ ಜಾಗದಲ್ಲಿ ನೂತನ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ಆದರೆ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದರೂ ಇನ್ನೂ ಆರಂಭವಾಗಿಲ್ಲ. ಕಾರಣ, ವಿದ್ಯುತ್ ಸಂಪರ್ಕ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳೇ ಇಲ್ಲ. ಹೇಳಬೇಕೆಂದರೆ, ಕಟ್ಟಡವಿದೆ… ಆದರೆ ಶಾಲೆ ಮಾತ್ರ ಇಲ್ಲ.
ನೂತನ ಶಾಲೆ ಆರಂಭವಾಗದ ಕಾರಣ ವಿದ್ಯಾರ್ಥಿಗಳ ಶಿಕ್ಷಣ ಮೂರು ಕಡೆಗಳಲ್ಲಿ ನಡೆಯುತ್ತಿದೆ. ಕೆಲವು ತರಗತಿಗಳು ಪಂಚಾಯಿತಿ ಕಟ್ಟಡದಲ್ಲಿ ನಡೆಯುತ್ತಿದ್ದರೆ, 9ನೇ ತರಗತಿ ವಿದ್ಯಾರ್ಥಿಗಳು ಗ್ರಾಮದ ದೇವಸ್ಥಾನದಲ್ಲೇ ಪಾಠ ಕೇಳುತ್ತಿದ್ದಾರೆ. ಶಿಕ್ಷಣದ ದೇವಾಲಯವಾಗಬೇಕಿದ್ದ ಶಾಲೆಯ ಬದಲಿಗೆ ದೇವಾಲಯವೇ ತರಗತಿ ಕೊಠಡಿಯಾಗಿದೆ. ಇದು ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಒಂದು ಕಡೆ ಸರ್ಕಾರಿ 6 ಎಕರೆ ಜಾಗದಲ್ಲಿ ನಿರ್ಮಾಣವಾಗಿರುವ ನೂತನ ಶಾಲಾ ಕಟ್ಟಡ ಬೀಗ ಹಾಕಿ ನಿಂತಿದೆ. ಮತ್ತೊಂದೆಡೆ ವಿದ್ಯಾರ್ಥಿಗಳು 11 ವರ್ಷಗಳಿಂದ ಶಿಥಿಲಗೊಂಡ ಕಟ್ಟಡ, ಪಂಚಾಯಿತಿ ಕಟ್ಟಡ ಹಾಗೂ ದೇವಸ್ಥಾನದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ಯುತ್, ನೀರು ಸೇರಿದಂತೆ ಕೆಲ ಮೂಲಭೂತ ಸೌಲಭ್ಯಗಳನ್ನು ಒದಗಿಸಿದರೆ ತಕ್ಷಣವೇ ಶಾಲೆ ಆರಂಭಿಸಬಹುದು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೂರಾರು ವಿದ್ಯಾರ್ಥಿಗಳ ಭವಿಷ್ಯ ಮಾತ್ರ ಇನ್ನೂ ಕತ್ತಲೆಯಲ್ಲೇ ಉಳಿದಿದೆ. ಅನಾಹುತ ಸಂಭವಿಸುವ ಮುನ್ನವೇ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಹೊಸ ಶಾಲೆಯನ್ನು ಆರಂಭಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಒಂದೆಡೆ ಸರ್ಕಾರಿ 6 ಎಕರೆ ಜಾಗದಲ್ಲಿ ನಿರ್ಮಾಣವಾಗಿರುವ ನೂತನ ಶಾಲಾ ಕಟ್ಟಡ ಬೀಗ ಹಾಕಿ ನಿಂತಿದೆ… ಮತ್ತೊಂದೆಡೆ ಕಳೆದ 11 ವರ್ಷಗಳಿಂದ ಮಕ್ಕಳು ಶಿಥಿಲಗೊಂಡ ಕಟ್ಟಡ, ಪಂಚಾಯಿತಿ ಕಟ್ಟಡ ಹಾಗೂ ದೇವಸ್ಥಾನದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ಯುತ್, ನೀರು ಸೇರಿದಂತೆ ಕೆಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಆಗದಿರುವುದು ನಿಜಕ್ಕೂ ವಿಪರ್ಯಾಸ. ಅನಾಹುತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಶಾಲೆಯನ್ನು ಆರಂಭಿಸಬೇಕಿದೆ.
ಕ್ಯಾಮೆರ ಪರ್ಸನ್ ಹೇಮಂತ ಜೊತೆ, ಸಂಗಮೇಶ್ ಸತ್ತಿಗೇರಿ, ಕರ್ನಾಟಕ ಟಿವಿ, ಕಲಘಟಗಿ.




