ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜಕಾರಣದಲ್ಲಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಪರೋಕ್ಷವಾಗಿ ಹಿನ್ನಡೆಯಾದಂತೆ ಆಗಿದೆ. ರಾಜ್ಯ ರಾಜಕಾರಣದಲ್ಲಿ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಒಟ್ಟಾಗಿದ್ರೂ, ಜಿಲ್ಲಾ ರಾಜಕಾರಣದಲ್ಲಿ ಶೀತಲ ಸಮರ ಇದ್ದೇ ಇದೆ. ಸದ್ಯ, ಖಾನಾಪುರದಿಂದ ಸ್ಪರ್ಧೆಯಿಂದ ಹೆಬ್ಬಾಳ್ಕರ್ ಸಹೋದರ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ, ಹಿಂದೆ ಸರಿದಿದ್ದಾರೆ. ಇದೇ ವಿಚಾರವಾಗಿ ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಜಕಾರಣದಲ್ಲಿ ಒಮ್ಮೆ ಸಕ್ಸಸ್ ಆಗಿ, ಮತ್ತೊಮ್ಮೆ ಫೇಲ್ ಆಗಬಹುದು. ಆದರೆ, ಪ್ರಯತ್ನಿಸದೇ ಇರಬಾರದು. ನಾವು ಸುಮ್ಮನೆ ಕುಳಿತಿಲ್ಲ. ನಾವು ಪ್ರಯತ್ನಪಟ್ಟಿದ್ದೇವೆ. ರಾಜಕಾರಣದಲ್ಲಿ ಶ್ರಮ ಮತ್ತು ದಿನಗಳನ್ನು ಸೇರಿಸಿ ಇನ್ನಾವುದೇ ಇನ್ವೆಸ್ಟ್‌ಮೆಂಟ್ ಮಾಡಿದರೆ ಒಳ್ಳೆಯದು. ಅದು ದೀರ್ಘಕಾಲದ ಇನ್ವೆಸ್ಟ್‌ಮೆಂಟ್ ಆಗಿರುತ್ತದೆ. ಭವಿಷ್ಯದಲ್ಲಿ ಫಲ ಸಿಕ್ಕೇ ಸಿಗುತ್ತದೆ.
ಶಾಮನೂರು ಶಿವಶಂಕರಪ್ಪ ಕುಟುಂಬವನ್ನು ಬಿಟ್ಟರೆ, ಒಂದೇ ಕುಟುಂಬಕ್ಕೆ ಕಾಂಗ್ರೆಸ್ ಪಕ್ಷ 3 ಟಿಕೆಟ್ ಕೊಟ್ಟಿದ್ದು ನಮ್ಮ ಕುಟುಂಬಕ್ಕೆ ಮಾತ್ರ. ನಾನು ಮೊದಲ ಜನರೇಶನ್ ರಾಜಕಾರಣಿ. ಓರ್ವ ಸಾಮಾನ್ಯ ಕಾರ್ಯಕರ್ತೆ. ನನಗೆ ಇಂತಹ ಅವಕಾಶ ಸಿಕ್ಕಿರುವುದು ನನ್ನ ದೊಡ್ಡ ಸಾಧನೆ.
ಇದರಲ್ಲಿ ನನಗೆ ಸಂತೃಪ್ತಿ ಇದೆ. ನಾಳೆ ಬೆಳಗ್ಗೆಯೇ ನಮಗೆ ಫಲ ಸಿಗಬೇಕು ಎಂಬುದು ಮೂರ್ಖತನದ ಪರಮಾವಧಿ ಆಗುತ್ತೆ. ಚನ್ನರಾಜ ಹಟ್ಟಿಹೊಳಿ ಓರ್ವ ಎಂಎಲ್ಸಿ. ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರು. ಇದರಲ್ಲಿ ಗೆದ್ದವರು, ಸೋತವರು ಯಾರು ಅಂತಾ ನನಗೆ ಗೊತ್ತಿಲ್ಲ. ಈ ಬಗ್ಗೆ ಸತೀಶ್ ಜಾರಕಿಹೊಳಿ ಮತ್ತು ಚನ್ನರಾಜ ಅವರೇ ಹೇಳಬೇಕು. ಬೆಳಗಾವಿ ಜಿಲ್ಲೆಯ ರೈತರ ಒಳಿತಿಗೋಸ್ಕರ, ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ ಅಂತಾ, ಸಹೋದರನ ನಿರ್ಧಾರದ ಬಗ್ಗೆ ಸ್ಪಷ್ಟೀಕರಣ ನೀಡಿದ್ರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದರೆ ನನ್ನ ಸಹಮತವಿದೆ. ಅದನ್ನೂ ನಾನು ಸ್ವಾಗತಿಸುತ್ತೇನೆ ಎನ್ನುವುದಾದರೆ ಇದರಲ್ಲಿ ಗೆಲ್ಲಿಸುವ ಅರ್ಥವೂ ಇದೆ. ಒಮ್ಮೆ ನಾನು ಎಸ್ ಎಂದರೆ ಮುಗಿದು ಹೋಯಿತು. ಅವರ ವಿರುದ್ಧ ಯಾರು ನಿಲ್ಲುತ್ತಾರೆ. ಹೀಗಂತ ಸುದ್ದಿಗೋಷ್ಠಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.