Saturday, April 19, 2025

Latest Posts

ಈ ಜಾಗ ನಮ್ದು ಬಿಟ್ಟು ಕೊಡಿ : ವಕ್ಫ್‌ ಬೋರ್ಡ್‌ ಕ್ಯಾತೆಗೆ ನೂರಾರು ಕುಟುಂಬಗಳು ಕಂಗಾಲು

- Advertisement -

National News: ದೇಶದಲ್ಲಿ ವಕ್ಫ್‌ ತಿದ್ದುಪಡಿಯ ಮಸೂದೆಯ ಕುರಿತು ಪರ – ವಿರೋಧದ ಚರ್ಚೆಗಳು ಹಾಗೂ ಹೋರಾಟಗಳು ನಡೆಯುತ್ತಿವೆ. ಆದರೆ ಮೋದಿ ಸರ್ಕಾರದ ಈ ನೂತನ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ್ದ ತಮಿಳುನಾಡಿನ ಸಿಎಂ ಸ್ಟಾಲಿನ್‌ ಆಡಳಿತದಲ್ಲಿ ಇದೀಗ ಈ ವಕ್ಫ್‌ ಕಂಟಕ ಎದುರಾಗಿದ್ದು, ಗ್ರಾಮವೊಂದರಲ್ಲಿನ 150 ಕುಟುಂಬಗಳಿಗೆ ಜಾಗ ಖಾಲಿ ಮಾಡುವಂತೆ ವಕ್ಫ್‌ ಬೋರ್ಡ್‌ ನೋಟಿಸ್‌ ನೀಡಿದೆ. ಇದರಿಂದ ಆ ಜನರು ಆತಂಕದಲ್ಲಿದ್ದಾರೆ.

ಇನ್ನೂ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಕಟ್ಟುಕೊಳ್ಳೆ ಗ್ರಾಮದ 150 ಕುಟುಂಬಳಿಗೆ ಅಲ್ಲಿನ ವಕ್ಫ್ ಬೋರ್ಡ್‌ ಇತ್ತೀಚಿಗೆ ನೋಟಿಸ್‌ ನೀಡಿದೆ. ಇದರಿಂದ ಭೂಮಾಲೀಕತ್ವದ ವಿಚಾರ ಮತ್ತಷ್ಟು ಭುಗಿಲೆದ್ದಿದ್ದು, ಎಲ್ಲ ಆಸ್ತಿಯು ನಮಗೆ ಸೇರಿದೆ ಎಂದು ವಿಲಿಂಚಿಪುರಂನಲ್ಲಿರುವ ಸೈಯದ್‌ ಅಲಿ ಸುಲ್ತಾನ್‌ ಶಾ ದರ್ಗಾ ನೀಡಿರುವ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಈ ಕೂಡಲೇ ಈ ಸ್ಥಳವನ್ನು ಬಿಟ್ಟು ಹೊರಡಬೇಕು, ಇಲ್ಲವಾದರೆ ದರ್ಗಾದ ಅಧಿಕಾರಿಗಳಿಗೆ ತೆರಿಗೆ ಪಾವತಿಸಲು ಆರಂಭಿಸಬೇಕು ಎಂದು ತಿಳಿಸಲಾಗಿದೆ.

ಎಲ್ಲರೂ ವಕ್ಫ್‌ ನಿಯಮ ಪಾಲಿಸಬೇಕು : ದರ್ಗಾದ ಫರ್ಮಾನು..

ಅಲ್ಲದೆ ಇಡೀ ಗ್ರಾಮವು ದರ್ಗಾಗೆ ಸೇರಿದೆ, ಇಲ್ಲಿ ನಿರ್ಮಿಸಲಾಗಿರುವ ಮನೆಗಳ ಜಾಗವು ಅತಿಕ್ರಮಣವಾಗಿದೆ. ಹೀಗಾಗಿ ಎಲ್ಲರೂ ವಕ್ಫ್‌ ನಿಯಮಗಳನ್ನು ಪಾಲಿಸಬೇಕು, ಈಗ ಒಂದು ನೋಟಿಸ್‌ ನೀಡಿದ್ದೇವೆ. ಇಷ್ಟೇ ಅಲ್ಲದೆ ಇನ್ನು ಎರಡು ನೋಟಿಸ್‌ ಹೊರಡಿಸುತ್ತೇವೆ. ಆಗಲೂ ನೀವು ಸುಮ್ಮನ್ನಾದರೆ ಹೈಕೋರ್ಟ್‌ ಮೆಟ್ಟೆಲೇರುವುದಾಗಿ ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ. ಆದರೆ ನೋಟಿಸ್‌ ವಿಚಾರ ತಿಳಿದು ಆತಂಕದಲ್ಲಿರುವ ಗ್ರಾಮಸ್ಥರು, ನಾವು ಇಲ್ಲಿ ಸಂಪೂರ್ಣವಾಗಿ ಕೃಷಿಯನ್ನು ಅವಲಂಬಿಸಿ ಬದುಕುತ್ತಿದ್ದೇವೆ. ನಾಲ್ಕು ತಲೆಮಾರುಗಳಿಂದ ಈ ಭೂಮಿಯಲ್ಲಿಯೇ ವಾಸಿಸುತ್ತಿದ್ದೇವೆ, ಅಲ್ಲದೆ ನಾವು ಕೂಡ ತೆರಿಗೆ ಪಾವತಿ ಮಾಡುತ್ತೇವೆ. ಹೀಗಿರುವಾಗ ಏಕಾ ಏಕಿ ಈಗ ಜಾಗ ನಮ್ಮದು ಎಂದು ವಕ್ಫ್‌ ನೋಟಿಸ್‌ ಬಂದಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ನಮ್ಮ ಜೀವನೋಪಾಯಕ್ಕೆ ಏಕೈಕ ಭೂಮಿ ಇದು..!

ಅಂದಹಾಗೆ ಈ ಭೂಮಿ ನಮ್ಮ ಏಕೈಕ ಜೀವನೋಪಾಯದ ಮೂಲವಾಗಿದೆ. ಈಗ ಇದನ್ನು ಖಾಲಿ ಮಾಡಲು ಅಥವಾ ದರ್ಗಾಕ್ಕೆ ಬಾಡಿಗೆ ಪಾವತಿಸಲು ನಮ್ಮನ್ನು ಕೇಳಲಾಗುತ್ತಿದೆ. ಇದು ಭಯ ಮತ್ತು ಗೊಂದಲದ ಪರಿಸ್ಥಿತಿಯನ್ನು ಸೃಷ್ಟಿಸಿದೆ ಎಂದು ಅಲ್ಲಿನ ರೈತರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಇದರಲ್ಲಿನ ಹಲವರು ಸರ್ಕಾರ ನೀಡಿರುವ ಅಧಿಕೃತ ಭೂ ದಾಖಲೆಗಳನ್ನು ಹೊಂದಿದ್ದಾರೆ. ಆದರೂ ಸಹ ನೋಟಿಸ್‌ ನೀಡಿ ತೊಂದರೆ ಕೊಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇನ್ನೂ ವಕ್ಫ್‌ ಬೋರ್ಡ್‌ನ ನೋಟಿಸ್‌ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು ವೆಲ್ಲೂರು ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ತೆರಳಿ, ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದ್ದಾರೆ. ಅಲ್ಲದೆ ತಮ್ಮ ಭೂಮಾಲೀಕತ್ವದ ವಿವಾದದ ಬಗ್ಗೆ ಸುರಕ್ಷತೆ ಮತ್ತು ಸ್ಪಷ್ಟತೆಗಾಗಿ ಹೋರಾಟಗಾರರು ಹಿಂದೂ ಸಂಘಟನೆಯ ಬೆಂಬಲದೊಂದಿಗೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಅಲ್ಲದೆ ಗ್ರಾಮಸ್ಥರು ಅಗತ್ಯ ದಾಖಲೆಳನ್ನು ಹೊಂದಿದ್ದರೂ, ಪಂಚಾಯತ್‌ ತೆರಿಗೆಗಳನ್ನು ಪಾವತಿಸುತ್ತಿದ್ದರೂ ಕೂಡ ಈ ರೀತಿ ನೋಟಿಸ್‌ ನೀಡಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಈ ಬೆಳವಣಿಗೆಯಿಂದ ಮನೆ ಕಳೆದುಕೊಳ್ಳುವ ಆತಂಕದಲ್ಲಿ ಗ್ರಾಮದ ಕುಟುಂಬಗಳಿದ್ದು, ಈ ಹಿನ್ನೆಲೆಯಲ್ಲಿ ಅಧಿಕೃತ ಹಕ್ಕು ಪತ್ರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಒಮ್ಮೆ ವಕ್ಫ್‌ ಆಸ್ತಿಯಾದ್ರೆ ಅದು ಯಾವಾಗಲೂ ಹಾಗೆ ಇರುತ್ತದೆ..

ಇನ್ನೂ ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ತಮಿಳುನಾಡಿನ ಕಾಂಗ್ರೆಸ್‌ ಶಾಸಕ ಹಸನ್‌ ಮೌಲಾನಾ, ಈ ಗ್ರಾಮದಲ್ಲಿನ ಯಾರೊಬ್ಬರನ್ನೂ ನಾವು ತೆರವುಗೊಳಿಸುವುದಿಲ್ಲ. ಆದರೆ ವಕ್ಫ್‌ ಬೋರ್ಡ್‌ ಈ ಭೂಮಿಗೆ ಸಂಬಂಧಿಸಿರುವ ಅಗತ್ಯ ದಾಖಲೆಗಳನ್ನು ನೀಡಿ ಇದು ವಕ್ಫ್‌ ಆಸ್ತಿಯಾಗಿದೆ ಎಂದು ಸಾಬೀತುಪಡಿಸಿದ ಬಳಿಕ ಗ್ರಾಮಸ್ಥರು ವಕ್ಫ್‌ ಬೋರ್ಡ್‌ಗೆ ತೆರಿಗೆ ಪಾವತಿಸಬೇಕಾಗುತ್ತದೆ. ಅಲ್ಲದೆ ಒಮ್ಮೆ ಅದು ವಕ್ಫ್‌ ಆಸ್ತಿಯಾದರೆ ಅದು ಯಾವತ್ತೂ ಹಾಗೆಯೇ ಉಳಿಯುತ್ತದೆ ಎಂದು ಹೇಳುವ ಮೂಲಕ ಜನರನ್ನು ಮತ್ತಷ್ಟು ಚಿಂತೆಗೆ ದೂಡಿದ್ದಾರೆ.

ಸರ್ಕಾರ ಮಧ್ಯಪ್ರವೇಶಿಸಿತ್ತು..

ಈ ಹಿಂದೆ 2022ರಲ್ಲಿ ತಮಿಳುನಾಡು ವಕ್ಫ್ ಮಂಡಳಿಯು ತಿರುಚೆಂದುರೈನಲ್ಲಿ 1,500 ವರ್ಷಗಳಷ್ಟು ಹಳೆಯದಾದ ಚೋಳರ ಯುಗದ ದೇವಾಲಯ ಸೇರಿದಂತೆ ಸುಮಾರು 480 ಎಕರೆ ಭೂಮಿಯನ್ನು ತನ್ನದೆಂದು ಹೇಳಿಕೊಂಡಾಗ ಇದೇ ರೀತಿಯ ವಿವಾದ ಭುಗಿಲೆದ್ದಿತ್ತು. ವಕ್ಫ್ ಮಂಡಳಿಯಿಂದ ಎನ್‌ಒಸಿ ಇಲ್ಲದೆ ತಮ್ಮ ಭೂಮಿಯನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಆ ಗ್ರಾಮದ ನಿವಾಸಿಗಳಿಗೆ ತಿಳಿಸಲಾಯಿತು. ಆದರೆ, ರಾಜ್ಯ ಸರ್ಕಾರದ ಮಧ್ಯಪ್ರವೇಶದ ನಂತರ ಈ ವಿಷಯ ಇತ್ಯರ್ಥವಾಗಿತ್ತು

- Advertisement -

Latest Posts

Don't Miss