ಹಿಂದೂ ಧರ್ಮದಲ್ಲಿ ಪೂಜೆ ಪುನಸ್ಕಾರದಲ್ಲಿ ನಿಸರ್ಗದಿಂದ ಸಿಕ್ಕ ವಸ್ತುಗಳನ್ನ ಬಳಸಲಾಗುತ್ತದೆ. ಈ ವಸ್ತುಗಳನ್ನ ಇಟ್ಟು ಪೂಜಿಸಿದರೆ, ದೇವರ ಕೃಪೆ ಸಿಗುತ್ತದೆ ಅನ್ನೋದು ಹಿಂದೂಗಳ ನಂಬಿಕೆ. ಅವುಗಳಲ್ಲಿ ತೆಂಗಿನ ಕಾಯಿ, ಎಲೆ ಅಡಿಕೆ, ಬಾಳೆಹಣ್ಣು ಇತ್ಯಾದಿ ಬಳಸಲಾಗತ್ತೆ. ಅದೇ ರೀತಿ, ಕೆಲ ಎಲೆಗಳಿಗೂ ಕೂಡ ಮಹತ್ವದ ಸ್ಥಾನಗಳಿದೆ. ಅಂಥ ಎಲೆಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ..
ವೀಳ್ಯದೆಲೆ: ಪ್ರತೀ ಪೂಜೆಗೂ ವೀಳ್ಯದೆಲೆ ಮತ್ತು ಅಡಿಕೆ ಬೇಕೆ ಬೇಕು. ಇವೆರಡು ಇಲ್ಲದಿದ್ದಲ್ಲಿ, ಆ ಪೂಜೆ ಸಂಪೂರ್ಣವಾಗುವುದಿಲ್ಲ. ಔಷಧಿಯ ಗುಣವುಳ್ಳ ವೀಳ್ಯದೆಲೆ ಆರೋಗ್ಯಕ್ಕೆ ತುಂಬಾ ಉತ್ತಮ. ಊಟದ ಬಳಿಕ ಪಾನ್ ಸೇವಿಸಿದ್ರೆ ಆರೋಗ್ಯ ಉತ್ತಮವಾಗಿರುತ್ತದೆ ಅಂತಾ ಹೇಳಲಾಗುತ್ತದೆ. ಆದ್ರೆ ಇದನ್ನ ಪೂಜೆಗೆ ಬಳಸುವುದರ ಉದ್ದೇಶವೇನಂದ್ರೆ ಇದು ಪೂಜೆಗೆ ಬಳಸಲು ಶ್ರೇಷ್ಠ ಎಲೆ ಎಂದು ಹೇಳಲಾಗಿದ್ದು, ಇದರಲ್ಲಿ ದೈವಿಕ ಗುಣಗಳಿದೆ ಅಂತಾ ಹೇಳಲಾಗುತ್ತದೆ.
ಬಾಳೆ ಎಲೆ: ಬಾಳೆ ಎಲೆಯಲ್ಲಿ ಊಟ ಮಾಡಿದ್ರೆ, ನಮ್ಮ ಆರೋಗ್ಯಕ್ಕೆ ಒಳ್ಳೆಯದು ಅಲ್ಲದೇ, ಇದರಿಂದ ರೋಗ ರುಜಿನಗಳು ಬರುವುದಿಲ್ಲ ಅಂತಾ ಹಿರಿಯರು ಹೇಳುತ್ತಾರೆ. ಅದೇ ರೀತಿ ಬಾಳೆ ಎಲೆಯನ್ನು ಪೂಜೆಯ ಸಂದರ್ಭದಲ್ಲಿ ಬಳಸಲಾಗುತ್ತದೆ. ಸತ್ಯ ನಾರಾಯಣ ಪೂಜೆ ಇದ್ದಾಗ, ಬಾಳೆ ಎಲೆಯಿಂದ ಸತ್ಯ ನಾರಾಯಣನಿಗೆ ಅಲಂಕಾರ ಮಾಡಲಾಗುತ್ತದೆ. ಶ್ರಾದ್ಧದ ಸಮಯದಲ್ಲಿ ಪಿಂಡ ಪ್ರಧಾನ ಮಾಡುವಾಗ ಬಾಳೆ ಎಲೆ ಬಳಸಲಾಗುತ್ತದೆ. ಈ ವೇಳೆ ಆಕಳು, ಕಾಗೆಗಳಿಗೆ ಊಟ ನೀಡುವುದು ಕೂಡ ಬಾಳೆ ಎಲೆಯಲ್ಲೇ.
ತುಳಸಿ ಎಲೆ: ಎಲ್ಲ ಸಾಧನವಿದ್ದು ತುಳಸಿ ಇಲ್ಲದ ಪೂಜೆ ಒಲ್ಲವೋ ಹರಿ ಕೊಳ್ಳನೋ ಎಂದು ಪುರಂದರದಾಸರು ಹೇಳಿದಂತೆ, ವಿಷ್ಣುವಿನ ಪೂಜೆ ಮಾಡುವಾಗ ತುಳಸಿ ಬೇಕೆ ಬೇಕು. ಕೃಷ್ಣ, ವಿಷ್ಣುವಿನ ಪೂಜೆ ಮಾಡುವಾಗ ತುಳಸಿಯ ಬಳಕೆ ಮಾಡಲೇಬೇಕು ಎಂಬುದು ಹಿಂದೂಗಳ ನಂಬಿಕೆ. ಇಷ್ಟೇ ಅಲ್ಲದೇ, ತುಳಸಿಯನ್ನ ದೇವಿಯಂತೆ ಪೂಜಿಸುವ ಹಿಂದೂಗಳು, ಕಾರ್ತಿಕ ಮಾಸದಲ್ಲಿ ತುಳಸಿ ಮತ್ತು ವಿಷ್ಣುವಿನ ಮದುವೆಯೆಂದು ತುಳಸಿ ಪೂಜೆ ಮಾಡುತ್ತಾರೆ. ಈ ವೇಳೆ ತುಳಸಿ ಗಿಡಕ್ಕೆ ಅಲಂಕಾರ ಮಾಡಿ, ಅವಲಕ್ಕಿ ಪ್ರಸಾದ ನೈವೇದ್ಯ ಮಾಡಿ, ಪೂಜೆ ಮಾಡಲಾಗುತ್ತದೆ.
ಬಿಲ್ವಪತ್ರೆ: ಶಿವನಿಗೆ ಇಷ್ಟವಾಗುವ ಎಲೆ ಅಂದ್ರೆ ಬಿಲ್ವ ಪತ್ರೆ. ಶಿವರಾತ್ರಿಯಂದು ಶಿವನಿಗೊಂದು ಬಿಲ್ವ ಪತ್ರೆ ಹಾಕಿದರೆ, ಸ್ವರ್ಗ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಇದನ್ನ ತ್ರಿದಳ ಎಂತಲೂ ಕರಿಯಲಾಗುತ್ತದೆ. ಈ ಮೂರು ಎಲೆಯನ್ನು ಬ್ರಹ್ಮ ವಿಷ್ಣು ಮಹೇಶ್ವರರೆಂದು ಹೇಳಲಾಗುತ್ತದೆ.
ಮಾವಿನ ಎಲೆ: ಹಬ್ಬ ಹರಿದಿನಗಳಲ್ಲಿ, ಪೂಜೆ, ಹೋಮ ಹವನಗಳಿದ್ದಲ್ಲಿ ಮನೆಗೆ ಮಾವಿನ ತೋರಣ ಕಟ್ಟಲಾಗುತ್ತದೆ. ಈ ಮಾವಿನ ತೋರಣ ಕಟ್ಟುವುದರಿಂದ ಮನೆಗೆ ನಕಾರಾತ್ಮಕ ಶಕ್ತಿಯ ಪ್ರವೇಶವಾಗುವುದಿಲ್ಲ. ಮತ್ತು ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚುತ್ತದೆ ಎನ್ನುವ ನಂಬಿಕೆ ಇದೆ.
ಬೇವಿನ ಎಲೆ: ಯುಗಾದಿಯಂದು ಬೇವು ಬೆಲ್ಲ ತಿನ್ನಬೇಕೆಂಬ ವಾಡಿಕೆ ಇದೆ. ಇದರ ಅರ್ಥವೇನೆಂದರೆ, ಜೀವನದಲ್ಲಿ ಬರುವ ಸಿಹಿ ಕಹಿಯನ್ನ ಒಟ್ಟಾಗಿ ನಿಭಾಯಿಸೋಣವೆಂದು. ಈ ರೀತಿ ಬೇವಿನ ಎಲೆಗೂ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನ ನೀಡಲಾಗಿದೆ. ಇಷ್ಟೇ ಅಲ್ಲದೇ, ಕೆಲ ದೇವಿಯ ಆರಾಧನೆ ಮಾಡುವವರು ಪೂಜೆಗಾಗಿ ಬೇವಿನ ಎಲೆಯನ್ನ ಬಳಸುತ್ತಾರೆ.