ಮಾನಸಿಕ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವ ಆರೋಗ್ಯ ವ್ಯವಸ್ಥೆ ಕಟ್ಟಿ ಸುಭದ್ರ ರಾಷ್ಟ್ರ ನಿರ್ಮಿಸೋಣ: ಸಿಎಂ

Political news: ಬೆಂಗಳೂರಿನಲ್ಲಿಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ, ಬೆಂಗಳೂರು ಆಯೋಜಿಸಿದ್ದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ “ಸುವರ್ಣ ಮಹೋತ್ಸವ” ಕಾರ್ಯಕ್ರಮ ನಡೆದಿದ್ದು, ಸಿಎಂ ಸಿದ್ದರಾಮಯ್ಯ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ಹಲವು ರಾಜಕೀಯ ಗಣ್ಯರು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ದೇಶದ ಹೆಮ್ಮೆಯ ಮಾನಸಿಕ ಆರೋಗ್ಯ ಮತ್ತು ನರರೋಗಗಳ ರಾಷ್ಟ್ರೀಯ ಸಂಸ್ಥೆ ನಿಮ್ಹಾನ್ಸ್ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳುವುದು ನನಗೆ ಅತ್ಯಂತ ಹೆಮ್ಮೆಯ ಸಂಗತಿ. ನಿಮ್ಹಾನ್ಸ್ ಕಳೆದ ಐದು ದಶಕಗಳ ಅವಧಿಯಲ್ಲಿ ದೇಶದ ಮಾನಸಿಕ ಆರೋಗ್ಯ ಹಾಗೂ ನರರೋಗಗಳ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆ ನೀಡುತ್ತಾ ಬಂದಿದ್ದು, ದೇಶದ ಪ್ರಮುಖ ಸಂಸ್ಥೆಯಾಗಿ ತನ್ನ ಛಾಪು ಮೂಡಿಸಿದೆ.

ಮೈಸೂರು ಸರ್ಕಾರದ ಮಾನಸಿಕ ಆಸ್ಪತ್ರೆ ಮತ್ತು ಭಾರತೀಯ ಮಾನಸಿಕ ಆರೋಗ್ಯ ಸಂಸ್ಥೆಯನ್ನು ಒಗ್ಗೂಡಿಸುವ ಮೂಲಕ ಪ್ರಾರಂಭವಾದ ನಿಮ್ಹಾನ್ಸ್, ಮಾನಸಿಕ ಆರೋಗ್ಯ ಮತ್ತು ಶಿಕ್ಷಣಕ್ಕೆ ಮೀಸಲಾದ ಭಾರತದ ಪ್ರಪ್ರಥಮ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ. ರಾಷ್ಟ್ರೀಯ ಮಹತ್ವವನ್ನು ಹೊಂದಿರುವ ಈ ಸಂಸ್ಥೆಯು ತನ್ನ ಐದು ದಶಕದ ಪಯಣದಲ್ಲಿ ಆರೈಕೆ, ಸಂಶೋಧನೆ ಮತ್ತು ಶಿಕ್ಷಣ ವಲಯದಲ್ಲಿ ವಿಶ್ವದ ಗಮನ ಸೆಳೆದಿದೆ. ಮಾನಸಿಕ ಆರೋಗ್ಯ ಕುರಿತಾದ ನೀತಿ ನಿರೂಪಣೆಯಲ್ಲಿ ನಿಮ್ಹಾನ್ಸ್ ಕೊಡುಗೆಯನ್ನು ಜಾಗತಿಕವಾಗಿ ಗುರುತಿಸಲಾಗಿರುವುದು ಹೆಮ್ಮೆಯ ಸಂಗತಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮಾನಸಿಕ ಆರೋಗ್ಯದ ಆರೈಕೆ ಜೊತೆಗೆ ರೋಗದ ಕುರಿತಾಗಿ ಸಾಮಾನ್ಯವಾಗಿ ಅಂಟಿಕೊಳ್ಳುವ ಸಮಾಜದ ನಕರಾತ್ಮಕ ದೃಷ್ಟಿಕೋನವನ್ನು ಬಹುತೇಕ ನಿವಾರಿಸುವಲ್ಲಿ ನಿಮ್ಹಾನ್ಸ್ ಯಶಸ್ವಿಯಾಗಿದೆ. ಪಾರ್ಶ್ವವಾಯು, ತೀವ್ರತರ ಮೆದುಳು ಕಾಯಿಲೆಗಳು ಮತ್ತು ನರರೋಗ ಚಿಕಿತ್ಸೆಯಲ್ಲಿ ಅತ್ಯುತ್ತಮ ಗುಣಮಟ್ಟವನ್ನು ಸಾಧಿಸುವ ಮೂಲಕ ಮಾನಸಿಕ ಸ್ವಾಸ್ಥ್ಯ ಕಾಪಾಡುವಲ್ಲಿ ನಿಮ್ಹಾನ್ಸ್ ಕೊಡುಗೆ ಶ್ಲಾಘನೀಯವಾಗಿದೆ. ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಶ್ರೇಷ್ಠತೆಯನ್ನು ಸಾಧಿಸಿರುವ ರಾಷ್ಟ್ರೀಯ ಮಹತ್ವದ ಈ ಸಂಸ್ಥೆ ಕರ್ನಾಟಕದಲ್ಲಿರುವುದು ನಮಗೆಲ್ಲರಿಗೂ ಅತ್ಯಂತ ಹೆಮ್ಮೆಯ ವಿಷಯ ಎಂದು ಸಿಎಂ ಹೇಳಿದರು.

ಮಾನಸಿಕ ಆರೋಗ್ಯದೆಡೆಗೆ ಕರ್ನಾಟಕದ ನಡೆಯು ಆರೋಗ್ಯ ಸೇವೆಯ ಲಭ್ಯತೆ, ನಾವಿನ್ಯತೆ ಮತ್ತು ಸಹಾನುಭೂತಿಯನ್ನೊಳಗೊಂಡ ಸಮಗ್ರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಮಾನಸಿಕ ಆರೋಗ್ಯದ ಸವಾಲುಗಳನ್ನು ಸಮಗ್ರವಾಗಿ ಎದುರಿಸುವ ನಮ್ಮ ಪ್ರಯತ್ನದಲ್ಲಿ ನಮ್ಮನ್ನು ಮುಂಚೂಣಿಯಲ್ಲಿರಿಸಿದೆ. ಈ ಪ್ರಯತ್ನ ಒಳಗೊಳ್ಳುವ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ. ಈ ಮೈಲಿಗಲ್ಲು ಸಾಧನೆಗೆ ಕಾರಣರಾಗಿರುವ ನಿಮ್ಹಾನ್ಸ್‌ನ ಅಧಿಕಾರಿಗಳು, ಸಿಬ್ಬಂದಿ ವರ್ಗದವರಿಗೆ ನನ್ನ ಅಭಿನಂದನೆಗಳು.

ನಿಮ್ಮ ಸಮರ್ಪಣೆಯ ಸೇವೆ ಮಾನಸಿಕ ಆರೋಗ್ಯ ವಿಶ್ವದೆಲ್ಲೆಡೆ ಲಭಿಸಲು ಹಾಗೂ ಪ್ರತಿಯೊಬ್ಬರಿಗೂ ಆರೋಗ್ಯಕರ ಜೀವನದ ಅವಕಾಶ ಕಲ್ಪಿಸುವ ಭವಿಷ್ಯ ನಿರ್ಮಾಣಕ್ಕೆ ಪ್ರೇರಣೆ ನೀಡಿದೆ. ನಿಮ್ಹಾನ್ಸ್‌ನ ಮೂಲಸೌಕರ್ಯ ಅಭಿವೃದ್ಧಿ, ಸಂಶೋಧನೆ ಹಾಗೂ ತರಬೇತಿ ಕಾರ್ಯಕ್ರಮಗಳಿಗೆ ನೆರವು ನೀಡಲು ಸರ್ಕಾರ ಬದ್ಧವಾಗಿದೆ. ನಾವು ಒಟ್ಟಾಗಿ ಶ್ರಮಿಸಿ, ಮಾನಸಿಕ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವ ಆರೋಗ್ಯ ವ್ಯವಸ್ಥೆಯನ್ನು ಕಟ್ಟುವ ಮೂಲಕ ಸುಭದ್ರ ರಾಷ್ಟ್ರವನ್ನು ನಿರ್ಮಿಸೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

About The Author