National Political News: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿ ಅವರ ಮೇಲಿನ ನ್ಯಾಷನಲ್ ಹೆರಾಲ್ಡ್ ಹಗರಣಕ್ಕೆ ಸಂಬಂಧಿಸಿದ್ದಂತೆ ಅಕ್ರಮ ಹಣ ವರ್ಗಾವಣೆಯ ಆರೋಪದಲ್ಲಿ ಇಡಿ ಚಾರ್ಜ್ ಶೀಟ್ ದಾಖಲಿಸಿತ್ತು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವಿನ ವಾಕ್ಸಮರ ಮುಂದುವರೆದಿದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅಡಳಿತದಲ್ಲಿ ಅಕ್ರಮಗಳಿಗೆ ಆಸ್ಪದವಿಲ್ಲ ಎನ್ನುತ್ತಲೇ ಬಿಜೆಪಿ ಕೈ ನಾಯಕರ ಮೇಲೆ ಮುಗಿಬಿದ್ದು ವಾಗ್ದಾಳಿ ನಡೆಸಿದೆ.
ಇನ್ನೂ ಪ್ರಮುಖವಾಗಿ ಭ್ರಷ್ಟಾಚಾರದಲ್ಲಿ ಭಾಗಿಯಾದವರನ್ನು ಹಾಗೂ ರೈತರ ಭೂಮಿಗಳನ್ನು ಕಬಳಿಸಿದವರನ್ನು ಕೇಂದ್ರದ ಮೋದಿ ಸರ್ಕಾರವು ಜೈಲಿಗೆ ಹಾಕುವ ಕೆಲಸ ಮಾಡಲಿದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಹಾಗೂ ಭೂಮಿ ಕಳೆದುಕೊಂಡ ರೈತರಿಗೆ ಪುನಃ ಅದನ್ನು ಮರಳಿಸುವುದು ಬಿಜೆಪಿ ಸರ್ಕಾರದ ಸಂಕಲ್ಪವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಕಿಡಿ ಕಾರಿದ್ದಾರೆ. ಇನ್ನೂ ತಾನು ಈ ದೇಶದ ಕಾನೂನಿಗಿಂತ ದೊಡ್ಡವನಾಗಿದ್ದೇನೆ ಎಂದು ರಾಬರ್ಟ್ ವಾದ್ರಾ ಭಾವಿಸಿಕೊಂಡಿದ್ದಾರೆ. ಆದರೆ ದೇಶದಲ್ಲಿರುವುದು ಮೋದಿ ನೇತೃತ್ವದ ಪ್ರಾಮಾಣಿಕ ಸರ್ಕಾರ ಎನ್ನುವುದು ಅವರಿಗೆ ಇನ್ನೂ ಕೂಡ ತಿಳಿದಿಲ್ಲ. ಅಲ್ಲದೆ ಈ ಬಿಜೆಪಿ ಸರ್ಕಾರದಲ್ಲಿ ತನಿಖಾ ಸಂಸ್ಥೆಗಳು ಪಂಜರದ ಹಕ್ಕಿಗಳಲ್ಲ, ಅವುಗಳು ಭ್ರಷ್ಟಾಚಾರ ಪ್ರಕರಣಗಳಲ್ಲಿ ಜಾಮೀನಿನ ಮೇಲಿದ್ದವರನ್ನು ಜೈಲಿಗಟ್ಟುವ ಕೆಲಸವನ್ನು ಮಾಡಲಿವೆ ಎಂದು ಭಾಟಿಯಾ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಪತ್ರಿಕೆಯನ್ನು ಕಾಂಗ್ರೆಸ್ ತನ್ನ ಎಟಿಎಂ ಮಾಡಿಕೊಂಡಿದೆ..
ಅಲ್ಲದೆ ಬಿಜೆಪಿಯು ರಾಜಕೀಯಕ್ಕಾಗಿ ನಮ್ಮ ನಾಯಕರ ಮೇಲೆ ಆರೋಪಿಸುತ್ತಿದೆ, ಇಡಿಯು ಅದರ ಭಾಗವಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ತೀಕ್ಷ್ನವಾಗಿಯೇ ತಿರುಗೇಟು ನೀಡಿರುವ ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್, ಕಾಂಗ್ರೆಸ್ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ತನ್ನ ಎಟಿಎಂ ಆಗಿ ಬಳಸಿಕೊಂಡಿದೆ. ಗಾಂಧಿದ್ವಯರು ತಮ್ಮ ಜೇಬಿನಿಂದ ಒಂದು ಪೈಸೆಯನ್ನೂ ಹೂಡಿಕೆ ಮಾಡದೆ ನ್ಯಾಷನಲ್ ಹೆರಾಲ್ಡ್‌ನ 2,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನೂ ಇಬ್ಬರೂ ಗಾಂಧಿಗಳು ಒಟ್ಟಾಗಿ ಯಂಗ್ ಇಂಡಿಯನ್ ಕಂಪನಿಯ ಶೇಕಡಾ 76% ರಷ್ಟು ಪಾಲನ್ನು ಹೊಂದಿದ್ದರು, ಅದರ ಮೇಲೆ ಕಾಂಗ್ರೆಸ್ 50 ಲಕ್ಷ ರೂಪಾಯಿ ಸಾಲ ನೀಡಿತ್ತು. ನಂತರ ಕಂಪನಿಯು ವಿರೋಧ ಪಕ್ಷಕ್ಕೆ 90 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದರ ಬದಲಾಗಿ ಕಾಂಗ್ರೆಸ್‌ಗೆ ಹೊಂದಿಕೊಳ್ಳುವ ಪತ್ರಿಕೆಯನ್ನು ಒಳಗೊಂಡ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಹೀಗಿರುವಾಗ ರಾಜಕೀಯ ಪಕ್ಷವೊಂದು ಸಾಲ ನೀಡಬಹುದೇ ಎಂದು ಠಾಕೂರ್ ಪ್ರಶ್ನಿಸಿದ್ದಾರೆ.
ಧೈರ್ಯವಿದ್ದರೆ ಕೋರ್ಟ್ ಮೊರೆ ಹೋಗಿ..!
ಅಂದಹಾಗೆ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ನಾಯಕರು ತಮ್ಮ ವಿರುದ್ಧದ ಪ್ರಕರಣಗಳಲ್ಲಿ ತ್ವರಿತ ಮತ್ತು ಕಾಲಮಿತಿಯ ವಿಚಾರಣೆಯನ್ನು ಕೋರಿ ನ್ಯಾಯಾಲಯಗಳ ಮೊರೆ ಹೋಗುವಂತೆ ಅನುರಾಗ್ ಠಾಕೂರ್ ಸವಾಲು ಹಾಕಿದ್ದಾರೆ. ಅವರಿಗೆ ಧೈರ್ಯವಿದ್ದರೆ, ಅವರು ಆ ಕೆಲಸ ಮಾಡಲಿ, ಕಾಂಗ್ರೆಸ್‌ನ ಭ್ರಷ್ಟಾಚಾರ ಮಾದರಿಯಲ್ಲಿ, ಕಳ್ಳರು ಹೆಚ್ಚು ಶಬ್ದಗಳನ್ನು ಮಾಡುತ್ತಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣವು ಕಾಂಗ್ರೆಸ್ ಪಕ್ಷದಲ್ಲಿನ ವಾತಾವರಣವನ್ನು ದಿಗ್ಭ್ರಮೆಗೊಳಿಸಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಕೆಳ ನ್ಯಾಯಾಲಯವು ಈ ವಿಷಯವನ್ನು ಗಮನಕ್ಕೆ ತೆಗೆದುಕೊಂಡಾಗಿನಿಂದ ಗಾಂಧಿಯವರು ತಮ್ಮ ವಿರುದ್ಧದ ಕ್ರಮವನ್ನು ರದ್ದುಗೊಳಿಸುವಂತೆ ಹಲವು ಬಾರಿ ನ್ಯಾಯಾಲಯಗಳ ಮೊರೆ ಹೋಗಿದ್ದಾರೆ. ಅವರು ಜಾಮೀನಿನ ಮೇಲೆ ಇದ್ದಾರೆ ಎಂಬುದನ್ನು ಹೊರತುಪಡಿಸಿ ನ್ಯಾಯಾಲಯಗಳು ಅವರಿಗೆ ಯಾವುದೇ ಪರಿಹಾರವನ್ನು ನೀಡಿರಲಿಲ್ಲ. ಆದರೆ ಈಗ ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ನ್ಯಾಯಾಂಗವು ಮಧ್ಯಪ್ರವೇಶಿಸಲಿಲ್ಲ ಎಂದು ತಿಳಿಸಿದ್ದಾರೆ.
ಹೆರಾಲ್ಡ್ ಜಾಹೀರಾತಿಗಾಗಿ ಕೈನಿಂದ ಹಣ ಲೂಟಿ..
ಕಾಂಗ್ರೆಸ್ ಅಧಿಕಾರದಲ್ಲಿರುವ ತಮ್ಮ ತವರು ರಾಜ್ಯ ಹಿಮಾಚಲ ಪ್ರದೇಶದ ಬಗ್ಗೆ ಮಾತನಾಡಿದ ಅನುರಾಗ್ ಠಾಕೂರ್, ಕಾಂಗ್ರೆಸ್ ಪಕ್ಷವು ತನ್ನ 10 ಪ್ರಮುಖ ಭರವಸೆಗಳಲ್ಲಿ ಯಾವುದನ್ನೂ ಈಡೇರಿಸಿಲ್ಲ, ಆದರೆ ನ್ಯಾಷನಲ್ ಹೆರಾಲ್ಡ್‌ನಲ್ಲಿ ಜಾಹೀರಾತಿಗಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಆರೋಪಿಸಿದ್ದಾರೆ. ಹಿಮಾಚಲದಲ್ಲಿ ಯಾವುದೇ ಕಾಂಗ್ರೆಸ್ ನಾಯಕರು ಅಥವಾ ಸದಸ್ಯರು ಇದನ್ನು ಓದುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ವಿವಿಧ ಕಾಂಗ್ರೆಸ್ ಸರ್ಕಾರಗಳು ಖರ್ಚು ಮಾಡಿದ ಹಣದ ವಿವರಗಳನ್ನು ಪತ್ರಿಕೆಗಳಲ್ಲಿ ಜಾಹೀರಾತುಗಳಲ್ಲಿ ಜನರಿಗೆ ನೀಡಬೇಕು, ಅದು ಡಿಜಿಟಲ್ ರೂಪದಲ್ಲಿ ಲಭ್ಯವಿದೆ. ಇಡಿ ಕ್ರಮದ ವಿರುದ್ಧ ಕಾಂಗ್ರೆಸ್ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳನ್ನು ಆಯೋಜಿಸುತ್ತಿದೆ ಎಂದು ಅನುರಾಗ್ ಠಾಕೂರ್ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಕ್ಪ್ರಹಾರ ನಡೆಸಿದ್ದಾರೆ. ಇನ್ನೂ ಮೋದಿ ಸರ್ಕಾರ ವಿಪಕ್ಷಗಳನ್ನು ಹಣಿಯಲು ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸುವ ಮೂಲಕ ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.