Thursday, March 13, 2025

Latest Posts

ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ನಡೆದು ಬಂದ ದಾರಿ..

- Advertisement -

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ನಿನ್ನೆ ನಮ್ಮನ್ನ ಅಗಲಿದ್ದಾರೆ. ಎಷ್ಟೋ ಜನರಿಗೆ ಅನ್ನದಾತರಾಗಿದ್ದ, ಶ್ರೀಗಳನ್ನ ಕಳೆದುಕೊಂಡು ಅವರ ಭಕ್ತವೃಂದ ಅನಾಥವಾಗಿದೆ. ಜ್ಞಾನ ಯೋಗಾಶ್ರಮದ ಅಡಿಪಾಯದಂತಿದ್ದ ಶ್ರೀಗಳು ಎಲ್ಲರಿಗೂ ಮಾದರಿಯಾಗಿ ಜೀವನ ನಡೆಸುತ್ತಿದ್ದವರು. ಹೀಗೆ ಹಲವರಿಗೆ ಮಾದರಿಯಾಗಿದ್ದ ಶ್ರೀಗಳು ನಡೆದು ಬಂದ ದಾರಿ ಹೇಗಿತ್ತು ಅನ್ನೋದನ್ನ ನೋಡೋಣ ಬನ್ನಿ..

ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ವಿಜಯಪುರ ಜಿಲ್ಲೆಯ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ, 1941 ಅಕ್ಟೋಬರ್ 24ರಂದು ಜನಿಸಿದ್ದರು. ನಾಲ್ಕನೇಯ ತರಗತಿವರೆಗೆ ಓದಿದ್ದ ಶ್ರೀಗಳು ನಂತರ ಮಲ್ಲಿಕಾರ್ಜುನ ಸ್ವಾಮೀಜಿಗಳ ಜೊತೆ ಪ್ರವಚನಕ್ಕೆ ಹೋಗಲು ಪ್ರಾರಂಭಿಸಿದರು. ಅಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿಗಳು ನೀಡುವ ಪ್ರವಚನವನ್ನು ಕೇಳುತ್ತ, ಶ್ರೀಗಳ ಜ್ಞಾನ ಹೆಚ್ಚುತ್ತಾ ಹೋಯಿತು.

ಇದರೊಂದಿಗೆ ಬುದ್ಧಿವಂತರಾಗಿದ್ದ ಶ್ರೀ ಸಿದ್ದೇಶ್ವರರನ್ನ ಮಲ್ಲಿಕಾರ್ಜುನ ಸ್ವಾಮೀಜಿಗಳು ಶಾಲೆ ಮತ್ತು ಕಾಲೇಜಿಗೆ ಸೇರಿಸಿದರು. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದ ಶ್ರೀಗಳು, ಕೋಲ್ಹಾಪುರದಲ್ಲಿ ತತ್ವಶಾಸ್ತ್ರ ವಿಷಯದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಗಳಿಸಿದ್ದಾರೆ. ಹೀಗೆ ತನಗೆ ಬಂದ ಜ್ಞಾನ, ಇತರ ಮಕ್ಕಳಿಗೂ ಬರಲಿ ಎಂದು, ವಿಜಯಪುರ ಜಿಲ್ಲೆಯಲ್ಲಿ ಜ್ಞಾನಾಶ್ರಮವನ್ನ ತೆರೆಯಲಾಯಿತು.

ಈ ಜ್ಞಾನ ದೇಗುಲದಲ್ಲಿ, ಜ್ಞಾನ ದಾಸೋಹವನ್ನ ನೀಡುತ್ತಿದ್ದ ಶ್ರೀಗಳು, ಎಷ್ಟೋ ಮಕ್ಕಳು ಜೀವನ ಕಟ್ಟಿಕೊಳ್ಳಲು ಕಾರಣಕರ್ತರಾಗಿದ್ದಾರೆ. ತಾವು ಮಲ್ಲಿಕಾರ್ಜುನ ಸ್ವಾಮೀಜಿಗಳ ಆಶ್ರಯದಲ್ಲಿ ಬೆಳೆದ ಹಾಗೆ, ಇನ್ನೂ ಹಲವು ಮಕ್ಕಳನ್ನು ತಾನೂ ಉದ್ಧರಿಸಬೇಕು, ಅವರಿಗೂ ಜ್ಞಾನ ಹಂಚಬೇಕು ಅನ್ನೋ ಆಶಯದೊಂದಿಗೆ ಶ್ರೀಗಳು, ಜ್ಞಾನಾಶ್ರಮದ ಅಧ್ಯಕ್ಷರಾದ ಬಳಿಕ, ತಮ್ಮ ಗುರುಗಳ ಮಾರ್ಗದರ್ಶನದಲ್ಲೇ ಆಶ್ರಮದ ಚಟುವಟಿಕೆಗಳನ್ನ ಮುಂದುವರಿಸಿಕೊಂಡು ಹೋಗುತ್ತಿದ್ದರು.

ಶ್ರೀಗಳು ಕನ್ನಡ ಮಾತ್ರವಲ್ಲದೇ, ಹಿಂದಿ ಇಂಗ್ಲೀಷ್ ಭಾಷೆಯನ್ನ ಕೂಡ ನಿರರ್ಗಳವಾಗಿ ಮಾತನಾಡುವಷ್ಟು ಬುದ್ಧಿವಂತರಾಗಿದ್ದರು. ಶ್ರೀಗಳು ಪ್ರವಚನ ಕೆಲವರ ಜೀವನ ಬದಲಾಯಿಸುವಷ್ಟು ಶಕ್ತಿಯುತವಾಗಿತ್ತು. ಶ್ರೀಗಳ ಪ್ರಕಾರ ಹಣಕ್ಕಿಂತ ದೊಡ್ಡ ಸಂಪತ್ತೆಂದರೆ , ಪ್ರೇಮ. ಮನಸ್ಸಿನಲ್ಲಿರುವ ಮಧುರ ಭಾವನೆಗೂ ಮಿಗಿಲಾದ ಸಂಪತ್ತು ಇನ್ನೊಂದಿಲ್ಲ ಅನ್ನೋದು ಶ್ರೀಗಳ ಮಾತಾಗಿತ್ತು.

ಅಲ್ಲದೇ, ಎಷ್ಟೇ ಕಷ್ಟ ಬಂದರೂ ಜೀವನದಲ್ಲಿ ಸತ್ಯ ಹೇಳೋಕ್ಕೆ ಮಾತ್ರ ಹಿಂಜರಿಯಬೇಡಿ ಅಂತಾ ಹೇಳಿದ್ದಾರೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು. ಸತ್ಯ ಹೇಳುವವನ ಮುಖದಲ್ಲಿ ಕಳೆ ಇರುತ್ತದೆ, ಸುಳ್ಳು ಹೇಳುವವನು ಹಲವು ಉತ್ತಮ ವಿಚಾರಗಳಿಂದ ವಂಚಿತನಾಗುತ್ತಾನೆ. ಅವನಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಅನ್ನೋದು ಶ್ರೀಗಳ ಮಾತಾಗಿತ್ತು.

ಇನ್ನು ಶ್ರೀಗಳ ನಿಧನದ ಬಳಿಕ ಅವರೇ ಬರೆದ ಅಂತಿಮ ಅಭಿವಂದನಾ ಪತ್ರ ಬಿಡುಗಡೆ ಮಾಡಲಾಗಿದೆ.

ಅದರಲ್ಲಿ ಶ್ರೀಗಳು ಹೀಗೆ ಬರೆದಿದ್ದಾರೆ..

ಬದುಕು ಅನುಭವಗಳ ಪ್ರವಾಹ..

ಅದರ ಸಿರಿವಂತಿಕೆಯು ವಿಶ್ವಚಿಂತನೆ ಮತ್ತು ಸತ್ಯಶೋಧನೆಗಳಿಂದ.  ಅದರ ಸೌಂದರ್ಯವು ರಾಗ ದ್ವೇಷರಹಿತವಾದ ಮತ್ತು ಅಸೀಮಿತವಾದ ಸದ್ಭಾವದಿಂದ.

ಅದನ್ನ ಸುಭಗ ಹಾಗೂ ಸಮೃದ್ಧಗೊಳಿಸುವುದೇ ಸಾಧನೆ..

ಅಂಥ ಜೀವನದ ಉಪಯುಕ್ತವಾದ ಅನುಭವಗಳನ್ನ ಆಸಕ್ತರೊಂದಿಗೆ ಹಂಚಿಕೊಳ್ಳುವುದೇ ಧರ್ಮ. ಅದು ಸ್ವ-ಪರ ನೆಮ್ಮದಿಗೆ ಕಾರಣ.

ನನ್ನದು ಆವೇಗವಿಲ್ಲದ ಸಾವಧಾನದ ಸಾಮಾನ್ಯ ಬದುಕು..

ಅದನ್ನು ರೂಪಿಸಿದವರು ಗುರುದೇವರು. ಅದನ್ನ ಹದುಳಿಸಿದವರು ನಾಡಿನ ಪೂಜ್ಯರು, ಹಿತೈಷಿಗಳು, ಸ- ಹೃದಯರು,ಸಾಧಕರು ಮತ್ತು ಶ್ರೀ ಸಾಮಾನ್ಯರು..

ನಿಸರ್ಗವು ಮೈ ಮನಸ್ಸುಗಳಿಗೆ ತಂಪನ್ನಿತ್ತಿದೆ. ತಾತ್ವಿಕ ಚಿಂತನೆಗಳು ತಿಳಿ ಬೆಳಗ ಹರಡಿದೆ. ಜಾಗತಿಕ ತತ್ವಜ್ಞಾನಿಗಳ ಮತ್ತು ವಿಜ್ಞಾನಿಗಳ ಶೋಧನೆಗಳು, ದೃಷ್ಟಿಯ ಪರಿಸೀಮೆಯನ್ನ ದೂರ ದೂರ ಸರಿಸಿದೆ.

ಆದ್ದರಿಂದಲೇ ನಾನು ಎಲ್ಲರಿಗೂ ಎಲ್ಲದಕ್ಕೂ ಉಪಕೃತ.

ಬದುಕು ಮುಗಿಯುತ್ತದೆ, ದೀಪ ಆರಿದಂತೆ, ತೆರೆ ಅಡಗಿದಂತೆ, ಮೇಘ ಕರಗಿದಂತೆ.

ಉಳಿಯುವುದು ಬರೀ ಬಯಲು, ಮಹಾಮೌನ, ಶೂನ್ಯಸತ್ಯ..

ಹಲವು ದಶಕಗಳ ಕಾಲ ಈ ಅದ್ಭುತ ಜಗತ್ತಿನಲ್ಲಿ ಬಾಳಿದ್ದೇನೆ. ನೋಡಿ ತಿಳಿದು ಅನುಭವಿಸಿದ್ದೇನೆ. ನನ್ನ ಬದುಕು ಕೊನೆಗೊಳ್ಳುವ ಮುಂಚೆ, ಅದನ್ನು ಕೃತಜ್ಞತೆಯಿಂದ ಸ್ಮರಿಸಬೇಕು. ಅದಕ್ಕಾಗಿ ಈ ಅಂತಿಮ ಅಭಿವಾದನ ಪತ್ರ.

ದೇಹದ ವಿಷಯದಲ್ಲಿ ಒಂದೆರಡು ಆಶಯಗಳು..

ದೇಹವನ್ನ ಭೂಮಿಯಲ್ಲಿಡುವ ಬದಲು ಅಗ್ನಿಯರ್ಪಿತ ಮಾಡುವುದು..

ಶ್ರಾದ್ಧಿಕ ವಿಧಿ ವಿಧಾನ ಕರ್ಮಗಳು ಅನಗತ್ಯ

ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು.

ಯಾವುದೇ ಬಗೆಯ ಸ್ಮಾರಕ ನಿರ್ಮಿಸಲಾಗದು.

ಅಂತಿಮ ನೆನಹು..

ಸತ್ಯವೂ ಇಲ್ಲ. ಅಸತ್ಯವೂ ಇಲ್ಲ..

ಸಹಜವೂ ಇಲ್ಲ, ಅಸಹಜವೂ ಇಲ್ಲ..

ನಾನೂ ಇಲ್ಲ, ನೀನೂ ಇಲ್ಲ..

ಇಲ್ಲ ಇಲ್ಲ ಎಂಬುದು ತಾನಿಲ್ಲ.

ಗುಹೇಶ್ವರನೆಂಬುದು ತಾ ಬಯಲು..

ಅಂತ್ಯಃ ಪ್ರಣಾಮಾಂಜಲಿ..

ಸ್ವಾಮಿ ಸಿದ್ದೇಶ್ವರ..

ಈ ರೀತಿಯಾಗಿ ಗುರುಗಳು ಅರ್ಥಪೂರ್ಣವಾಗಿ ತಮ್ಮ ಅಂತಿಮ ಅಭಿವಂದನಾ ಪತ್ರವನ್ನು ಬರೆದಿದ್ದರು.

ಶ್ರೀಗಳು ಪ್ರತೀ ಬಾರಿ ಪ್ರವಚನ ಹೇಳುವಾಗ ಒಂದೊಂದು ಕಥೆಯನ್ನು ಹೇಳುವ ಮೂಲಕ ಜೀವನ ಪಾಠವನ್ನು ಹೇಳುತ್ತಿದ್ದರು. ಈ ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ. ಇಂದು ಇದ್ದದ್ದು ನಾಳೆ ಇರೋದಿಲ್ಲಾ. ಇವತ್ತು ನಮ್ಮ ಜೀವನದಲ್ಲಿ ಬಂದವರು ನಾಳೆ ಹೋಗ್ತಾರೆ. ಇಂದಿರುವ ವಸ್ತು ನಾಳೆ ನಮ್ಮ ಬಳಿಯೇ ಇರುತ್ತದೆ ಅನ್ನೋ ಗ್ಯಾರಂಟಿ ಇರೋದಿಲ್ಲಾ. ಹುಡುಗರು ಯುವಕರಾಗ್ತಾರೆ, ಯುವಕರು ಮುದುಕರಾಗ್ತಾರೆ, ಮುದುಕರು ಒಂದು ದಿನ ಈ ಪ್ರಪಂಚವನ್ನ ಬಿಟ್ಟು ಹೋಗೇ ಬಿಡ್ತಾರೆ. ಹಾಗಾಗಿ ಈ ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ.

ಇದ್ದಷ್ಟು ದಿನ ಪ್ರೀತಿ ಹಂಚಿ, ಪ್ರಾಮಾಣಿಕರಾಗಿ ಬದುಕಿ. ಸತ್ಯವನ್ನ ಹೇಳಿ, ದುಡ್ಡಿಗಿಂತ ಪ್ರೀತಿ ಗಳಿಸಿ, ನೆಮ್ಮದಿಯಾಗಿ ಬದುಕಿ ಅನ್ನೋದೇ ಶ್ರೀಗಳ ಮಾತಾಗಿತ್ತು.  ಈ ರೀತಿ ತಮ್ಮಲ್ಲಿರುವ ಜ್ಞಾನವನ್ನು ಒಂದಿಷ್ಟು ಜನರಿಗೆ ಹಂಚಿ, ಅವರ ಜೀವನದಲ್ಲಿ ಬೆಳಕು ತರುತ್ತಿದ್ದ ಶ್ರೀಗಳ ಅಗಲುವಿಕೆ ನಿಜಕ್ಕೂ ಈ ಸಮಾಜಕ್ಕೆ ಭರಿಸಲಾಗದ ನಷ್ಟ ಅಂತಾನೇ ಹೇಳಬಹುದು.

ಶಿಲ್ಪಕಲೆಯಲ್ಲಿ ಭಕ್ತಿ ಭಾವ ದೈವತ್ವ ತುಂಬುವ ಶಕ್ತಿಯೆ ಶಿಲ್ಪಿ:ಡಾ.ಹೆಚ್.ಎಲ್.ನಾಗರಾಜ್

‘ಜನಾರ್ಧನ ರೆಡ್ಡಿ ಕಟ್ಟಿದ ಹೊಸ ಪಕ್ಷ ಹೆಚ್ಚು ದಿನ ಅಸ್ತಿತ್ವದಲ್ಲಿರುವುದಿಲ್ಲ’

- Advertisement -

Latest Posts

Don't Miss