www.karnatakatv.net : ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಪಕ್ಷದ ಚಿಹ್ನೆ ಆಧಾರದ ಮೇಲೆ ಚುನಾವಣೆ ಎದುರಿಸಲು ಕಾಂಗ್ರೆಸ್ ಪಕ್ಷ ನಿರ್ಧಾರ ಕೈಗೊಂಡಿದೆ. ಆದರೆ ಟಿಕೇಟ್ ಹಂಚಿಕೆ ವಿಚಾರದಲ್ಲಿ ಇನ್ನೂ ಗೊಂದಲ ಮುಂದುವರಿದಿದ್ದು, ಬೆಂಗಳೂರಿನಿಂದ ಅಭ್ಯರ್ಥಿಗಳ ಅಂತಿಮ ಪಟ್ಟಿ ಬರುವ ಸಾಧ್ಯತೆಯಿದೆ.
ಹೌದು ಮಹಾನಗರ ಪಾಲಿಕೆ ಚುನಾವಣೆಯ ನಾಮಪತ್ರ ಸಲ್ಲಿಸಲು ಇನ್ನು ಕೇವಲ ಎರಡೇ ದಿನಗಳು ಮಾತ್ರ ಬಾಕಿಯಿದೆ. ಆದರೂ ಕೂಡ ಇನ್ನು ಅಭ್ಯರ್ಥಿಗಳು ಫೈನಲ್ ಆಗಿಲ್ಲ. ಹೀಗಾಗಿ ಕಾಂಗ್ರೆಸ್ ನಾಯಕರು ಶನಿವಾರ ಸಂಜೆ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಹತ್ವದ ಸಭೆ ನಡೆಸಿದರು.
ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ನಾನು ಬೆಳಗಾವಿ ಉಸ್ತುವಾರಿ ಸಚಿವನಾಗಿದ್ದಾಗ ಬಹಳಷ್ಟು ಕೆಲಸ ಆಗಿವೆ ಮತ್ತು ಹಿಂದೆ ಮಾಡಿದ ಅಭಿವೃದ್ಧಿ ಹಾಗೂ ಕಳೆದ ಐದು ವರ್ಷದ ಅವಧಿಯಲ್ಲಿ ಕೆಲಸ ಮಾಡಿದ್ದು ಸಾಕಷ್ಟಿದೆ ಅದೇ ರೀತಿ ಫಿರೋಜ್ ಸೇಠ್ ಅವರ ಜೊತೆಗೆ ಜಂಟಿಯಾಗಿ ಸಾಕಷ್ಟು ಕೆಲಸ ಮಾಡಿದ್ದೇವೆ. ಇದೇ ನಮಗೆ ಈ ಚುನಾವಣೆಯಲ್ಲಿ ಶ್ರೀರಕ್ಷೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಎಲ್ಲಾ ಶಾಸಕರನ್ನು ವಾರ್ಡ್ ಗಳಿಗೆ ನೇಮಿಸುವ ಅವಶ್ಯಕತೆ ಇಲ್ಲ. ಮತ ಹಾಕುವವರು ಸ್ಥಳೀಯರು. ಶಾಸಕರು ಹೋಗಿ ಏನೂ ಮಾಡಲು ಬರುವುದಿಲ್ಲ.
ನಮ್ಮ ಜೊತೆ ಕಾರ್ಯಕರ್ತರು, ಮುಖಂಡರಿದ್ದಾರೆ. ಹೀಗಾಗಿ ಸ್ಥಳೀಯ ಮುಖಂಡರ ಜೊತೆಗೆ ಚುನಾವಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಇನ್ನು ಎಂಇಎಸ್‍ನವರು ನಮ್ಮ ಪಕ್ಷದ ಟಿಕೇಟ್ ಕೇಳುವ ಪ್ರಶ್ನೆಯೇ ಬರುವುದಿಲ್ಲ. ಇದೊಂದು ಮೊದಲ ಟ್ರಯಲ್ ಆಂಡ್ ಎರರ್ ಇದಕ್ಕೆ ನಾವು ಸಿದ್ಧರಿದ್ದೆವೆ, ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ನಮಗಿದೆ ಅಂತ ಭರವಸೆ ವ್ಯಕ್ತಪಡಿಸಿದರು. ಇನ್ನು 2018ರಲ್ಲಿ ಬಿಜೆಪಿಯವರದ್ದು ಮಿಶನ್ 150 ಇತ್ತು. ಇದು ಹಾಗೇ, ಮಿಶನ್ ಇರುತ್ತದೆ. ಹೀಗಾಗಿ ಮಿಶನ್ 50 ಹೋಗಿ 5 ಬಂದ್ರೂ ಬರಬಹುದು ಎಂದು ಇದೇ ವೇಳೆ ಸತೀಶ ಜಾರಕಿಹೊಳಿ ಲೇವಡಿ ಮಾಡಿದರು. ಇನ್ನು ಇದೇ ವೇಳೆ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಮಾತನಾಡಿ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಲ್ಲಾ ವಾರ್ಡ್ ಗಳಲ್ಲಿ ಪಕ್ಷದ ಚಿಹ್ನೆ ಆಧಾರದ ಮೇಲೆ ಸ್ಪರ್ಧಿಸಲು ನಮ್ಮ ಪಕ್ಷ ನಿರ್ಧರಿಸಿದೆ.
ಕನಿಷ್ಠ 200 ಅರ್ಜಿ ಬಂದಿವೆ. ನಾವು ಎಲ್ಲಾ ಕುಳಿತುಕೊಂಡು ಸ್ಕ್ರೀನಿಂಗ್ ಮಾಡುತ್ತೇವೆ. ಯಾರಿಗೆ ಟಿಕೇಟ್ ನೀಡಬೇಕು, ಯಾವ್ಯಾವ ವಾರ್ಡ್ ಗಳಲ್ಲಿ ಯಾವ ರೀತಿಯ ತಂತ್ರಗಾರಿಕೆ ಮಾಡಬೇಕು ಅಂತ ನಿರ್ಧರಿಸುತ್ತೇವೆ ಎಂದರು. ಈ ವೇಳೆ ರಾಜ್ಯಸಭಾ ಸದಸ್ಯ ಎಲ್.ಹಣಮಂತಯ್ಯ,ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್,ಮಾಜಿ ಶಾಸಕ ಫಿರೋಜ್ ಸೇಠ್, ವಿನಯ್ ನಾವಲಗಟ್ಟಿ,ರಾಜು ಸೇಠ್ ಸೇರಿ ಇನ್ನಿತರ ನಾಯಕರು ಉಪಸ್ಥಿತರಿದ್ದರು.
ನಾಗೇಶ್ ಕುಂಬಳಿ ಕರ್ನಾಟಕ ಟಿವಿ ಬೆಳಗಾವಿ




