ಭೋಪಾಲ್: ಮಧ್ಯ ಪ್ರದೇಶದ ರೇವಾದಲ್ಲಿ ಮಹಿಳಾ ಪೊಲೀಸ್ ಪೇದೆ ಯುವಕನಿಂದ ತನ್ನ ಯೂನಿಫಾರ್ಮನ್ನ ಕ್ಲೀನ್ ಮಾಡಿಸಿಕೊಂಡಿದ್ದಲ್ಲದೇ, ಕೊನೆಗೆ ಆತನ ಕಪಾಳಕ್ಕೆ ಹೊಡೆದಿದ್ದಾರೆ. ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಆ ವ್ಯಕ್ತಿ ತನ್ನ ಗಾಡಿಯನ್ನ ಹಿಂದಿರುಗಿಸುವಾಗ, ಅಚಾನಕ್ಕಾಗಿ ಮಹಿಳಾ ಪೊಲೀಸ್ ಪೇದೆಯ ಯೂನಿಫಾರ್ಮ್‌ಗೆ ಕೆಸರು ಎರೆಚಿದೆ. ಆದರೆ ಈ ದೃಶ್ಯ ವೀಡಿಯೋದಲ್ಲಿ ಇಲ್ಲ. ಇನ್ನು ಕೆಸರು ಎರೆಚಿದ್ದಕ್ಕೆ ಸಿಟ್ಟಾದ ಪೊಲೀಸ್ ಪೇದೆ ತನ್ನ ಬಿಳಿ ಯೂನಿಫಾರ್ಮನ್ನು ಕ್ಲೀನ್ ಮಾಡಲು ಹೇಳಿದ್ದಾಳೆ. ಯುವಕ ಕೆಂಪು ಬಟ್ಟೆಯಿಂದ ಆಕೆಯ ಪ್ಯಾಂಟ್‌ಗೆ ತಾಗಿರುವ ಕೆಸರನ್ನು ಒರೆಸಿದ್ದಾನೆ.
ಕ್ಲೀನ್ ಮಾಡಿದರೂ ಕೂಡ ಪೊಲೀಸ್ ಪೇದೆ ಹೋಗುವಾಗ ಆತನ ಕಪಾಳಕ್ಕೆ ಹೊಡೆದು ಹೋಗಿದ್ದಾಳೆ. ಇನ್ನು ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಪೊಲೀಸ್ ಪೇದೆಯನ್ನ ಶಶಿಕಲಾ ಎಂದು ಗುರುತಿಸಲಾಗಿದೆ. ಈ ವೀಡಿಯೋ ನೋಡಿದ ಜನ ಮಹಿಳಾ ಪೊಲೀಸ್ ಪೇದೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆತ ಪ್ಯಾಂಟ್ ಕ್‌ಲೀನ್ ಮಾಡಿದರೂ, ಪೇದೆ ಈ ರೀತಿ ಧಿಮಾಕು ತೋರಿಸಬಾರದಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ರೇವಾ ಎಸ್‌ಪಿ ಶಿವ ಕುಮಾರ್, ನಾವು ವೀಡಿಯೋವನ್ನ ನೋಡಿದ್ದೇವೆ. ಮಹಿಳಾ ಪೊಲೀಸ್ ಪೇದೆ ತನ್ನ ಪ್ಯಾಂಟನ್ನ ಆ ವ್ಯಕ್ತಿಯಿಂದ ಕ್ಲೀನ್ ಮಾಡಿಸಿಕೊಂಡಿದ್ದಲ್ಲದೇ, ಆತನ ಕಪಾಳಕ್ಕೆ ಹೊಡೆದು ಹೋಗಿದ್ದಾರೆ. ಈ ಬಗ್ಗೆ ಯಾರಾದರೂ ದೂರು ನೀಡಿದರೆ, ನಾವು ಈ ಬಗ್ಗೆ ಖಂಡಿತ ಕ್ರಮ ತೆಗೆದುಕೊಳ್ಳುತ್ತೇವೆಂದು ಹೇಳಿದ್ದಾರೆ.