Wednesday, March 12, 2025

Latest Posts

Maharashtra News: ಹಿಂದೂಗಳೇ ಮಲ್ಹಾರ್‌ ಪ್ರಮಾಣೀಕರಣದ ಮಾಂಸ ತಿನ್ನಿ: ಸಚಿವ ರಾಣೆ ಕರೆ

- Advertisement -

Maharashtra News: ನಿರಂತರ ಹಿಂದುತ್ವದ ಬಗ್ಗೆ ಪ್ರತಿಪಾದಿಸುತ್ತಲೇ ಬಂದಿರುವ ಮಹಾರಾಷ್ಟ್ರದ ಬಿಜೆಪಿ ನಾಯಕ ಹಾಗೂ ಬಂದರು, ಮೀನುಗಾರಿಕೆ ಇಲಾಖೆ ಸಚಿವ ನಿತೇಶ್‌ ರಾಣೆ ಮಾಂಸದ ಮಾರಾಟದ ವಿಚಾರದಲ್ಲಿ ಮಾಡಿರುವ ಹೊಸ ನಿರ್ಧಾರವೊಂದು ವಿವಾದ ಭುಗಿಲೇಳುವಂತೆ ಮಾಡಿದೆ. ರಾಜ್ಯಾದ್ಯಂತ ಹಿಂದೂಗಳಿಂದ ಮಾತ್ರ ನಡೆಸಲ್ಪಡುವ ಮಾಂಸದ ಅಂಗಡಿಗಳಿಗೆ ನೂತನ ಪ್ರಮಾಣೀಕರಣವನ್ನು ರಾಣೆ ಘೋಷಿಸಿದ್ದಾರೆ. ಅಲ್ಲದೆ ಇದು ಮಹಾರಾಷ್ಟ್ರದ ಜಟ್ಕಾ ಮಟನ್ ಅಂಗಡಿಗಳಿಗೆ ಅನ್ವಯಿಸಲಿದ್ದು, ಅಲ್ಲಿ ಮಾರಾಟಗಾರರು ಮಲ್ಹಾರ್ ಪ್ರಮಾಣಪತ್ರವನ್ನು ಪಡೆಯಬೇಕು. ಮಲ್ಹಾರ್ ಸರ್ಟಿಫಿಕೇಶನ್.ಕಾಮ್ ವೇದಿಕೆಯ ಮೂಲಕ ಹಿಂದೂ ಸಮುದಾಯದ ಮಾಂಸ ಮಾರಾಟಗಾರರಿಗೆ ಮಾತ್ರ ಪ್ರಮಾಣೀಕರಣವನ್ನು ಒದಗಿಸಲಾಗುತ್ತದೆ.

ಇನ್ನೂ ಮಹಾರಾಷ್ಟ್ರದಲಿನ ಹಿಂದೂ ಸಮುದಾಯಕ್ಕಾಗಿ ನಾವು ಮುಖ್ಯವಾದ ಹೆಜ್ಜೆಯನ್ನು ಇಟ್ಟಿದ್ದೇವೆ. ಮಾಂಸದ ಕಲಬೆರಕೆ ಖಚಿತಪಡಿಸಲು ಮಲ್ಹಾರ್‌ ಪ್ರಮಾಣೀಕರಣವನ್ನು ಜಾರಿಗೆ ತರಲಾಗಿದೆ. ಅಲ್ಲದೆ ಇದರಿಂದ ನಾವೆಲ್ಲ ನಮ್ಮ ಹಕ್ಕಿನ ಮಾಂಸದ ಅಂಗಡಿಗಳಿಗೆ ಹೋಗಲು ಅನುಕೂಲವಾಗುತ್ತದೆ. ಈ ವ್ಯವಸ್ಥೆಯ ಅನ್ವಯ ಮಾಂಸ ಮಾರಾಟಗಾರರು, ಕತ್ತರಿಸುವವರು ಎಲ್ಲ ಹಿಂದೂಗಳೇ ಆಗಿರುತ್ತಾರೆ. ಇನ್ನೂ ಈ ನೂತನ ಪ್ರಯತ್ನದಿಂದ ಹಿಂದೂ ಯುವಕರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ಸಚಿವ ನಿತೀಶ್‌ ರಾಣೆ ಹೇಳಿದ್ದಾರೆ. ಅಲ್ಲದೆ ಎಲ್ಲರೂ ಮಲ್ಹಾರ್‌ ಪ್ರಮಾಣೀಕರಣವನ್ನು ಹೆಚ್ಚಾಗಿ ಬಳಕೆ ಮಾಡಬೇಕು. ಹಿಂದೂಗಳು ಯಾವುದೇ ಕಾರಣಕ್ಕೂ ಮಲ್ಹಾರ್‌ ಪ್ರಮಾಣೀಕರಣ ಇಲ್ಲದ ಅಂಗಡಿಗಳಿಂದ ಮಾಂಸವನ್ನು ಖರೀದಿಸಬಾರದು ಎಂದು ರಾಣೆ ಕರೆ ನೀಡಿದ್ದಾರೆ.

ಏನಿದು ಮಲ್ಹಾರ್‌ ಪ್ರಮಾಣೀಕರಣ..?

ಅಂದಹಾಗೆ ಮಲ್ಹಾರ್‌ ಪ್ರಮಾಣೀಕರಣದ ಅಡಿಯಲ್ಲಿ ಜಟ್ಕಾ ಮಟನ್ ಮತ್ತು ಕೋಳಿ ಮಾಂಸ ಮಾರಾಟಗಾರರಿಗೆ ಉತ್ತಮ ವೇದಿಕೆಯನ್ನು ರಚಿಸಲಾಗಿದೆ. ಹಿಂದೂ ಧಾರ್ಮಿಕ ಸಂಪ್ರದಾಯಗಳ ಪ್ರಕಾರ ಬಲಿ ನೀಡುವ ಮೇಕೆ ಮತ್ತು ಕುರಿ ಮಾಂಸವು ತಾಜಾ, ಶುದ್ಧ, ಲಾಲಾರಸದ ಮಾಲಿನ್ಯದಿಂದ ಮುಕ್ತವಾಗಿದೆ. ಅಲ್ಲದೆ ಯಾವುದೇ ಇತರ ಪ್ರಾಣಿಗಳ ಮಾಂಸದೊಂದಿಗೆ ಕಲಬೆರಕೆಯಾಗಿಲ್ಲ ಎಂಬುದನ್ನು ಈ ನೂತನ ಪ್ರಮಾಣೀಕರಣವು ಖಚಿತಪಡಿಸುತ್ತದೆ ಎಂದು ಮಲ್ಹಾರ್ ವೆಬ್‌ಸೈಟ್ ಹೇಳುತ್ತದೆ. ಇನ್ನೂ ಮೇಕೆ ಅಥವಾ ಕುರಿ ಮಾಂಸವನ್ನು ಶುದ್ಧವಾಗಿ ಜನರಿಗೆ ತಲುಪಿಸಲಾಗುತ್ತದೆ, ಹಿಂದೂ ಖಾಟಿಕ್ ಸಮುದಾಯದ ಮಾರಾಟಗಾರರ ಮೂಲಕ ಪ್ರತ್ಯೇಕವಾಗಿ ಈ ಮಾಂಸ ಲಭ್ಯವಿದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಮಹಾರಾಷ್ಟ್ರದಾದ್ಯಂತ 16 ಅಂಗಡಿಗಳನ್ನು ಈ ವೆಬ್‌ಸೈಟ್ ಪಟ್ಟಿ ಮಾಡಿದೆ.

ಇನ್ನೂ ಪ್ರಮುಖವಾಗಿ ಬಿಜೆಪಿ ಸರ್ಕಾರದ ಆಡಳಿತವಿರುವ ರಾಜ್ಯಗಳಲ್ಲಿ ಹಲಾಲ್‌ ಕಟ್‌ ವಿರುದ್ಧ ಅಭಿಯಾನಗಳು ನಡೆಯುತ್ತಿವೆ. ಆದರೆ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ಅಧಿಕಾರದಲ್ಲಿದ್ದು, ಇದೇ ವಿಚಾರಕ್ಕೆ ಸಚಿವ ರಾಣೆ ಹಾಗೂ ಬಿಜೆಪಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಶರದ್‌ ಪವಾರ್‌ ಬಣದ ಎನ್‌ಸಿಪಿ ನಾಯಕ ಡಾ.ಜಿತೇಂದ್ರ ಅವ್ಹಾದ್‌, ಬಿಜೆಪಿಯು ಕ್ಷುಲ್ಲಕ ರಾಜಕಾರಣಕ್ಕೆ ಮುಂದಾಗಿದೆ. ಅಲ್ಲದೆ ಇದು ಬಜೆಟ್‌ನಲ್ಲಿನ ತೋಪಿನಂತೆ ಕಂಡು ಬರುತ್ತಿದೆ ಎಂದು ಟೀಕಿಸಿದ್ದಾರೆ.

ಒಟ್ನಲ್ಲಿ.. ಮುಸ್ಲಿಂರನ್ನೇ ಗುರಿಯಾಗಿಸಿಕೊಂಡು ನಿತೇಶ್‌ ರಾಣೆ ಜಾರಿಗೆ ತಂದಿರುವ ಮಲ್ಹಾರ್‌ ಪ್ರಮಾಣೀಕರಣವು ಎಷ್ಟರ ಮಟ್ಟಿಗೆ ಅಲ್ಲಿನ ಹಿಂದೂಗಳಿಗೆ ಮಾಂಸದಲ್ಲಿನ ಕಲಬೆರಕೆಯನ್ನು ತಡೆಯಲು ಸಾಧ್ಯವಾಗುತ್ತದೆ ಅನ್ನೋದು ಕುತೂಹಲ ಮೂಡಿಸಿದೆ. ಮಾಂಸದ ವಿಚಾರದಲ್ಲಿ ರಾಜಕಾರಣಕ್ಕೆ ಇಳಿದಿರುವ ಬಿಜೆಪಿಯ ನಡೆಯು ನಿಜಕ್ಕೂ ಮಾನವೀಯತೆ ದೃಷ್ಟಿಯಿಂದ ಪ್ರಶ್ನಾರ್ಹವಾಗಿದೆ. ಅಲ್ಲದೆ ಭಾರತದಂತಹ ಸರ್ವ ಧರ್ಮಗಳನ್ನು ಗೌರವಿಸುವ ದೇಶದಲ್ಲಿ ತಿನ್ನುವ ಆಹಾರದ ವಿಚಾರದಲ್ಲಿಯೂ ರಾಜಕಾರಣ ನಡೆಯುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಅಷ್ಟಕ್ಕೂ ಗುಣ ಮಟ್ಟದ ಮಾಂಸ ಪಡೆಯಲು, ಕಲಬೆರಕೆ ತಡೆಯಲು ಹಲವಾರು ಮಾರ್ಗಗಳಿವೆ. ಅವುಗಳನ್ನು ಮಹಾರಾಷ್ಟ್ರ ಸರ್ಕಾರ ಅಳವಡಿಸಿಕೊಳ್ಳಬಹುದಿತ್ತೇನೋ.. ಆದರೆ ಈ ರೀತಿಯಾಗಿ ವಿವಾದಾತ್ಮಕ ನಿರ್ಧಾರದಿಂದ ಕೋಮು ಸಂಘರ್ಷಕ್ಕೆ ಸರ್ಕಾರವೇ ಕಾರಣವಾಗುವುದರಲ್ಲಿ ಅನುಮಾನವೇ ಇಲ್ಲ.

- Advertisement -

Latest Posts

Don't Miss