Political News: ನಿನ್ನೆ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಹಾಲಿನ ದರ ಹೆಚ್ಚಳಕ್ಕೆ ಅನುಮತಿ ಸಿಕ್ಕಿದ್ದು, ಇದೀಗ ಇನ್ನು ಕೆಲವೇ ದಿನಗಳಲ್ಲಿ ಸಿಎಂ ಹಾಲಿನ ದರ ಹೆಚ್ಚಳದ ಬಗ್ಗೆ ಘೋಷಣೆ ಮಾಡುವ ಎಲ್ಲಾ ಸಾಧ್ಯತೆಗಳಿದೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಸಿ.ಟಿ.ರವಿ, ಬಡವರ, ಮಧ್ಯಮ ವರ್ಗದವರ ಜೀವನವನ್ನು ದುಸ್ತರವಾಗಿಸುವುದೇ ಕಾಂಗ್ರೆಸ್ ಸರ್ಕಾರದ ಏಕೈಕ ಗ್ಯಾರಂಟಿ! ಕಾಂಗ್ರೆಸ್ ಸರ್ಕಾರದ ಹಣಕಾಸು ವೈಫಲ್ಯದಿಂದ ಸರ್ಕಾರದ ಎಲ್ಲ ಹೊರೆಯೂ ಜನರ ಹೆಗಲಿಗೇರುತ್ತಿದೆ. ನಂದಿನಿ ಹಾಲಿಗೆ ಪ್ರತಿ ಲೀಟರ್‌ಗೆ ಎಂಟು ರೂಪಾಯಿ ಹೆಚ್ಚಳಕ್ಕೆ ಸರ್ಕಾರ ನಿರ್ಧರಿಸಿದೆ. ಮಧ್ಯಮ ವರ್ಗದ ಜನರು ಹಾಲು ಖರೀದಿಸುವುದೇ ಕಷ್ಟವಾಗುವಂತೆ ಸರ್ಕಾರ ಮಾಡಿದೆ ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಇತಿಹಾಸದಲ್ಲಿ ಯಾವ ಸರ್ಕಾರವೂ ಇಷ್ಟರಮಟ್ಟಿಗೆ ಹಾಲಿನ ದರ ಹೆಚ್ಚಿಸಿರಲಿಲ್ಲ. ಡಿ.ಕೆ.ಶಿವಕುಮಾರ್ ಸರ್ಕಾರ ಈ ಸಾಧನೆಯನ್ನೂ ಮಾಡಿಬಿಟ್ಟಿದೆ. ಇದು ಸಾಲದೆಂಬಂತೆ ಸಾರಿಗೆ ನಿಗಮಗಳ ಬಸ್ ದರವನ್ನೂ 10ರಿಂದ 13% ಹೆಚ್ಚಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಮಧ್ಯಮ ವರ್ಗದ ಜನರ ಬದುಕನ್ನು ದುರ್ಬರವಾಗಿಸಿ, ಅವರು ಬೀದಿಗಿಳಿಯುವಂತೆ ಮಾಡದೆ ಕಾಂಗ್ರೆಸ್ ಸರ್ಕಾರ ವಿರಮಿಸುವುದಿಲ್ಲ ಎಂದು ರವಿ ಹೇಳಿದ್ದಾರೆ.
ಬಸ್ ಪ್ರಯಾಣ ದರ, ವಿದ್ಯುತ್ ಶುಲ್ಕ, ಪೆಟ್ರೋಲ್ – ಡೀಸೆಲ್ ಮೇಲೆ ತೆರಿಗೆ, ಮೆಟ್ರೋ ಪ್ರಯಾಣ, ಹೀಗೆ ಎಲ್ಲವನ್ನೂ ಸರ್ಕಾರ ಏರಿಸಿಯಾಗಿದೆ. ಅಧಿಕಾರದಿಂದ ಇಳಿಯುವ ಮುನ್ನ, ಉಸಿರಾಡುವುದಕ್ಕೂ ಇವರು ತೆರಿಗೆ ವಿಧಿಸಿದರೆ ಆಶ್ಚರ್ಯವಿಲ್ಲ! ಎಂದು ಸಿ.ಟಿ.ರವಿ ಹೇಳಿದ್ದಾರೆ.




