Political News: ಚಿಕ್ಕಮಗಳೂರು ನಗರದಲ್ಲಿ ಬಾಲಕರು ಬೈಕ್ ಮೇಲೆ ಪ್ಯಾಲೇಸ್ತೀನ್ ಭಾವುಟ ಹಿಡಿದು ಓಡಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಬಾಂಬ್‌ವೊಂದನ್ನು ಸಿಡಿಸಿದ್ದಾರೆ.
ಮಲೆನಾಡು ಇದೀಗ ಸ್ಲೀಪರ್ ಸೆಲ್‌ಗಳ ತಾಣವಾಗುತ್ತಿದೆ. ಭಯೋತ್ಪಾದಕ ಕೃತ್ಯ ಎಸಗಲು ಇಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಈ ವೇಳೆ ರಾಜ್ಯ ಸರ್ಕಾರದ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹಾಡ ಹಗಲೇ ಬೈಕ್ ಮೇಲೆ ಬಾಲಕರು ಪ್ಯಾಲೇಸ್ತೀನ್ ಬಾವುಟ ಹಿಡಿದು ಓಡಾಡುತ್ತಾರೆ ಅಂದರೆ, ಮಲೆನಾಡು ಅಕ್ಷರಶಃ ಸ್ಲೀಪರ್ ಸೆಲ್‌ಗಳ ತಾಣವಾಗುತ್ತಿದೆ. ಟೆರರಿಸಂ ಕೃತ್ಯಗಳಿಗೆ ಇಲ್ಲಿ ಟ್ರೈನಿಂಗ್ ಕೂಡ ನೀಡಲಾಗುತ್ತಿದೆ. ಈ ಹಿಂದೆ ಕೊಪ್ಪದಲ್ಲಿ ಯಾಸೀನ್ ಭಟ್ಕಳ್ ನೇತೃತ್ವದಲ್ಲಿ ಭಯೋತ್ಪಾದಕ ತರಬೇತಿ ಶಿಬಿರ ನಡೆಸಲಾಗುತ್ತಿತ್ತು. ಅದನ್ನ ಬಜರಂಗದಳ ಪತ್ತೆ ಮಾಡಿತ್ತು. ಇದು ದೇಶಕ್ಕೆ ಅತ್ಯಂತ ಅಪಾಯಕಾರಿ. ಇದರ ಹಿಂದಿನ ಜಾಲವನ್ನ ತನಿಖೆಯಿಂದ ಪತ್ತೆ ಹಚ್ಚಬೇಕು. ದೇಶ ವಿರೋಧಿ ಚಟುವಟಿಕೆ ನಡೆಸಿದವರನ್ನ ಸಮಗ್ರ ತನಿಖೆ ನಡೆಸಬೇಕಿತ್ತು. ಆದರೆ ಯಾರೋ ಪ್ರಭಾವಿಗಳು ಹೇಳಿದ್ದಾರೆಂದು ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದಾರೆ, ಇದು ಸರಿಯಲ್ಲ ಅಂತ ಸಿ.ಟಿ.ರವಿ ಹೇಳಿದ್ದಾರೆ.
ಇನ್ನು, ಇದೇ ವೇಳೆ ಬಿಜೆಪಿ ಶಾಸಕ ಮುನಿರತ್ನ ಅವರ ಬಂಧನ ಪ್ರಕರಣ ಕುರಿತಂತೆ ಮಾತಾಡಿರುವ ಸಿ.ಟಿ.ರವಿ, ಮುನಿರತ್ನ ಆಡಿಯೋ ಪ್ರಕರಣದ ಹಿಂದೆ ಟೂಲ್ ಕಿಟ್ ಕೆಲಸ ಮಾಡಿದೆ. ಹನಮಂತಪ್ಪ ಆಡಿಯೋದಿಂದ ಇದು ಸಾಬೀತಾಗಿದೆ. ಕಾಂಗ್ರೆಸ್ ತಮ್ಮ ಪಕ್ಷದವರಿಗೆ ಒಂದು ನ್ಯಾಯ, ಬಿಜೆಪಿಗೆ ಒಂದು ನ್ಯಾಯ ಅನ್ನೋ ನೀತಿ ಅನುಸರಿಸುತ್ತಿದ್ದಾರೆ. ಕಾಂಗ್ರೆಸ್ ಶಾಸಕ ಚೆನ್ನರೆಡ್ಡಿ ಮೇಲೂ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಆತನನ್ನು ಬಂಧಿಸುವ ಬದಲು ಸಿಎಂ ತಮ್ಮ ಮನೆಯಲ್ಲಿ ಬಿರಿಯಾನಿ ಊಟ ಹಾಕಿಸಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.