Movie News: ಕೇರಳ ಸಿನಿಮಾ ಇಂಡಸ್ಟ್ರಿಯಲ್ಲಿ ನಡೆದ ಹೇಮಾ ಸಮಿತಿ ವರದಿಯಂತೆ ಕನ್ನಡ ಚಿತ್ರರಂಗದಲ್ಲೂ ಒಂದು ಸಮಿತಿ ರಚಿಸಿ, ನಟಿಯರು ಹಾಗು ಕಲಾವಿದೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಕುರಿತು ವರದಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಈ ಹಿಂದೆ ಫೈರ್ ಸಂಸ್ಥೆ ಮೂಲಕ ಸಿಎಂ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಸೋಮವಾರ ಫಿಲ್ಮ್ ಚೇಂಬರ್ ನಲ್ಲಿ ಸಭೆ ನಡೆಸಲಾಗಿದೆ. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಅವರ ಸಮ್ಮುಖದಲ್ಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಪರ-ವಿರೋಧ ಚರ್ಚೆಗಳೂ ನಡೆದವು. ನಿರ್ಮಾಪಕ ಪ್ರವೀಣ್ ಕುಮಾರ್ ಮಾತನಾಡಿ, ನಮಗೂ ಹೆಣ್ಣು ಮಕ್ಕಳ ಮೇಲೆ ಕಾಳಜಿ ಇದೆ. ಚಿತ್ರರಂಗದಲ್ಲಿ ಸಮಸ್ಯೆಗಳು ಇವೆ. ಇಲ್ಲ ಅಂತ ಹೇಳುತ್ತಿಲ್ಲ. ವಾಣಿಜ್ಯ ಮಂಡಳಿ ಯಾರಿಗೂ ತೊಂದರೆ ಆಗಬಾರದು ಅಂತ ಕೆಲಸ ಮಾಡುತ್ತಿದೆ. ಇಷ್ಟು ವರ್ಷ ಇಲ್ಲದಿರುವುದು ಈಗ್ಯಾಕೆ ಎಂದು ಪ್ರಶ್ನಿಸಿರುವ ಅವರು, ನಮ್ಮಲ್ಲಿ ಸಿನಿಮಾ ಇಂಡಸ್ಟ್ರಿ ಅನ್ನೋದಿಲ್ಲ. ಇಂಡಸ್ಟ್ರಿ ಅನ್ನೋದು ಮೊದಲು ಆಗಬೇಕು. ಕ್ಯಾರವ್ಯಾನ್ ಸಮಸ್ಯೆಗಳ ಬಗ್ಗೆಯೂ ಚರ್ಚೆಯಾಗಿದೆ. ನಾವು ಯಾವ ಕಮಿಟಿಯನ್ನು ವಿರೋಧಿಸಿಲ್ಲ. ಯಾವುದನ್ನು ಮಾಡಬೇಕು. ಯಾವುದನ್ನು ಮಾಡಬಾರದು ಅಂತ ಯೋಚಿಸಿದ್ದೇವೆ. ಸರ್ಕಾರ ಅವರ ತೀರ್ಮಾನ ಹೇಳಲಿ. ನಾವು ನಮ್ಮ ಅಭಿಪ್ರಾಯ ಹೇಳಿದ್ದೇವೆ. ಇದುವರೆಗೂ ಕಮಿಟಿಗಳು ಇರಲಿಲ್ಲ. ಈಗ ಯಾಕೆ ಎಂದಿರುವ ಪ್ರವೀಣ್ ಕುಮಾರ್ ಅವರು ಕಮಿಟಿ ಬಗ್ಗೆ ಪರೋಕ್ಷವಾಗಿ ಬೇಡ ಎಂದಿದ್ದಾರೆ.
ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್. ಎಂ. ಸುರೇಶ್ ಮಾತನಾಡಿ, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರು, ಮಹಿಳಾ ಶೋಷಣೆ ಬಗ್ಗೆ ದನಿ ಎತ್ತಿದ್ದಾರೆ. ಅವರು ಒಟ್ಟು 17 ಅಂಶಗಳನ್ನು ನೀಡಿದ್ದು, ಕೊಟ್ಟು ಉತ್ತರ ಕೊಡಿ ಅಂತ ಕೇಳಿದ್ದಾರೆ.
ಅಧ್ಯಕ್ಷನಾಗಿ ನನಗೂ ಕಣ್ತೆರೆಸುವಂತಾಗಿದೆ. ಇದೇ ಮೊದಲ ಬಾರಿ ಮಹಿಳಾ ಆಯೋಗ ಬಂದಿದೆ. ನಾಗಲಕ್ಷ್ಮಿ ಮೇಡಂ ಸಭೆಯಲ್ಲಿ ಭಾಗಿಯಾಗಿ ಸಮಗ್ರವಾಗಿ ಚರ್ಚೆ ಮಾಡಿದ್ದಾರೆ. ನಿರ್ಮಾಪಕರು, ಎಕ್ಸಿಕ್ಯೂಟಿವ್ ಸಮಸ್ಯೆ, ನಟಿಯರಿಗೆ ಆಗ್ತಿರುವ ಸಮಸ್ಯೆ ಬಗ್ಗೆ ಚರ್ಚಿಸಲಾಗಿದೆ. ಅವರು ಕೊಟ್ಟಿರುವ ಪಾಯಿಂಟ್ ಕೊಟ್ಟಿರೊ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ವಾಣಿಜ್ಯ ಮಂಡಳಿ 85 ವರ್ಷಗಳ ಇತಿಹಾಸ ಹೊಂದಿದೆ. 18-20 ಅಂಗ ಸಂಸ್ಥೆಗಳ ಹೊಂದಿದೆ. ಏನೇ ರಚನೆ ಆದರೂ ಅದು ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ಆಗಬೇಕು ಎಂದಿದ್ದಾರೆ ಅವರು.
ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಮಾತನಾಡಿ, ಸಿನಿಮಾ ರಂಗಕ್ಕೆ ಹೋಗಲಿ ಅಂತ ಯಾವ ಪೇರೆಂಟ್ಸ್ ಬಯಸಲ್ಲ ಯಾಕೆ..? ಸುರಕ್ಷಿತವಾಗಿ ಇರ್ತಾಳಾ ಇಲ್ವಾ ಅನ್ನೋದು ಪೋಷಕರ ಪ್ರಶ್ನೆ. ಹೀಗಾಗಿ ಈ ಕುರಿತು ಸೆಕ್ಯೂರ್ ಇರಬೇಕು ಎಂಬ ಭಾವನೆ ಬರುವ ಹಾಗೆ ಆಗಬೇಕು ಎಂಬ ಕುರಿತು ಚರ್ಚೆ ಮಾಡಿದ್ದಾರೆ. ಬರೀ ಕಲಾವಿದರಷ್ಟೇ ಅಲ್ಲ, ಇಲ್ಲಿ ಕಾಸ್ಟ್ಯೂಮರ್ ಇಂದ ಹಿಡಿದು ಎಲ್ಲರೂ ಬರ್ತಾರೆ. ಅವರ ಬಗ್ಗೆಯೂ ಕಾಳಜಿ ಇರಬೇಕು. ಹೆಚ್ಚು ಕಲಾವಿದರು ಬಂದಿಲ್ಲ. ಮುಂದಿನ ಸಭೆಯಲ್ಲಿ ಬಹಳಷ್ಟು ಕಲಾವಿದರು ಭಾಗಿಯಾಗಬೇಕು. ಸೆಟ್ಟಲ್ಲಿ ಕೆಲಸ ಮಾಡುವಾಗ ಸುರಕ್ಷಿತ ಭಾವನೆ ಮೂಡಬೇಕು. ಈ ಕುರಿತು ಸರ್ವೇ ಮಾಡಬೇಕಾಗುತ್ತೆ. ಒಂದಷ್ಟು ಪಾಯಿಂಟ್ಸ್ ಹಾಕಿದ್ದೇವೆ ಅದಕ್ಕೆ ಉತ್ತರ ಕೊಡಬೇಕು ಎಂದಿದ್ದಾರೆ.
ಇನ್ನು ನಟಿ ತಾರಾ, ಸಭೆಯ ಮಧ್ಯೆ ಎದ್ದು ಹೊರನಡೆದಿದ್ದಕ್ಕೆ ಕಾರಣವೇನು ಎಂದರೆ, ನಮಗೆ ಕಮಿಟಿ ಬೇಡ. ಹಿಂದೆ ಹೀಗೆಲ್ಲ ಇರಲಿಲ್ಲ . ಈಗ ಯಾಕೆ? ಸೋ ಯಾರೋ ಮಾಡಿದ ಸಂಸ್ಥೆ ಹೇಳಿದರೆ ಕೇಳಬೇಕಾ? ಇತಿಹಾಸದ ಚಿತ್ರರಂಗವಿದು ಹಿಂದೆ ಸಮಸ್ಯೆ ಇರಲಿಲ್ಲ. ಈಗ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಅಂತ ಬೇರೆ ನಟಿಯರ ವಿರುದ್ಧ ಆರೋಪ ಮಾಡಿರುವ ನಟಿ ತಾರಾ, ಸಭೆಯಿಂದ ಹೊರನಡೆದಿದ್ದಾರೆ.