Sandalwood News: ಬೆಂಗಳೂರು: ಮಾರ್ಚ್ 1 ರಂದು ನಡೆಯಲಿರುವ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಸಂಜೆ 5 ಗಂಟೆಗೆ ವಿಧಾನ ಸೌಧದ ಮುಂಭಾಗ ನಡೆಯಲಿರುವ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನಟ ಡಾ.ಶಿವರಾಜಕುಮಾರ್ ಅವರು ಈ ವೇಳೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಕಟಿಸಿರುವ ಐದು ಪುಸ್ತಕಗಳನ್ನು ಹಾಗೂ ಚಿತ್ರೋತ್ಸವದ ಕೈಪಿಡಿಯನ್ನು ಬಿಡುಗಡೆ ಮಾಡಲಿದ್ದಾರೆ. ಇನ್ನು, ಈ ಬಾರಿಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿ ಕಿಶೋರ್ ಕುಮಾರ್ ಜಿ, ಪೋಲೆಂಡ್ ರಾಯಭಾರಿ ಮೌಗುಜ್ಹಾತ ವೈಸಿಸ್ ಗೋವಿನ್ಟಿಯಾಖ್, ನಟಿ ಪ್ರಿಯಾಂಕ ಮೋಹನ್ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಾರ್ಚ್ 2ರಂದು ಒರಾಯನ್ ಮಾಲ್ ನ 11 ಸ್ಕ್ರೀನ್ ಗಳಲ್ಲಿ ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ. ಕಲಾವಿದರ ಸಂಘ ಹಾಗು ಸುಚಿತ್ರಾ ಫಿಲಂ ಸೊಸೈಟಿ ಚಿತ್ರಮಂದಿರಗಳಲ್ಲೂ ಪ್ರದರ್ಶನ ನಡೆಯಲಿದೆ. ಒಟ್ಟು ಒಂಬತ್ತು ಪರದೆಗಳಲ್ಲಿ ದಿನವೊಂದಕ್ಕೆ 45 ಸಿನಿಮಾಗಳು ಪ್ರದರ್ಶನಗೊಳ್ಳಲ್ಲಿವೆ. ಏಳು ದಿನಗಳಲ್ಲಿ ಸುಮಾರು 300 ರಿಂದ 400 ಪ್ರದರ್ಶನಗಳು ಕಾಣಲಿದ್ದು, 200 ಕ್ಕೂ ಹೆಚ್ಚು ದೇಶ, ವಿದೇಶಗಳ ಜನಪ್ರಿಯ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಕೆಲವು ಸಿನಿಮಾಗಳಿಗೆ ಒಂದು ಶೋ, ಕೆಲವು ಸಿನಿಮಾಗಳಿಗೆ ಎರಡು ಶೋ ವ್ಯವಸ್ಥೆ ಮಾಡಲಾಗಿದೆ.
ಈಗಾಗಲೇ ಮೂರು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ, ಮೊದಲನೆಯ ದಿನವೇ 500 ನೋಂದಣಿಯಾಗಿದ್ದು, ದಾಖಲೆ. ಚಿತ್ರೋತ್ಸವದ ಅಂಗವಾಗಿ ನಡೆಯುತ್ತಿರುವ ಮಾಸ್ಟರ್ ಕ್ಲಾಸ್ ವಿಭಾಗದಲ್ಲಿ ಸಿನಿಮಾದ ಹೊಸ ಆಯಾಮಗಳ ಬಗ್ಗೆ ಚರ್ಚೆ ಇರುತ್ತದೆ. ಓಟಟಿ ಕ್ಷೇತ್ರದ ಮುಖ್ಯಸ್ಥ ಶಿಜು ಪ್ರಭಾಕರನ್, ಜೀ ಎಂಟರ್ ಟೈನ್ ಮೆಂಟ್ ನ ಸುಗತ ಮುಖರ್ಜಿ, ಸೋನಿ ಲೈವ ಕಂಟೆಂಟ್ ನ ಮುಖ್ಯಸ್ಥ ಮತ್ತು ನಿರ್ಮಾಪಕ , ವಿತರಕ ಮುಖೇಶ್ ಆರ್. ಮೆಹೆತಾ ಇತರರು ನಿರ್ಮಾಪಕರು ಎದುರಿಸುತ್ತಿರುವ ಸವಾಲು ಮತ್ತು ಚಿತ್ರಗಳನ್ನು ವಿತರಿಸುವಾಗ ಎದುರಾಗುವ ಸಮಸ್ಯೆಗಳ ಕುರಿತು ಮಾತನಾಡಲಿದ್ದಾರೆ.
ಮಹಿಳಾ ಚಿತ್ರಗಳ ಬಗ್ಗೆ ವಿಶೇಷ ಸಂವಾದ ನಡೆಯಲಿದ್ದು, ನಟಿ ರಮ್ಯಾ, ನಂದಿನಿ ರೆಡ್ಡಿ ಅವರು ಮಾತನಾಡಲಿದ್ದಾರೆ. ಕನ್ನಡ ಸಿನಿಮಾಗಳ ಆರ್ಥಿಕ ಸ್ಥಿತಿಗತಿ ಕುರಿತು ಚರ್ಚೆ, ಸೃಜನಾತ್ಮಕ ಬೆಳವಣಿಗೆ ಹಾಗು ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ಚರ್ಚೆ, ಕನ್ನಡ ಚಿತ್ ನಿರ್ಮಾಪಕರಿಗೆ ಅನುಕೂಲವಾಗುವಂತೆ ಓಟಿಟಿ ವೇದಿಕೆಯನ್ನು ನಿರ್ಮಾಪಕರ ಹಿತದೃಷ್ಠಿಯಿಂದ ಸ್ಥಾಪಿಸುವ ಕುರಿತು ಚರ್ಚೆ ನಡೆಯಲಿದೆ.
ಇನ್ನು, ವಿಶ್ವ ಕನ್ನಡ ಸಿನಿಮಾ ದಿನವನ್ನು ಈ ಬಾರಿ ಆಚರಿಸುತ್ತಿದ್ದು, ಮಾರ್ಚ್ 3 ರಂದು ವಿಶ್ವ ಕನ್ನಡ ಸಿನಿಮಾ ದಿನವನ್ನು ಒರಾಯನ್ ಮಾಲ್ ನ ಸ್ಕ್ರೀನ್ 11ರಲ್ಲಿ ಏರ್ಪಡಿಸಲಾಗಿದೆ. ಕನ್ನಡದ ಮೊದಲ ವಾಕ್ಚಿತ್ರ ಸತಿ ಸುಲೋಚನಾ ಬಿಡುಗಡೆಯಾದ ದಿನವನ್ನಾಗಿ ಏರ್ಪಡಿಸಿರುವ ಸಮಾರಂಭದಲ್ಲಿ ನಟ ಸೃಜನ್ ಲೋಕೇಶ್ ಭಾಗವಹಿಸಲಿದ್ದಾರೆ. ಸತಿ ಸುಲೋಚನಾ ಚಲನಚಿತ್ರದ ಗೀತೆಗಳನ್ನು ಹಿರಿಯ ರಂಗಗಾಯಕ ಲಕ್ಷ್ಮಣದಾಸ್ ಪ್ರಸ್ತುತ ಪಡಿಸಲಿದ್ದಾರೆ. ಕನ್ನಡದ ಮೊದಲ ವಾಕ್ಚಿತ್ರದ ನಿರ್ದೇಶಕ ವೈ.ವಿ.ರಾವ್ ಅವರ ಮೊಮ್ಮಕ್ಕಳು ಹಾಗು ಚಿತ್ರ ಸಾಹಿತಿ ಬೆಳ್ಳಾವಿ ನರಹರಿ ಶಾಸ್ತ್ರಿ ಅವರ ಮೊಮ್ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ. ಈ ಬಾರಿ ಉದ್ಘಾಟನಾ ಸಿನಿಮಾ ಹಿಂದಿಯ ಪಯರ್ ಪ್ರದರ್ಶನವಾಗಲಿದೆ. ಜೊತೆಗೆ ಈ ಸಲ ಗುರುದತ್, ಶ್ಯಾಮ್ ಬೆನಗಲ್, ರಿತ್ವಿಕ್ ಘಟಕ್, ಕುಮಾರ್ ಸಾಹನಿ ಅವರ ಸ್ಮರಿಸಲಾಗುವುದು.
ವಿಜಯ್ ಭರಮಸಾಗರ್, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ