ತಮಿಳುನಾಡಿನಲ್ಲಿ ನಟ ವಿಜಯ್ ಅವರ ರಾಜಕೀಯ ಅಲೆ ಭಾರೀ ಸದ್ದು ಮಾಡ್ತಿದೆ. ಇದೀಗ ಕರ್ನಾಟಕದಲ್ಲೂ ಅದೇ ಪ್ರಶ್ನೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಯಾರು ಮುಂದಿನ ಲೀಡರ್? ಬಹು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಕುರಿತು ನಟಿ ರಾಗಿಣಿ ದ್ವಿವೇದಿ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕದಲ್ಲಿಯೂ ವಿಜಯ್ ರೀತಿಯಲ್ಲಿ ಇನ್ನಷ್ಟು ಸಿನಿಮಾ ತಾರೆಗಳು ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಗಿಣಿ ದ್ವಿವೇದಿ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಲ್ಲಿರುವ ನಟರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ವಿಶೇಷವಾಗಿ ನಟರಾದ ದರ್ಶನ್ ತೂಗುದೀಪ, ಸುದೀಪ್ ಮತ್ತು ಯಶ್ ಅವರ ಹೆಸರುಗಳು ಈ ಚರ್ಚೆಯಲ್ಲಿ ಮುಂಚೂಣಿಯಲ್ಲಿವೆ. ʼಮನಸ್ಸು ಮಾಡಿದರೆ ಯಾರು ಬೇಕಾದರೂ ಏನನ್ನಾದರೂ ಸಾಧಿಸಬಹುದು. ಈ ಎಲ್ಲ ನಟರಿಗೂ ಸಾಮರ್ಥ್ಯ ಇದೆ. ಒಳ್ಳೆಯ ಉದ್ದೇಶದಿಂದ ಜನಸೇವೆ ಮಾಡಿದರೆ ರಾಜಕೀಯದಲ್ಲಿ ಯಶಸ್ಸು ಸಾಧ್ಯʼ ಎಂದು ರಾಗಿಣಿ ದ್ವಿವೇದಿ ಹೇಳಿದ್ದಾರೆ. ಅವರು ಮುಂದುವರೆದು ತಮ್ಮ ವೈಯಕ್ತಿಕ ರಾಜಕೀಯ ನಿಲುವಿನ ಬಗ್ಗೆ ಮಾತನಾಡಿದ್ದು, ಸದ್ಯಕ್ಕೆ ನೇರ ರಾಜಕೀಯ ಪ್ರವೇಶದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಗಿಣಿ ದ್ವಿವೇದಿ ಅವರ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಸಿನಿಮಾ ಮತ್ತು ರಾಜಕೀಯದ ನಡುವಿನ ಸಂಬಂಧ ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದೆ.




