Political News: ಬೆಂಗಳೂರಿನಲ್ಲಿ ಮೆಟ್ರೋ ದರ ಹೆಚ್ಚಾಗಿದ್ದು, ಜನ ಸಾಮಾನ್ಯರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೀಗ ಸಂಸದ ತೇಜಸ್ವಿ ಸೂರ್ಯ ಕೂಡ ಈ ಬಗ್ಗೆ ಮಾಧ್ಯಮದ ಜೊತೆ ಮಾತಾನಾಡಿದ್ದು, ಅಸಮಾಧಾನ ಹೊರಹಾಕಿದ್ದಾರೆ.
2023 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪ್ರತಿಯೊಂದು ಇಲಾಖೆಗಳಲ್ಲಿಯೂ ಬೆಲೆ ಏರಿಕೆ ಸಾಮಾನ್ಯವಾಗಿದೆ. ಬಿಎಂಟಿಸಿ ಪ್ರಯಾಣ ದರ, ವಿದ್ಯುತ್ ಬಿಲ್, ಆಸ್ತಿ ತೆರಿಗೆ, ಅಬಕಾರಿ ಸುಂಕ ಹೀಗೆ ಪ್ರತಿಯೊಂದರ ಬೆಲೆ ಏರಿಕೆಯಾಗಿದೆ. ಪ್ರಸ್ತುತ ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಕುರಿತು ದರ ನಿಗದಿ ಸಮಿತಿ ರಚಿಸಲು ಮತ್ತು ಇದರ ಸಂಪೂರ್ಣ ಪ್ರಕ್ರಿಯೆಯನ್ನು ಪ್ರಾರಂಭಿಸಲು BMRCL ಗೆ ರಾಜ್ಯ ಸರ್ಕಾರ ಸಲಹೆ ನೀಡಿದ್ದು, ಸಮಿತಿಯಲ್ಲಿನ ರಾಜ್ಯ ಪ್ರತಿನಿಧಿಗಳ ಪ್ರಯಾಣದ ದರ ಏರಿಕೆಯ ಒತ್ತಾಯದ ಮೇರೆಗೆ ಪರಿಷ್ಕೃತ ದರದ ವರದಿಯನ್ನು ಬಿಡುಗಡೆ ಮಾಡಲಾಗಿದೆ.
ಪ್ರಯಾಣದ ದರ ಏರಿಕೆಯಿಂದ ಬೆಂಗಳೂರಿನ ಜನತೆಗೆ ಉಂಟಾಗುವ ತೊಂದರೆಗಳ ಅರಿತು ಬಿಜೆಪಿ ದರ ಏರಿಕೆಯನ್ನು ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದೆ. ಮಾನ್ಯ ಮುಖ್ಯಮಂತ್ರಿಗಳಿಗೆ ಈ ಸಮಸ್ಯೆ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಪರಿಷ್ಕೃತ ದರಗಳ ಏರಿಕೆಯನ್ನು ಮರು ಪರಿಶೀಲಿಸಿ ನ್ಯಾಯಸಮ್ಮತ ದರ ನಿಗದಿಪಡಿಸಲು ನೆರವಾಗಬೇಕು. ಬೆಂಗಳೂರಿನ ಸಂಸದರು ಹಾಗೂ ದರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ತೊಡಗಿರುವ ಕೇಂದ್ರ ಸರ್ಕಾರದ ಅಧಿಕಾರಿಗಳು ಬೆಂಗಳೂರಿನ ಜನರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯದಲ್ಲಿ ತಮಗೆ ಸಲಹೆ ಮತ್ತು ಸಹಕಾರ ನೀಡಲು ಸಿದ್ದರಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಬೆಂಗಳೂರು ಮೆಟ್ರೋ ಪ್ರಯಾಣ ದೇಶದಲ್ಲಿಯೇ ಅತ್ಯಂತ ದುಬಾರಿ ಮೆಟ್ರೋ ಪ್ರಯಾಣ ಎಂಬ ಅಪಕೀರ್ತಿಗೆ ಭಾಜನವಾಗಿರುವುದು ದುರಾದೃಷ್ಟಕರ ಸಂಗತಿ. ಸರ್ಕಾರದ ಉದ್ದೇಶ ಜನರು ವಯಕ್ತಿಕ ವಾಹನಗಳನ್ನು ತೊರೆದು ಸಾರ್ವಜನಿಕ ವಾಹನಗಳನ್ನು ಬಳಸುವಂತಿರಬೇಕು. ಆದರೆ ಪ್ರಸ್ತುತ ರಾಜ್ಯ ಸರ್ಕಾರದ ನಿರ್ಣಯದಿಂದ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯಿಂದ ಬಿಎಂಟಿಸಿ ಹಾಗೂ ಮೆಟ್ರೋ ಪ್ರಯಾಣವನ್ನು ಅವಲಂಬಿಸಿದ್ದ ಮಧ್ಯಮ ವರ್ಗದ ಜನರು ಖಾಸಗಿ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಈ ಕೂಡಲೇ ಪರಿಷ್ಕೃತ ದರಗಳ ಏರಿಕೆಯನ್ನು ಮರು ಪರಿಶೀಲಿಸಿ ನ್ಯಾಯಸಮ್ಮತ ದರ ನಿಗದಿಪಡಿಸಬೇಕೆಂದು ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ ಎಂದು ಜನ ಸಾಮಾನ್ಯರ ಪರ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಸರ್ಕಾರದ ಅವಧಿಯಲ್ಲಿ ಬೆಲೆ ಏರಿಕೆ ಎಂಬುದು ಸಾಮಾನ್ಯ ಸಂಗತಿಯಾಗಿದೆ. ಆಸ್ತಿ ತೆರಿಗೆ, ವಾಹನ ನೋಂದಣಿ ಶುಲ್ಕ, ಆಸ್ಪತ್ರೆ ಸೇವಾ ಶುಲ್ಕ, ಕಾಲೇಜು ಶುಲ್ಕ, ನೀರು ಮತ್ತು ವಿದ್ಯುತ್ ದರ, ಹಾಲಿನ ದರ, ಅಬಕಾರಿ ಸುಂಕ ಸೇರಿದಂತೆ ಇತರ ವಲಯಗಳ ಬೆಲೆ ಏರಿಕೆ ನಂತರ ಪ್ರಸ್ತುತ ಮೆಟ್ರೋ ಟಿಕೆಟ್ ದರಗಳು ಸಹ ದುಪ್ಪಟ್ಟಾಗಿವೆ. ಮಾನ್ಯ ಮುಖ್ಯಮಂತ್ರಿಗಳಿಗೆ ಜನರ ಬಗ್ಗೆ ಕಾಳಜಿ ಇದ್ದಲ್ಲಿ ಈ ಕೂಡಲೇ ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಕುರಿತು ದರ ನಿಗದಿ ಸಮಿತಿಯನ್ನು ಪುನರ್‌ರಚಿಸಿ ಮೆಟ್ರೋ ಪ್ರಯಾಣ ದರವನ್ನು ಮತ್ತೆ ಮಧ್ಯಮ ವರ್ಗದವರಿಗೆ ಕೈಗೆಟುಕುವಂತೆ ಮಾಡಲು ಪ್ರಯತ್ನಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.




