ಉದ್ಯೋಗ ಖಾತ್ರಿ ಯೋಜನೆಯಡಿ ನಿರಂತರವಾಗಿ ಕೆಲಸ ಮಾಡಿದ್ದರೂ ಸಹ ಹದಿನೈದರಿಂದ ಇಪ್ಪತ್ತು ದಿನ ಕಳೆದರೂ ನಿಮ್ಮ ಬ್ಯಾಂಕ್ ಖಾತೆಗೆ ಇನ್ನೂ ಹಣ ಬಂದಿಲ್ಲವೇ? ಹಾಗಾದರೆ ಬಡ ಕಾರ್ಮಿಕರು ಕಡ್ಡಾಯವಾಗಿ ತಿಳಿದುಕೊಳ್ಳಲೇಬೇಕಾದ ಮಹತ್ವದ ಸುದ್ದಿ ಇಲ್ಲಿದೆ. ಇನ್ನು ಮುಂದೆ ಬಡ ಕಾರ್ಮಿಕರು ಕೆಲಸ ಮಾಡಿದರೂ ಸಕಾಲಕ್ಕೆ ಕೂಲಿ ಹಣ ಕೈ ಸೇರದಿದ್ದರೆ ಅದಕ್ಕೆ ಸ್ಥಳೀಯ ಪಿಡಿಒ ಅಧಿಕಾರಿಗಳೇ ನೇರ ಹೊಣೆಗಾರರಾಗಲಿದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಸಚಿವರು, ಖಾಸಗಿ ಕೆಲಸಗಳಿಗೆ ವಾರಕ್ಕೊಮ್ಮೆ ತಪ್ಪದೆ ಕೂಲಿ ಹಣ ಸಿಗುತ್ತದೆ. ಆದರೆ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹದಿನೈದರಿಂದ ಇಪ್ಪತ್ತು ದಿನಗಳಾದರೂ ಹಣ ಬಾರದಿದ್ದರೆ ಬಡ ಕಾರ್ಮಿಕರು ಕೆಲಸಕ್ಕೆ ಬರಲು ಸಹಜವಾಗಿಯೇ ಹಿಂಜರಿಯುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಗರಿಷ್ಠ 7 ರಿಂದ 10 ದಿನಗಳ ಒಳಗಾಗಿಯೇ ಕೂಲಿ ಹಣ ಕಾರ್ಮಿಕರ ಬ್ಯಾಂಕ್ ಖಾತೆ ಸೇರುವಂತೆ ಅಧಿಕಾರಿಗಳು ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದಾರೆ.
ಇದೇ ವೇಳೆ, ಚಾಮರಾಜನಗರ ಜಿಲ್ಲೆಯಲ್ಲಿ ಪಿಡಿಒಗಳ ಲಾಗಿನ್ನಲ್ಲೇ ಬರೋಬ್ಬರಿ 57 ಲಕ್ಷ ರೂಪಾರಿಗಳಿಗೂ ಅಧಿಕ ಕೂಲಿ ಹಣ ಬಾಕಿ ಉಳಿದುಕೊಂಡಿರುವುದಕ್ಕೆ ಸಚಿವರು ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ, ಚಾಮರಾಜನಗರ ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ ಟ್ಯಾಕ್ಟರ್ ಉಳುಮೆ ಮಾಡಿದ ಬಂಜರು ಭೂಮಿಯಲ್ಲಿ ಜನರನ್ನು ಕೂರಿಸಿ ನಕಲಿ ಮಾನವ ದಿನಗಳನ್ನು ಸೃಷ್ಟಿಸಿ ಬೋಗಸ್ ಬಿಲ್ ಮಾಡಿರುವ ಗಂಭೀರ ಅಕ್ರಮದ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿ, ಈ ಕುರಿತು ಕೂಡಲೇ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಆದೇಶಿಸಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಯಾವುದೇ ಕಾರಣಕ್ಕೂ ಬೋಗಸ್ ಬಿಲ್ ಸೃಷ್ಟಿ ಹಾಗೂ ಕಳಪೆ ಕಾಮಗಾರಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಗಡಿ ಜಿಲ್ಲೆಯಾದ ಚಾಮರಾಜನಗರದಿಂದ ಬಡ ಜನರು ಉದ್ಯೋಗ ಅರಸಿ ಬೇರೆ ಪ್ರದೇಶಗಳಿಗೆ ಗುಳೆ ಹೋಗುವುದನ್ನು ಸಂಪೂರ್ಣವಾಗಿ ತಡೆಯಬೇಕು ಎಂದು ಅವರು ತಿಳಿಸಿದ್ದಾರೆ. ಸ್ಥಳೀಯ ಮಟ್ಟದಲ್ಲೇ ನಿರುದ್ಯೋಗಿಗಳಿಗೆ ಕೆಲಸ ನೀಡುವುದರ ಜೊತೆಗೆ ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಶಾಶ್ವತ ಆಸ್ತಿಗಳನ್ನು ನಿರ್ಮಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಒಟ್ಟಾರೆಯಾಗಿ, ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ಯಾವುದೇ ಲೋಪದೋಷಗಳು ಕಂಡುಬಂದರೂ ಇನ್ನು ಮುಂದೆ ಮುದಾಕ್ಷಿಣ್ಯವಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ಸಚಿವರ ಈ ದಿಟ್ಟ ಹೆಜ್ಜೆಯು ಗ್ರಾಮೀಣ ಪ್ರದೇಶದ ಬಡ ಕಾರ್ಮಿಕರಿಗೆ ಕಾಲಮಿತಿಯೊಳಗೆ ಕೂಲಿ ಹಣ ಸಿಗುವಂತೆ ಮಾಡುವಲ್ಲಿ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಲಾಗಿದೆ.




