ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ವಿಷಯ ಸಂಬಂಧ ರಾಜ್ಯಪಾಲರು ಕೇಳಿದ್ದ ಪ್ರಶ್ನೆಗಳಿಗೆ ಸುದೀರ್ಘ ಹಾಗೂ ಸಮರ್ಪಕ ಸ್ಪಷ್ಟನೆಗಳೊಂದಿಗೆ ಕಡತವನ್ನು ಮತ್ತೆ ರಾಜ್ಯಪಾಲರ ಅನುಮೋದೆಗಾಗಿ ಕಳುಹಿಸಿದೆ. .
ಸಾಲ ಪಡೆದವರ ಮೇಲೆ ಮೈಕ್ರೋ ಫೈನಾನ್ಸ್ ಕಂಪನಿಗಳು ಮತ್ತು ಖಾಸಗಿ ವ್ಯಕ್ತಿಗಳಿಂದ ನಡೆಯುತ್ತಿರುವ ಕಿರುಕುಳ ತಪ್ಪಿಸಲು ರಾಜ್ಯ ಸರ್ಕಾರ ಕಳುಹಿಸಿದ್ದ ಕರ್ನಾಟಕ ಕಿರುಸಾಲ ಮತ್ತು ಸಣ್ಣ ಸಾಲ ಸುಗ್ರೀವಾಜ್ಞೆ-2025ಕ್ಕೆ ಸ್ಪಷ್ಟನೆ ಕೋರಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶುಕ್ರವಾರ ವಾಪಸ್ ಕಳುಹಿಸಿದ್ದರು. ಇದು ಸುಗ್ರೀವಾಜ್ಞೆಯು ಸಹಜ ಹಾಗೂ ಸಾಲ ನೀಡುವವರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೇ ರಾಜ್ಯಪಾಲರು ಎತ್ತಿದ್ದ ಎಲ್ಲಾ ಪ್ರಶ್ನೆಗಳಿಗೂ ಸುದೀರ್ಘ ಸ್ಪಷ್ಟನೆಯನ್ನು ಕಾನೂನು ಇಲಾಖೆ ಸಿದ್ಧಪಡಿಸಿ ಮುಖ್ಯಮಂತ್ರಿ ಕಚೇರಿಗೆ ಸಲ್ಲಿಸಿದ್ದು. ಇದನ್ನು ಮುಖ್ಯಮಂತ್ರಿಗಳು ಪರಾಮರ್ಶಿಸಿ ಅಂತಿಮಗೊಳಿಸಿದ ಬಳಿಕ ಸ್ಪಷ್ಟನೆಗಳೊದಿಗೆ ಸುಗ್ರೀವಾಜ್ಞೆಯ ಕಡತವನ್ನು ಸೋಮವಾರ ರಾಜಭವನಕ್ಕೆ ರವಾನಿಸಿ ಅನುಮೋದನೆ ಕೋರಿದ್ದಾರೆ.
ವಿವರವಾದ ಸ್ಪಷ್ಟನೆಗಳೊಂದಿಗೆ ಈ ಸುಗ್ರೀವಾಜ್ಞೆ ಅಗತ್ಯತೆ, ಅನಿವಾರ್ಯತೆಯ ಕುರಿತು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಸರ್ಕಾರ ಮಾಡಿದ್ದು, ಇದಕ್ಕೆ ರಾಜ್ಯಪಾಲರು ಅನುಮೋದನೆ ನೀಡುತ್ತಾರೆಯೇ ಎಂಬುದು ಈಗ ಕುತೂಹಲ ಮೂಡಿಸಿದೆ.